ಕೊಡಗು ಜಿಲ್ಲೆಯಲ್ಲಿ ನಡೆದ ಕಾಡಾನೆ ದಾಳಿಯಿಂದಾಗಿ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ ಅವರು ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ನಡೆದಿದೆ.
ದಕ್ಷಿಣ ಕೊಡಗಿನ ಗೋಣಿಕೊಪ್ಪಲು ಸಮೀಪದ ಕೋನನಕಟ್ಟೆಯಲ್ಲಿರುವ ಅವರ ಸ್ವಂತ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಂಧ್ಯಾ ಅವರು ತಮ್ಮ ಎಸ್ಟೇಟ್‌ಗೆ ಮ್ಯಾನೇಜರ್ ಹಾಗೂ ಚಾಲಕರೊಂದಿಗೆ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಆನೆ ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಎಸ್ಟೇಟ್ ಮ್ಯಾನೇಜರ್ ಮತ್ತು ಚಾಲಕ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸಂಧ್ಯಾ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಆನೆ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಮೃತ ಸಂಧ್ಯಾ ಅವರ ಪತಿ ಸುನಿಲ್ ಅಚ್ಚಯ್ಯ ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲಿಯೇ ವಾಸವಾಗಿದ್ದಾರೆ. ಕೊಡಗು ಮೂಲದವರಾದ ಇವರು ಕೊಡಗಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ. ಸಂದ್ಯಾ ಅವರು ತಮ್ಮ ಕಾಫಿ ಎಸ್ಟೇಟ್ ಗೆ ಆಗಮಿಸಿದ್ದಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಕೊಡಗು ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಸತತ ಕಾಡಾನೆ ದಾಳಿಯಿಂದ ಅನೇಕ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಈ ಸಾಲಿಗೆ ಹಿರಿಯ ಐಪಿಎಸ್ ಅಧಿಕಾರಿ ಪತ್ನಿಯು ಸೇರ್ಪಡೆಯಾಗಿದ್ದಾರೆ.
ಘಟನೆಯಿಂದ ಕೊಡಗಿನಲ್ಲಿ ಜನಾಕ್ರೋಶ ಭುಗಿಲೆದ್ದಿದ್ದು, ಕಾಡಾನೆ ಸಮಸ್ಯೆಗೆ ತಕ್ಷಣ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.



