ನಾವು ಸ್ವಚ್ಛತೆಗೆ ಆದ್ಯತೆ ನೀಡಿದಷ್ಟೂ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಮೂಡಿಗೆರೆ ಎಂ.ಜಿ.ಎಂ. ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕ ತಿಳಿಸಿದರು.
ಅವರು ಮಂಗಳವಾರ ಮೂಡಿಗೆರೆ ಜೇಸಿ ಭವನದಲ್ಲಿ ಜೇಸಿಐ ಮೂಡಿಗೆರೆ ಸಂಸ್ಥೆಯವರು ಹಮ್ಮಿಕೊಂಡಿರುವ ಪ್ರತಿಷ್ಠ ಜೇಸಿ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘ ಸಂಸ್ಥೆಗಳು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕಡೆ ಹೆಚ್ಚಿನ ಆದ್ಯತೆ ನೀಡಬೇಕು. ಮಲೆನಾಡು ಭಾಗದಲ್ಲಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಹೆಚ್ಚಾದಂತೆ ಕಸದ ರಾಶಿಗಳು ಹೆಚ್ಚಾಗುತ್ತಿದೆ. ರಸ್ತೆಬದಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳು ಕಂಡುಬರುತ್ತಿವೆ. ಇದರಿಂದ ನಮ್ಮ ಜಲಮೂಲಗಳು ಮಾಲಿನ್ಯವಾಗುತ್ತಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ವಿಚಾರದಲ್ಲಿ ಗಂಭೀರವಾದ ಚರ್ಚೆಗಳು ಮತ್ತು ಕಾರ್ಯಯೋಜನೆಗಳು ರೂಪುಗೊಳ್ಳಬೇಕು. ಸರ್ಕಾರ ಮತ್ತು ಸಂಘಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಜನರಲ್ಲಿ ಸ್ವಚ್ಚತೆಯ ಅರಿವು ಮೂಡಿಸಬಹುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಂದ್ರಸುತ ಯುಟೂಬ್ ಮಾಲೀಕ ನವೀನ್ ಮಂಜುನಾಥ್ ಮಾತನಾಡಿ ಜೇಸಿ ಸಂಸ್ಥೆ ಬಹಳ ವರ್ಷಗಳಿಂದ ಜನರ ನಡುವೆ ಕೆಲಸ ಮಾಡುತ್ತಿದ್ದು, ಅನೇಕ ಸಮಾಜಪರವಾದ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ನಮ್ಮ ಯುವಜನರಿಗೆ ನಮ್ಮ ಸಂಸ್ಕೃತಿಯ, ಪರಂಪರೆಯ ಅರಿವು ಮೂಡಿಸುವ ಕೆಲಸ ಮಾಡಬೇಕು. ಇತಿಹಾಸ ಪುಟಗಳ ಪರಿಚಯ ಮಾಡಿಸಬೇಕು. ಸಾಮಾಜಿಕ ಮಾಧ್ಯಮಗಳನ್ನು ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೂಡಿಗೆರೆ ತಹಸೀಲ್ದಾರ್ ಶ್ರೀಮತಿ ಎಸ್. ಅಶ್ವಿನಿಯವರು ಸಪ್ತಾಹವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪೂರ್ವಾಧ್ಯಕ್ಷ ಪ್ರಸನ್ನ ಗೌಡಹಳ್ಳಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಜೇಸಿಐ ಮೂಡಿಗೆರೆ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಮೂಡಿಗೆರೆ ನಿಕಟಪೂರ್ವ ಅಧ್ಯಕ್ಷ ಮತ್ತು ವಲಯ ಕಾರ್ಯರ್ಶಿ ಸುಪ್ರೀತ್ ಕಾರಬೈಲ್, ಸಪ್ತಾಹದ ನಿರ್ದೇಶಕಿ ಕೃತಿ ಪ್ರದೀಪ್, ಜೇಸಿಐ ಕಾರ್ಯದರ್ಶಿ ಹಮೀದ್ ಸಬ್ಬೇನಹಳ್ಳಿ, ಲೇಡಿ ಜೇಸಿ ಅಧ್ಯಕ್ಷೆ ರೇಖಾ ನಾಗರಾಜ್ ಬೆಟ್ಟಗೆರೆ, ನಿರ್ದೇಶಕಿ ರೇಖಾ ರವಿರಾಜ್ ವೇದಿಕೆಯಲ್ಲಿದ್ದರು.
ಉದ್ಘಾಟನೆಯ ನಂತರ ಮೂಡಿಗೆರೆ ಪಟ್ಟಣದಲ್ಲಿ ಸಪ್ತಾಹದ ಕುರಿತು ಪ್ರಚಾರ ಜಾಥಾ ಏರ್ಪಡಿಸಲಾಗಿತ್ತು.





