ಮೂಡಿಗೆರೆ ತಾಲೂಕು ಯು. ಹೊಸಹಳ್ಳಿ ಗ್ರಾಮದ (ಮೂಡಿಗೆರೆ ಪಟ್ಟಣ ನಿವಾಸಿ) ಹಿರಿಯ ಕೃಷಿಕ, ಉದ್ಯಮಿಯಾಗಿದ್ದ ಅಪ್ಪಣ್ಣ ಗೌಡ(75 ವರ್ಷ) ನಿಧನರಾಗಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೃಷಿಕ ಕುಟುಂಬದ ಅಪ್ಪಣ್ಣ ಮೂಡಿಗೆರೆಯಲ್ಲಿ ತಮ್ಮದೇ ಆದ ವ್ಯವಹಾರ ಪ್ರಾರಂಭಿಸಿದ್ದರು. ಆದರ್ಶ ಟಿಲ್ಲರ್ಸ್ ಮೂಲಕ ರೈತರಿಗೆ ಟಿಲ್ಲರ್ ಹಾಗೂ ಕೃಷಿ ಉಪಕರಣಗಳ ಬಿಡಿ ಭಾಗಗಳ ಸೇವೆ ಒದಗಿಸುತ್ತಿದ್ದರು.
ಇವರ ಪುತ್ರ ಆದರ್ಶ ಈಗ ಆದರ್ಶ್ ಏಜೆನ್ಸೀಸ್ ಮೂಲಕ ಕೃಷಿ ಉಪಕರಣಗಳ ಮಳಿಗೆ ನಡೆಸುತ್ತಿದ್ದಾರೆ.
ಇವರು ಹೊಸಳ್ಳಿ ಅಪ್ಪಣ್ಣ ಎಂದೇ ಜನರ ವಿಶ್ವಾಸ ಗಳಿಸಿದ್ದರು. ಮೃತರು ಓರ್ವ ಪುತ್ರ ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಪಾರ್ಥಿವ ಶರೀರವನ್ನು ಮೂಡಿಗೆರೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ಇಂದು ಭಾನುವಾರ ಸಂಜೆ 5.30ಕ್ಕೆ ಮೂಡಿಗೆರೆ ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.
ಅಪ್ಪಣ್ಣ ಅವರ ನಿಧನಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟ, ಮೂಡಿಗೆರೆ ಬೆಳಗಾರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ತಮ್ಮ ಸಂತಾಪ ಸೂಚಿಸಿವೆ.



