ಮೂಡಿಗೆರೆ ತಾಲ್ಲೂಕು ಕೊಲ್ಲಿಬೈಲ್ ಎಸ್ಟೇಟ್ ಮಾಲೀಕರು, ಮೂಡಿಗೆರೆ ಎಂ.ಜಿ.ಎಂ. ಟ್ರಸ್ಟ್ ಅಧ್ಯಕ್ಷ ಎನ್.ಎಲ್. ಸುಂದರೇಶ್ವರ್ (89 ವರ್ಷ) ದಿನಾಂಕ : 5-6-2026 ರ ಶುಕ್ರವಾರ ಮುಂಜಾನೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಸುಂದರೇಶ್ವರ್ ಅವರು ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಇಂದು ಶುಕ್ರವಾರ ಸಂಜೆ 4 ಗಂಟೆಗೆ ಮೂಡಿಗೆರೆ ಸಮೀಪದ ಕೊಲ್ಲಿಬೈಲ್ ಎಸ್ಟೇಟ್ ನಲ್ಲಿ ನೆರವೇರಲಿದೆ.
ನಂದೀಪುರ ಕುಟುಂಬದ ಎನ್.ಎಲ್. ಸುಂದರೇಶ್ವರ್ ಅವರು ಮೂಡಿಗೆರೆ ಹಲವಾರು ಸಂಘಸಂಸ್ಥೆಗಳ ಸಂಸ್ಥಾಪಕರಾಗಿದ್ದರು. ಮೂಡಿಗೆರೆಯ ಲಯನ್ಸ್ ಸಂಸ್ಥೆ, ಜೇಸಿಐ ಸಂಸ್ಥೆ, ಮೂಡಿಗೆರೆ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾಗಿ ಅವುಗಳನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.
ಸುಂದರೇಶ್ವರ್ ಅವರು ಅತ್ಯಂತ ಮೃದು ಸ್ವಭಾವದವರು, ಸ್ನೇಹಜೀವಿಯಾಗಿದ್ದರು. ಸಮಯಕ್ಕೆ ಅತ್ಯಂತ ಮಹತ್ವ ನೀಡುತ್ತಿದ್ದರು. ಮೂಡಿಗೆರೆ ಎಂ.ಜಿ.ಎಂ. ಟ್ರಸ್ಟ್ ಅಧ್ಯಕ್ಷರಾಗಿ ಆಸ್ಪತ್ರೆಯ ಅಭಿವೃದ್ಧಿಯಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದರು.
ಸುಂದರೇಶ್ವರ್ ಅವರ ನಿಧನಕ್ಕೆ ಜನಪ್ರತಿನಿಧಿಗಳು, ಹಲವಾರು ಸಂಘಸಂಸ್ಥೆಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.



