ಮಾನಸಿಕ ಅಸ್ವಸ್ಥತೆಯು ಹೃದಯದಿಂದಲ್ಲ, ಮೆದುಳಿನಲ್ಲಿನ ರಾಸಾಯನಿಕ ಬದಲಾವನೆಗಳಿಂದ ಉಂಟಾಗುತ್ತದೆ. ಮನಸ್ಥಿತಿ ಸುಧಾರಿಸಿದರೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಚಿಕ್ಕಮಗಳೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ, ಮನೋವೈದ್ಯೆ ಡಾ||ಅನ್ನಪೂರ್ಣಗುರುಪ್ರಸಾದ್ ಅಭಿಪ್ರಾಯಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘ ಚಿಕ್ಕಮಗಳೂರು ಗೃಹಮಂಡಳಿ ಬಡಾವಣೆಯ ಶರಣೆ ನೀಲಮ್ಮ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಆಯೋಜಿಸಿದ್ದ ಭಾದ್ರಪದ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ನಿನ್ನೆ ಮಾತನಾಡಿದರು.
ಮಹಿಳೆ ಮತ್ತು ಮಾನಸಿಕ ಆರೋಗ್ಯ ಇಂದು ಪ್ರಮುಖವಾದ ಸಂಗತಿ. ಮಹಿಳೆಯರು ಮನೆ ಮತ್ತು ಹೊರಗಿನ ಕೆಲಸದ ಒತ್ತಡದಿಂದಾಗಿ ಜರ್ಝರಿತಾಗಿರುತ್ತಾರೆ. ಕುಟುಂಬದ ಪಾಲನೆ ಪೋಷಣೆ ನಡುವೆ ತನ್ನ ಸುಸ್ಥಿತಿಯ ಬಗ್ಗೆ ನಿರ್ಲಕ್ಷ್ಯತಾಳುತ್ತಾಳೆ. ದೀರ್ಘಾವಧಿಯಲ್ಲಿ ಮಾನಸಿಕ ತೊಂದರೆಗೆ ಇದು ಕಾರಣವಾಗುತ್ತದೆ ಎಂದರು.
ವ್ಯಕ್ತಿಯು ಅವನಲ್ಲಿರುವ ಸಾಮಥ್ರ್ಯವನ್ನು ಗುರುತಿಸಿಕೊಳ್ಳಬಲ್ಲ, ಜೀವನದ ಸಹಜ ಒತ್ತಡದೊಂದಿಗೆ ಸಮರ್ಥವಾಗಿ ನಿಭಾಯಿಸಬಲ್ಲ, ಉತ್ಪಾದನಾತ್ಮಕವಾಗಿ ಮತ್ತು ಪ್ರಯೋಜನಕರವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಮುದಾಯಕ್ಕೆ ಕೊಡುಗೆ ಕೊಡಬಲ್ಲ ಆರೋಗ್ಯಕರವಾದ ಸ್ಥಿತಿಯನ್ನು ‘ಮಾನಸಿಕ ಆರೋಗ್ಯ’ವೆಂದು ವಿಶ್ವ ಆರೋಗ್ಯಸಂಸ್ಥೆಯು ವ್ಯಾಖ್ಯಾನಿಸಿದೆ ಎಂದರು.
ಸಾಮಾನ್ಯವಾಗಿ ಖಿನ್ನತೆಗೆ ಹೆಚ್ಚಿನ ಮಹಿಳೆಯರು ತುತ್ತಾಗಿರುತ್ತಾರೆ. ಅನಗತ್ಯ ಆತಂಕ-ಗಾಬರಿಗೊಳ್ಳುವುದು, ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ಯಾವುದೇ ಕೆಲಸದಲ್ಲಿ ಆಸಕ್ತಿ ಉಳಿದಿರುವುದಿಲ್ಲ. ನಿರ್ವಹಿಸಿದ ಕಾರ್ಯದಲ್ಲಿ ವಿಶ್ವಾಸವಿರುವುದಿಲ್ಲ. ಗೀಳುರೋಗವೂ ಹೌದು. ಪದೇ ಪದೇ ಕೈತೊಳೆಯುವುದು, ಒಂದೇರೀತಿಯ ಕೆಲಸದಲ್ಲಿ ತೊಡಗುವುದು, ಸಣ್ಣಪುಟ್ಟ ಸಾಮಗ್ರಿಗಳನ್ನು ಕೂಡಿಡುವುದು, ಅನಗತ್ಯ ವ್ಯಾಮೋಹ ಇವೆಲ್ಲವೂ ಮಾನಸಿಕ ತೊಂದರೆ ಲಕ್ಷಣಗಳೆಂದು ಪಟ್ಟಿಮಾಡಿದ ಡಾ.ಅನ್ನಪೂರ್ಣ, ಇಂತಹ ಸ್ಥಿತಿಯಲ್ಲಿರುವವರು ಮಾನಸಿಕ ತಜ್ಞರನ್ನು ಭೇಟಿಮಾಡಿ ಸಮಾಲೋಚಿಸಿದರೆ ಸೂಕ್ತ ಪರಿಹಾರ ಸಿಗುತ್ತದೆ ಎಂದರು.
ಪ್ರಸವದ ನಂತರ ಬರುವ ಬಾಣಂತಿಯರಿಗೆ ಖಿನ್ನತೆಯನ್ನು ಸನ್ನಿ ಎಂದು ಗುರುತಿಸಲಾಗುವುದು. ಕೆಲವೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸುವ ಮನಸ್ಥಿತಿಯನ್ನು ಕೆಲವರು ತಾಳುತ್ತಾರೆ. ದೇಹದ ಬದಲಾವಣೆಗಳು ಇದಕ್ಕೆ ಕಾರಣ. 45ವಯಸ್ಸಿನ ನಂತರ ಸಾಮಾನ್ಯವಾಗಿ ಮಹಿಳೆಯರಿಗೆ ಮನೋಪಾಸ್ ಕಾಡುತ್ತದೆ. ಪದೇ ಪದೇ ಸಿಟ್ಟು, ಸೆಡವು, ಕೋಪ, ಅಸಹನೆ ತೋರುತ್ತಾರೆ. ಈ ಸಂದರ್ಭದಲ್ಲಿ ತಾಳ್ಮೆ ಮತ್ತು ಸಹನೆಯಿಂದ ವರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಎಂದರು.
ಮಾನಸಿಕ ಖಿನ್ನತೆಯಿಂದ ಹೊರಬರಲು ಒಳ್ಳೆಯ ಹವ್ಯಾಸಗಳು ಸಹಕಾರಿ. ಹಿತವಾದ ಸಂಗೀತ ಕೇಳುವುದು, ವಾದ್ಯಗೋಷ್ಠಿ ಆಲಿಸುವುದು, ಸತ್ಸಂಗದಲ್ಲಿ ಪಾಲ್ಗೊಳ್ಳುವುದು ಮನಸ್ಸಿನ ಪ್ರಫುಲ್ಲತೆಗೆ ಅನುಕೂಲಕರ. ದೈಹಿಕ ಚಟುವಟಿಕೆಗಳು, ಸಾವಧಾನತೆ, ಉತ್ತಮನಿದ್ರೆ, ಆರೋಗ್ಯಕರ ಆಹಾರ, ಸಾಮಾಜಿಕ ಬೆಂಬಲ, ಆನಂದದಾಯಕ ಚಟುವಟಿಕೆಗಳು ಜೊತೆಗೆ ವೃತ್ತಿಪರರ ಸಹಾಯ ಉತ್ತಮ ಮಾನಸಿಕ ಆರೋಗ್ಯಕ್ಕೆ ಅಗತ್ಯ ಎಂದರು.
ಯೋಗ, ಧ್ಯಾನ, ಪ್ರಾರ್ಥನೆ, ಲಘುವ್ಯಾಯಾಮ, ನಡಿಗೆಯಂತಹ ಸದಭ್ಯಾಸವನ್ನು ಜೀವನದ ಭಾಗವಾಗಿ ರೂಢಿಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ನುಡಿದ ಡಾ||ಅನ್ನಪೂರ್ಣ, ಮಹಿಳೆಯರಿಗೆ ತಿಳುವಳಿಕೆ ನೀಡುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಉಪಯುಕ್ತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಆಶಾಮಲ್ಲೇಶ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲರೂ ಒಟ್ಟಾಗಿ ಸೇರಿದಾಗ ಸಂಘದ ಕಾರ್ಯಚಟುವಟಿಕೆ ಸುಗಮವಾಗಿ ನಡೆಸಲು ಸಾಧ್ಯ. ಇದಕ್ಕೆ ಎಲ್ಲರಸದಸ್ಯರ ತನು-ಮನ-ಧನದ ಸಹಕಾರ, ಸಲಹೆ ಅಗತ್ಯ ಎಂದರು.
ತಂಡದ ಮುಖಂಡೆ ವಿಶಾಲಯೋಗೀಶ್ ಪ್ರಾಸ್ತಾವಿಸಿ ಮನೆಯ ಜವಾಬ್ದಾರಿ ಜೊತೆಗೆ ಪ್ರತಿತಿಂಗಳು ಸಾಂಸ್ಕøತಿಕ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ, ಸಂತೋಷ ಹಂಚಿಕೊಳ್ಳುತ್ತೇವೆ. ಸುಪ್ತ ಪ್ರತಿಭೆ ಅನಾವರಣಕ್ಕೆ ಈ ವೇದಿಕೆ ಅವಕಾಶ ನೀಡುತ್ತಿದÉ. ಮೂರುವರ್ಷ ತಂಡದ ಉಪಾಧ್ಯಕ್ಷೆಯಾಗಿ ಕೆಲಸಮಾಡಿದ್ದು, ಮುಂದೆಯೂ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಗೌರವಾಧ್ಯಕ್ಷೆ ಭಾರತಿಶಿವರುದ್ರಪ್ಪ ಮಾತನಾಡಿದರು. ಕಾರ್ಯದರ್ಶಿ ಆಶಾಹೇಮಂತ್, ಸಹಕಾರ್ಯದರ್ಶಿ ಮಧುಮತಿಶಿವಕುಮಾರ್ ವೇದಿಕೆಯಲ್ಲಿದ್ದರು.
ಸದಸ್ಯರಾದ ಸಂಧ್ಯಾನಟರಾಜ್ ಸ್ವಾಗತಿಸಿ, ಶೋಭಾಸತೀಶ್ ವಂದಿಸಿದರು. ಭಾಗ್ಯಚಂದ್ರಶೇಖರ್ ನಿರೂಪಿಸಿ, ಶ್ವೇತಾ ಸತೀಶ್ ಅತಿಥಿಪರಿಚಯಿಸಿದರು. ಅನುಸೂಯ ತಂಡ ಪ್ರಾರ್ಥಿಸಿದ್ದು, ಕಲ್ಪನಾ ಮತ್ತು ಉಷಾ ತಂಡ ನಾಡಗೀತೆ ಹಾಡಿದರು.
ವೀಣಾಮಲ್ಲಿಕಾರ್ಜುನ್ ಮತ್ತು ಶೀಲಾ ತಂಡದ ಜಾನಪದನೃತ್ಯ ಗಮನಸೆಳೆಯಿತು. ವಿವಿಧ ಆಟೋಟ ಸ್ಪರ್ಧಾವಿಜೇತರಿಗೆ ವಿಶಾಲಯೋಗೀಶ್ ಬಹುಮಾನ ವಿತರಿಸಿದರು.



