kagga new

 

 

ಮೂಲ : ಡಿ.ವಿ.ಜಿ

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು,
ಮೈಸೂರು.
ಮೊ. 9448233119

 

ಪ್ರಪಂಚದಲ್ಲಿ ಎಲ್ಲ ಜೀವಿಗಳು ಸಹ ತಮ್ಮ ಬೆಳವಣಿಗೆಯ ಹಂತದಲ್ಲಿ ಬದಲಾಗುತ್ತ ಹೋಗುತ್ತವೆ, ಕ್ರಿಮಿ ಕೀಟಗಳಾದಿಯಾಗಿ ಎಲ್ಲ ಜೀವಿಗಳಿಗು ತಾನು ತನ್ನದು ಎಂಬ ಭಾವ ಬರುವಂತೆ ಭಗವಂತನ ಸೃಷ್ಟಿಯಿದೆ. ಮನುಷ್ಯ ಇದಕ್ಕೆ ಹೊರತಲ್ಲ. ಇತರೇ ಜೀವಿಗಳಿಗಿಂತಲು ತುಸು ಹೆಚ್ಚೆನಿಸುವಷ್ಟು ಅವನ ಆಸೆ ಆಕಾಂಕ್ಷೆಗಳ ಪಟ್ಟಿಯಿದೆ ಎಂದರೆ ತಪ್ಪಾಗಲಾರದು. ಮನುಷ್ಯ ಬುದ್ಧಿಜೀವಿ, ಯೋಚನಾ ಶಕ್ತಿಯನ್ನು ಹೊಂದಿದವನು. ಮನುಷ್ಯ ತನ್ನ ಬುದ್ಧಿ ಮತ್ತೆಯನ್ನು ಒಳ್ಳೆಯದು ಹಾಗೂ ಕೆಟ್ಟದು ಎರಡಕ್ಕೂ ಉಪಯೋಗಿಸಿ ಕೊಳ್ಳಬಲ್ಲ ಕಲೆಯನ್ನು ಕಲಿತವನು. ಪ್ರಪಂಚ ಬೆಳೆಯುತ್ತಾ ಹೋದಂತೆಲ್ಲ ಹೊಸ ಹೊಸ ಆವಿಷ್ಕಾರಗಳು ನಮ್ಮೆದುರು ತಲೆಯೆತ್ತುತ್ತಿವೆ. ಅದರಂತೆ ಮನುಷ್ಯ ಕೂಡ ಈ ಬದಲಾಗುತ್ತಿರುವ ಪ್ರಪಂಚಕ್ಕೆ ಹೊಂದಿಕೊಳ್ಳಲು ಹೊಸ ಹೊಸದನ್ನು ಕಲಿಯುವ ಆತುರ ಕಾತುರ ತಪ್ಪಲ್ಲ. ಆದರೆ ಈ ಹೊಸತರ ಅಪ್ಪುವಿಕೆಯ ಭರದಲ್ಲಿ ಹಳೆತು ನಮ್ಮಿಂದ ದೂರ ದೂರ ಹೋಗುತ್ತಿರುವುದು ವಿಪರ್ಯಾಸಕರ. ಅದು ವಸ್ತು, ವಿಷಯ, ಸಂಬಂಧ, ಅನುಬಂಧ ಏನೇ ಆಗಿರಬಹುದು. ಆದರೆ ಒಮ್ಮೆ ಕಳೆದುಕೊಂಡ ಮೇಲೆ ಮತ್ತೆಂದು ಸಿಗಲಾರದ ಅಮಾಲ್ಯವಾದ ವಸ್ತಗಳು ನಮ್ಮಿಂದ ದೂರವಾಗುತ್ತಿವೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಾಗಬೇಕು ಎಂಬುದು ನಿಜವಾದರು ಸಹ ಎಲ್ಲವೂ ಸಹ ಹೊಸತರಲ್ಲಿ ಕಾಣಲು ಸಾಧ್ಯವಿಲ್ಲ ಎಂಬ ಕಟುಸತ್ಯದ ಅರಿವಿರಬೇಕು.

ಭಗವಂತ ಮನುಷ್ಯನ ಸೃಷ್ಟಿ ಮಾಡಿ ಅವನಲ್ಲಿ ಸಾಕಷ್ಟು ಸುಪ್ತ ಚಿಂತನೆಗಳ ಜೊತೆಗೆ ಬುದ್ಧಿಶಕ್ತಿಯನ್ನು ಕೊಟ್ಟು ಅದರ ಸಾಕ್ಷಾತ್ಕಾರಕ್ಕಾಗಿ ಶ್ರಮಿಸುವಂತಹ ಮನಸ್ಸನ್ನು ನೀಡಿದ್ದಾನೆ. ಆದರೆ ಈ ಮನಸ್ಸಿನ ಓಟದ ಮಾರ್ಗವನ್ನು ಮಾತ್ರ ಯಾವ ತಗ್ಗು ದಿಣ್ಣೆಗಳಿಲ್ಲಲ್ಲದಂತೆ ಸರಾಗವಾಗಿ ಓಡಲು ಬಿಟ್ಟಿದ್ದಾನೆ. ಆದ್ದರಿಂದಲೆ ಈ ಮನಸ್ಸು ಗಾಳಿಗಿಂತ ವೇಗವಾಗಿ ಚಲಿಸುವ ಸಾಮಥ್ರ್ಯ ಹೊಂದಿದೆ ಈ ಮನಸ್ಸನ್ನು ಡಿ.ವಿ.ಜಿ ಯವರು ಹೀಗೆನ್ನುತ್ತಾರೆ :-

ತೊರೆಯ ತೆರೆಸಾಲ್ಗಳೇಳುತ ಬೀಳುತಿರುವಂತೆ |
ಪರಿಯುತಿರ್ಪುದು ಪುರುಷ ಚೈತನ್ಯಲಹರಿ ||
ಅರಿಯದದು ನಿಲುಗಡೆಯ, ತೊರೆಯದದು ಚಲಗತಿಯ |
ಪರಬೊಮ್ಮನುಯ್ಯಲದು- ಮಂಕುತಿಮ್ಮ ||

ಒಂದು ಹೊಳೆಯಲ್ಲಿ ರಭಸವಾಗಿ ಹರಿಯುವ ನೀರಿನಲ್ಲಿ ಅಲೆಗಳು ಒಮ್ಮೆ ಏಳುತ್ತ, ಮತ್ತೊಮ್ಮೆ ಬೀಳುತ್ತಾ ಸಾಗುತ್ತಿರುವಂತೆ ಮನುಷ್ಯನ ಅಂತರಂಗದಲ್ಲಿನ ಚೈತನ್ಯವೆಂಬ ಅಲೆಗಳು ಲಾಸ್ಯವಾಡುತ್ತಿರುತ್ತವೆ. ಈ ಚೈತನ್ಯವೇ ಪರಮಾತ್ಮನ ಉಯ್ಯಾಲೆಯಾಗಿ ನಿಂತಲ್ಲೇ ನಿಲ್ಲದೆ ಹಾಗೂ ತನ್ನ ಚಲನಗತಿಯನ್ನು ತೊರೆಯದೆ ಓಡಾಡುತ್ತಲೇ ಇರುತ್ತದೆ.

ಮನಸ್ಸು ಚಂಚಲನಾಗಿರುವುದರಿಂದ ಇದು ನಿರಂತರವಾಗಿ ಒಂದಲ್ಲ ಒಂದು ವಿಷಯದ ಕಡೆಗೆ ಹೋಗುತ್ತಲೇ ಇರುತ್ತದೆ. ಈ ಚಲಿಸುವಿಕೆಯ ಜೊತೆ ಜೊತೆಗೆ ನಮ್ಮ ಯೋಚನೆಗಳಿಂದ ಮಾಡುವಂತಹ ಕೆಲಸಗಳು ಸಹ ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ. ಆದ್ದರಿಂದಲೇ ಇಂದು ಮಿತ್ರರಾಗಿದ್ದವರು ಮನಸ್ಸಿನ ಕೆಟ್ಟ ಆಲೋಚನೆಗಳಿಂದ ನಾಳೆ ಶತ್ರುಗಳಾಗುತ್ತಾರೆ. ಹರಿಯುವ ನೀರು ಮುಮ್ಮುಖನಾಗಿ ಚಲಿಸುತ್ತದೆಯೇ ಹೊರತು ಹಿಮ್ಮುಖವಾಗಿ ಅಲ್ಲ ಆದರೆ ಈ ಮನಸ್ಸು ಎಂಬುದು ಮಾತ್ರ ಹಿಂದೆಯೂ, ಮುಂದೆಯೂ ಓಡಾಡುತ್ತ ಕಳೆದ ಘಟನೆಗಳ ಸುತ್ತ ತಿರುಗುತ್ತಾ ನಮ್ಮನ್ನು ಬಂಧಿಸುತ್ತದೆ, ಮನಸ್ಸಿನ ಈ ಹೊಯ್ದಾಟವನ್ನು ನಿರಂತರವಾಗಿ ಚಲಿಸುವ ಸಾಗರದ ಅಲೆಗಳಿಗೆ ಹೋಲಿಸುತ್ತಾ ಬದುಕಿನ ಏಳು ಬೀಳುಗಳ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ.

ಹರಿಯುವ ನೀರು ಯಾವ ರೀತಿ ಒಂದರೆಕ್ಷಣವೂ ನಿಲ್ಲದೆ ಸಂದಿಗೊಂದಿ ಎನ್ನದೆ ನುಗ್ಗಿ ಚಲಿಸುತ್ತದೆಯೋ ಹಾಗೆಯೇ ಮನಸ್ಸು ಸಹ ತನ್ನ ಗತಿಯನ್ನು ಎಲ್ಲಿ ಹೇಗೆ ಬೇಕಾದರೂ ಅರೆಕ್ಷಣ ನಿಲ್ಲದೆ ಓಡುವ ಸಾಮಥ್ರ್ಯ ಹೊಂದಿದೆ. ಆದ್ದರಿಂದ ಅದು ಹಿಂದೆ ಮುಂದೆ ಚಲಿಸಿ ಬೇಕಾದ್ದು, ಬೇಡವಾದ್ದು ಎಲ್ಲವನ್ನು ಹೊತ್ತುಕೊಂಡು ತಾನು ಹೈರಾಣಾಗುತ್ತದೆ. ಹರಿಯುವ ನೀರು ಒಂದು ವೇಳೆ ಒಂದೆಡೆ ನಿಂತು ಬಿಟ್ಟರೆ ಅದು ದುರ್ಗಂಧವನ್ನು ಉಂಟುಮಾಡುತ್ತದೆ. ಅಂತೆಯೇ ಈ ಮನಸ್ಸು ಕೂಡ ತನಗೆ ಬೇಡವಾದ ವಿಷಯವನ್ನು ಹಚ್ಚಿಕೊಂಡರೆ ಮನುಷ್ಯ ತನ್ನ ಆಲೋಚನಾ ಶಕ್ತಿಯನ್ನೇ ಕಳೆದುಕೊಳ್ಳತ್ತಾನೆ ಅಲ್ಲದೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ನಿರ್ಧಾರ ತೆಗೆದುಕೊಳ್ಳುವ ಆತ್ಮಸ್ಥೈರ್ಯವನ್ನೇ ಕಳೆದುಕೊಳ್ಳುತ್ತಾನೆ. ಹುಚ್ಚು ಕುದುರೆಯಂತೆ ಓಡುವ ಮನಸ್ಸನ್ನು ತನ್ನ ಅಧೀನದಲ್ಲಿರಲಿ ಎಂದು ಅದರ ಸೂತ್ರವನ್ನು ತನ್ನ ಕೈಯಲ್ಲಿ ಇಟ್ಟುಕೊಂಡು ಅದನ್ನು ಉಯ್ಯಾಲೆಯಂತೆ ತೂಗುತ್ತಿದ್ದಾನೆ. ಇಲ್ಲಿ ತೂಗುವಿಕೆಯು ಅವನದಾದರೂ ಅದರೊಂದಿಗೆ ಏಳು ಬೀಳುಗಳನ್ನು ಕಾಣುತ್ತಾ ಓಡುವವರು ಲೋಕದ ಜನರು.

ಈ ರೀತಿಯಾಗಿ ಅಲೆಗಳಂತೆ ಏಳುತ್ತಾ-ಬೀಳುತ್ತಾ ಸಾಗುವ ಬದುಕಿನಲ್ಲಿ ನಮ್ಮ ಕರ್ಮಾನುಸಾರವಾಗಿ ಫಲಗಳು ದೊರೆಯುತ್ತವೆ. ವಿಧಿಯೊಂದಿಗೆ ಪರಮಾತ್ಮನ ಚೈತನ್ಯವು ಸೇರಿಕೊಂಡಾಗ ಜೀವನವು ಮೇಲೇರುತ್ತಾ ಸಾಗುತ್ತದೆ, ಅದೇ ನಮ್ಮ ಕರ್ಮ ಫಲ. ವಿಧಿಗೆ ಎದುರಾದಾಗ ನಮ್ಮ ಜೀವನವು ಸಹ ಕೆಳಗಿಳಿಯುತ್ತಾ ಸಾಗುತ್ತದೆ. ಈ ಏರಿಳಿತದ ಪರಿ ಹೇಗಿದೆ ಎಂದರೆ ;

ಇಂದೆದ್ದ ತೆರೆ ನಾಳೆಬೀಳುವುದು: ಮರುವಗಲು |
ಮುಂದೆ ತಾನೇಳುವುದು ಬೇರೆ ಗಾತ್ರದಲಿ ||
ಇಂದು ನಾಳೆಗಳನ್ನೆಲ್ಲವ ಕೂಡಿ ನೋಡಿದೊಡೆ |
ಮುಂದಹುದು ಬೆರಗೊಂದೆ -ಮಂಕುತಿಮ್ಮ ||

ಈ ದಿನದ ತೆರೆ ನಾಳೆ ಬೀಳುತ್ತವೆ, ಪುನ: ನಾಳೆ ಮೇಲಕ್ಕೇರುತ್ತದೆ ಆದರೆ ಅದರ ಗಾತ್ರ ಬೇರೆಯಾಗಿರುತ್ತದೆ, ಈ ಇಂದು – ನಾಳೆಗಳ ಅಲೆಯನ್ನೆಲ್ಲ ಕೂಡಿಸಿ ನೋಡಿದರೆ ಸಾಗರದ ಅನಂತ ಶಕ್ತಿಯ ಅರಿವಾಗಿ ನಮಗೆ ಆಶ್ಚರ್ಯವುಂಟಾಗುತ್ತದೆ.

ಇಲ್ಲಿ ಅಲೆಗಳು ನಮ್ಮ ಜೀವನವನ್ನು ಪ್ರತಿಬಿಂಬಿಸಿದರೆ ಅದರ ಏರುಪೇರುಗಳ ಅರಿವಾಗುತ್ತದೆ. ಯಾವುದೋ ಕಾರಣಾಂತರ ದಿಂದ ಸೋತ ಮನುಷ್ಯ ಮೆತ್ತಗಾಗುತ್ತಾನೆ, ಚಕ್ರೋಪಾದಿಯಂತೆ ತಿರುಗುತ್ತಿರುವ ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಇಂತಹ ಚಟುವಟಿಕೆಗಳನ್ನು ಗಮನಿಸಿದಾಗ ಆ ಸೃಷ್ಟಿಕರ್ತ ಅದು ಯಾವ ಶಾಸ್ರ್ತವನ್ನು ಓದಿಕೊಂಡಿದ್ದಾನೆಯೋ ಎಂದು ಹೆಮ್ಮೆ ಪಡುವಂತಾಗುತ್ತದೆ.

ಈ ಜೀವನವೆಂಬ ಪಯಣದ ಹಾದಿಯ ಕತ್ತಲನ್ನು ಸರಿಸಿ ಬೆಳಕು ನೀಡುತ್ತಾ ನಮ್ಮ ನಮ್ಮ ಕರ್ಮಾನುಸಾರೇಣ ಫಲಕೊಡುತ್ತ ನಮ್ಮನ್ನು ಸತತವಾಗಿ ಸಲಹುತ್ತಿರುವ ಆ ದೈವದ ಅನುಗ್ರಹವೇ ಈ ಜೀವನ. ಆದ್ದರಿಂದ ಇಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಯು ಅವನ ಇಚ್ಛೆ. ಹಾಗಾಗಿ ಇಲ್ಲಿನ ಎಲ್ಲ ಏಳು ಬೀಳುಗಳ ಜೊತೆಗೆ ಸಾಗಿ ಅವುಗಳನ್ನು ಎದುರಿಸುವಂತೆ ನಮ್ಮನ್ನು ಅಣಿಗೊಳಿಸುವುದು ಸಹ ಆ ಪರಮಾತ್ಮ ತನ್ನ ಧರ್ಮವೆಂದು ನಡೆಸುತ್ತಾ ಬಂದಿದ್ದಾನೆ. ಆದ್ದರಿಂದ ಇಂತಹ ಕಲೆಯನ್ನು ಲೋಕಕ್ಕೆ ಕಲಿಸಿ ಮುನ್ನೆಡೆಸುತ್ತಿರುವವನಿಗೆ ಒಂದು ನಮನ ಸಲ್ಲಿಸೋಣವೇ ?

***********

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ