
ಲೇಖನ – ಕುಂದೂರು ಅಶೋಕ್
ಗಾಂಧೀ ಎಂದ ಕೂಡಲೆ; ಸಣಕಲು ದೇಹ ಕೈಯ್ಯಲ್ಲೊಂದು ಕೋಲು, ಮೂಗಿನ ಮೇಲೊಂದು ಕನ್ನಡಕ, ಮೈ ಮೇಲೆರಡು ತುಂಡು ಬಟ್ಟೆ, ಸೊಂಟದಲ್ಲೊಂದು ಗಡಿಯಾರ, ಮಂದಹಾಸದ ಮುಖ ಮುದ್ರೆ!
ಹುಟ್ಟಿದ್ದು 1869 ಅಕ್ಟೋಬರ್ 2, ಈ ದಿವಸ, ಈ ವರ್ಷ ಹುಟ್ಟದಿದ್ದರೆ ಗಾಂಧೀಜಿ; ನಮಗೆ ಸ್ವಾತಂತ್ರ್ಯ ಲಭಿಸುವುದು ಇನ್ನೂ ಐವತ್ತು ವರ್ಷ ಮುಂದೂಡಲ್ಪಡುತಿತ್ತು!
ಗಾಂಧೀಜಿಯ ಸಣಕಲು ದೇಹ, ಮಿತಾಹಾರ ಅವರ ಕ್ರಿಯಾಶೀಲತೆ ಮತ್ತು ಸರಳತೆಯನ್ನು ಸೂಚಿಸುತ್ತದೆ. ಕೈಯ್ಯಲ್ಲೊಂದು ಕೋಲು. ಅವರ ದೇಹಕ್ಕೆ ಮಾತ್ರ ಆಸರೆ ಅಲ್ಲ. ಅದು ಇಡೀ ದೇಶಕ್ಕೆ ಆಸರೆಯ ಸಂಕೇತ! ಅವರ ಕನ್ನಡಕ ಲೋಕದೃಷ್ಟಿ ಮತ್ತು ಅಂತರಂಗದಲ್ಲಿ ಮತ್ತೊಬ್ಬರನ್ನು ಕಾಣುವ ಬಗೆ. ಮೈಮೇಲೆರಡು ತುಂಡು ಬಟ್ಟೆ ಭಾರತದ ಬಡತನಕ್ಕೆ ಗಾಂಧಿಯ ಸರಳತೆಯ ಧ್ಯೋತಕವಾಗಿತ್ತು! ಸೊಂಟದಲ್ಲಿನ ಗಡಿಯಾರ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಭಾರತದ ಬಿಡುಗಡೆಗೆ ಕಾಲದ ಜತೆಗೆ ಹೆಜ್ಜೆ ಹಾಕಿ ನಡೆಯಲು!! ಮುಖದ ಮೇಲಿನ ಮಂದಹಾಸ ಭಾರತವನ್ನು ಜಾತಿ-ಧರ್ಮದ ಚೌಕಟ್ಟಿನಾಚೆ ಉದಾರದೃಷ್ಟಿ ಭೀರಿ ಮಾನವತೆಗೆ ಮುಗ್ಧತೆಯ ಸಂಕೇತವಾಗಿತ್ತು. ಇಂತಹ ಗುಣಗಳಿದ್ದ ಗಾಂಧೀ ಸಾವಿರ ಅಣುಬಾಂಬಿಗಿಂತಲೂ ಶಕ್ತಿಯುತವಾದ ‘ಆತ್ಮಬಲವನ್ನು’ ಹೊಂದಿದ್ದರು!
ಆದರೆ, ಗಾಂಧೀಯನ್ನು ಜಗತ್ತು ಅರ್ಥಮಾಡಿಕೊಂಡರೂ ಭಾರತವಾಗಲಿ, ಭಾರತೀಯರಾಗಲಿ ಅರ್ಥಮಾಡಿಕೊಂಡಿದ್ದು ಬಹಳ ಕಡಿಮೆ. ಏಕೆಂದರೆ; ಮೈಸೂರಿಗೊಮ್ಮೆ ಹರಿಜನರ ಉದ್ಧಾರಕ್ಕೆ ಶ್ರಮಿಸುತ್ತಿರುವಾಗಲೇ ಭೇಟಿ ನೀಡಿದ್ದರು. ಅಲ್ಲಿದ್ದ ಹರಿಜನರು ನೈರ್ಮಲ್ಯ ಕಾಪಾಡಿಕೊಂಡು ಹಾಗೂ ಸ್ವಚ್ಛವಾಗಿರಲೆಂದು ಸಹಾಯ ಮಾಡಬೇಕೆನಿಸಿತು. ನೆರೆದಿದ್ದ ಹರಿಜನರ ಕೈಗೆ ಒಂದೊಂದು ಸಾಬೂನು ಕೊಡಬೇಕೆಂದು ಯೋಜಿಸಲಾಗಿತ್ತು. ಗಾಂಧೀ ಅದನ್ನು ತಡೆದು, ಅವರ ಕೈಗೆ ಇಡೀ ಸಾಬೂನು ನೀಡಿದರೆ; ಅದನ್ನು ಮಾರಿ ಮದ್ಯಪಾನಕ್ಕೆ ಹಣ ವಿನಿಯೋಗಿಸುತ್ತಾರೆ. ಅದನ್ನು ತುಂಡುಮಾಡಿ ಹಂಚಲು ಸೂಚಿಸಿದರು! ಏಕಕಾಲದಲ್ಲಿ ಸ್ವಚ್ಛತೆ ಮತ್ತು ಮದ್ಯಪಾನದ ಕುರಿತು ಜಾಗೃತಿ ಮೂಡಿಸಿ, ಅವರನ್ನು ಸಾಮಾಜಿಕ ಮುಖ್ಯ ವಾಹಿನಿಗೆ ತರಬೇಕೆಂಬ ಹಂಬಲ ಗಾಂಧೀಜಿಗಿತ್ತು!
ಹರಿಜನರ ಉದ್ಧಾರಕ್ಕೆ ಶ್ರಮಿಸುತ್ತಿರುವಾಗಲೇ, ಬ್ರಿಟಿಷರ ಕುತಂತ್ರದಿಂದಾಗಿ ಹಾಗೂ ಅಂಬೇಡ್ಕರರ ಒತ್ತಾಯದ ಮೇರೆಗೆ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ಜಾರಿಗೆ ತರಬೇಕೆಂಬ ಚರ್ಚೆ ಬಂದಾಗ, ಗಾಂಧೀ ಹಿಂದೂ ಧರ್ಮದ ಭಾಗವಾಗಿರುವ ದಲಿತರು ಪ್ರತ್ಯೇಕವಾಗಿ ಸಿಡಿದು ಹೋದರೆ ಹಿಂದೂ ಧರ್ಮ ದುರ್ಬಲವಾಗುತ್ತದೆ ಎಂಬ ಕಾಳಜಿಯಿಂದ ಉಪವಾಸ ಕುಳಿತು ವಿರೋಧಿಸಿದರು. ಅಂಬೇಡ್ಕರರು ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಕ್ಕೆ ಪಟ್ಟುಹಿಡಿದರು. ಅಂಬೇಡ್ಕರ್ ಕಾಳಜಿಯೂ ಆ ಸಂದರ್ಭದಲ್ಲಿ ಸರಿಯಾಗಿಯೇ ಇತ್ತು. ಗಾಂಧೀಜಿಯ ಹಠದಿಂದ ಪ್ರಾಣವೇ ಹೋಗುವ ಸಂದರ್ಭ ಬಂದಾಗ, ಅಂಬೇಡ್ಕರರೂ ತಮ್ಮ ಹಠ ತೊರೆದು ಪೂನಾ ಒಪ್ಪಂದಕ್ಕೆ (1932)ರಲ್ಲಿ ರಾಜಿಯಾಗಿ ದಲಿತರಿಗೆ ಈಗಿರುವ ಮೀಸಲು ಕ್ಷೇತ್ರಗಳಿಗೆ ಒಪ್ಪಿಕೊಂಡರು. ಆಗ ಗಾಂಧೀಜಿಯ ಕುರಿತು ದಲಿತರಿಗೂ ಅಸಮಾಧಾನವಿತ್ತು. ಆದರೆ, ಪ್ರತ್ಯೇಕ ಮತಕ್ಷೇತ್ರ ನೀಡಿ ಬ್ರಿಟಿಷರು ಭಾರತವನ್ನು ‘ಒಡೆದು ಆಳುವ’ ಹುನ್ನಾರ ಮಾಡಿದ್ದರು. ಭಾರತ ಕೂಡ ‘ಅಸ್ಪøಶ್ಯತೆ’ ಹೆಸರಿನಲ್ಲಿ ದಲಿತರನ್ನು ಸಾವಿರಾರು ವರ್ಷಗಳಿಂದ ಶೋಷಿಸುತ್ತ ಬಂದಿತ್ತು. ಆದರೆ, ಗಾಂಧೀಜಿಯ ಸಾಮಾಜಿಕ ಸಾಮರಸ್ಯ ಹಾಗೂ ಏಕತೆಯ ಜತೆಗೆ ರಾಜಕೀಯ ಸ್ವಾತಂತ್ರ್ಯದ ಕಾಳಜಿ ಇದ್ದುದನ್ನು ದಲಿತರು ಮಾತ್ರ ಅಲ್ಲ, ಭಾರತ ಕೂಡ ಅರ್ಥಮಾಡಿಕೊಳ್ಳಲಿಲ್ಲ! ಇಲ್ಲಿ ಗಾಂಧೀಜಿ ದಲಿತ ವಿರೋಧಿಯಾಗಿ ಕಂಡರು.

ಭಾರತ ವಿಭಜನೆಯಾಗಿ ಭಾರತ-ಪಾಕಿಸ್ತಾನ ಎಂದು ಎರಡು ದೇಶಗಳು ರಚನೆಯಾದ ಸಂದರ್ಭದಲ್ಲಿ ಭಾರತದಲ್ಲಿ ಹಿಂದೂಗಳು, ಪಾಕಿಸ್ತಾನಕ್ಕೆ ಮುಸಲ್ಮಾನರು ಎಂಬ ಸ್ಥಳಾಂತರ ನೆಪ ಮಾತ್ರವಾಗಿ ಅಪೂರ್ಣವಾಯಿತು. ವಲಸೆಬಂದ ಮುಸಲ್ಮಾನರು, ನೆಲೆ ಕಳೆದುಕೊಂಡ ಹಿಂದೂಗಳು ಬೀದಿ ಬೀದಿಯಲ್ಲಿ ಹೊಡೆದಾಡಿ ಪ್ರಾಣ ಕಳೆದುಕೊಂಡು ಕೋಮುಗಲಭೆಯಾಗಿ ಸಾಮಾಜಿಕ ಸಾಮರಸ್ಯ ಹಾಗೂ ದೇಶದ ಐಕ್ಯತೆಯನ್ನು ಹಾಳು ಮಾಡಿದರು.
ವಿಭಜನೆಯ ಸಂದರ್ಭದಲ್ಲಿ ಜಿನ್ನಾ ಮುಂದಿಟ್ಟ ಬೇಡಿಕೆಯಂತೆ ಪ್ರಾರಂಭಿಕ ಹಂತದಲ್ಲಿ ಎರಡೂ ರಾಷ್ಟ್ರಗಳಿಗೆ ತಾತ್ಕಾಲಿಕವಾಗಿ ಕಲ್ಕತ್ತ ರಾಜಧಾನಿಯಾಗಿತ್ತು. ಎರಡನೆ ಬೇಡಿಕೆ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ಸಂಪರ್ಕಕ್ಕೆ 800 ಮೈಲಿ ಭಾರತದ ಮೂಲಕ ಹೆದ್ದಾರಿ, ಅದೂ ಕೂಡ ಆಗುವುದಕ್ಕೆ ಒಪ್ಪಿಯಾಗಿತ್ತು. ಮೂರನೆ ಬೇಡಿಕೆ ಪಾಕಿಸ್ತಾನಕ್ಕೆ 55 ಕೋಟಿ ನೀಡುವುದಾಗಿತ್ತು. ಯಾವಾಗ ಹಿಂದೂ-ಮುಸ್ಲಿಂ ನಡುವೆ ಗಲಭೆಗಳು ಪ್ರಾರಂಭವಾಯಿತೋ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಮಾಡಿತೋ ಆಗ ಭಾರತ ಸರ್ಕಾರ 55 ಕೋಟಿ ಪಾಕಿಸ್ತಾನಕ್ಕೆ ನೀಡುವ ಕುರಿತು ಹಿಂದೆ-ಮುಂದೆ ನೋಡುತ್ತಿತ್ತು.
ಆದರೆ, ಗಾಂಧೀಜಿ ಕೊಟ್ಟ ಮಾತಿನಂತೆ ಅವರಿಗೆ 55 ಕೋಟಿ ನೀಡಬೇಕೆಂದು ಒತ್ತಾಯಿಸಿದ ಕೂಡಲೇ ಬಹುತೇಕ ಬಹುಸಂಖ್ಯಾತ ಹಿಂದೂಗಳು ಗಾಂಧಿಯ ಕುರಿತು ಅಸಮಾಧಾನ ಬೆಳೆಸಿಕೊಂಡರು. ಅದೇ ಅವರ ಪ್ರಾಣಕ್ಕೂ ಮುಂದೆ ಕುತ್ತಾಯಿತು. ಇವೆಲ್ಲವೂ ಸಾಂದರ್ಭಿಕ ರಾಜಕೀಯ ಸ್ಥಿತ್ಯಂತರಗಳು. ಗಾಂಧೀಜಿಯನ್ನು ದಲಿತರೂ ಅರ್ಥಮಾಡಿಕೊಳ್ಳಲಿಲ್ಲ. ಹಾಗೆಯೇ ಬಹುಸಂಖ್ಯಾತ ಹಿಂದೂಗಳೂ ಅರ್ಥಮಾಡಿಕೊಳ್ಳಲಿಲ್ಲ. ಕೊನೆಗೆ ಮುಸ್ಲಿಂ ಬಾಂಧವರೂ ಅರ್ಥಮಾಡಿಕೊಳ್ಳಲಿಲ್ಲ! ಪಾಕಿಸ್ತಾನ ರಚನೆಗೆ 55 ಕೋಟಿ ಕೊಡಿಸಿದ್ದಕ್ಕೆ ಆಮೇಲಾದರೂ ಪಾಕಿಸ್ತಾನ ಭಾರತದೊಂದಿಗೆ ಶಾಂತಿಯುತವಾಗಿತ್ತ? ಗಾಂಧೀ ತತ್ವಗಳಿಗೆ ಮುಸ್ಲಿಂ ಬಾಂಧವರು ಬೆಲೆ ಕೊಟ್ಟರೆ? ಇಲ್ಲ!
ಆದರೆ, ಗಾಂಧೀಜಿಯ ಸರಳತೆ, ಸತ್ಯ, ಪ್ರಾಮಾಣಿಕತೆ, ಅಹಿಂಸೆ, ಹೋರಾಟದ ತೀವ್ರತೆಯನ್ನು ಅರ್ಥಮಾಡಿಕೊಂಡಿದ್ದವರು ಬ್ರಿಟಿಷರು ಮಾತ್ರ!
ಈ ಹೊತ್ತಿಗೂ ಇಡೀ ಭಾರತ ಗಾಂಧೀಜಿಯನ್ನು ಅರ್ಥಮಾಡಿಕೊಂಡಿಲ್ಲ. ಅರ್ಥ ಮಾಡಿಕೊಂಡಂತೆ ನಾಟಕವಾಡುತ್ತಾರೆ! ಗಾಂಧೀಜಿಯಂತಹ ಒಬ್ಬ ಸಾಂಸ್ಕøತಿಕ ವೀರ ಭಾರತದಲ್ಲಿ ಉದಯಿಸದಿದ್ದರೆ, ನಾವೆಲ್ಲರೂ ಅದೆಷ್ಟೋ ವರ್ಷಗಳು ಬ್ರಿಟಿಷರ ದಾಸರಾಗಿಯೇ ಇರುತ್ತಿದ್ದೆವು. ಗಾಂಧೀ ಹೋಗಲಿ, ದೇಶಕ್ಕೆ ಸ್ವಾತಂತ್ರ್ಯ ಬಂದ ದಿನಾಂಕ ವರ್ಷಗಳನ್ನೇ ಮರೆಯುತ್ತಿದ್ದೇವೆ. ಭಾರತೀಯರು ಅಂದ್ರೆ ಹಿಂದೂಗಳು, ಜಾತ್ಯತೀತರೆಂದರೆ ಅಲ್ಪಸಂಖ್ಯಾತರು ಎನ್ನುವ ಸೀಮಿತ ಪರಿಕಲ್ಪನೆಗೆ ಬಂದುಬಿಟ್ಟಿದ್ದೇವೆ. ಯಾವ ಅಧಿಕಾರಕ್ಕೂ ಆಸೆ ಪಡದೆ, ಯಾರೂ ಅರ್ಥಮಾಡಿ ಕೊಳ್ಳದಿದ್ದರೂ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಾಣವನ್ನು ಬ್ರಿಟಿಷರಿಗೆ ಕೊಡಬೇಕಿತ್ತು. ಆದರೆ, ನಮಗೆಲ್ಲ ಸ್ವಾತಂತ್ರ್ಯ ತಂದುಕೊಟ್ಟು ನಮ್ಮಿಂದಲೇ ಹತರಾದರಲ್ಲ ಗಾಂಧೀ! ಅದೇ ಈ ದೇಶದ ದುರಂತ ಮತ್ತು ದೌರ್ಬಲ್ಯ.
ದೇಶ ಸ್ವಾತಂತ್ರ್ಯ ಪಡೆದು ನೆಹರೂ ಮತ್ತು ಪಟೇಲರು ದೆಹಲಿಯಲ್ಲಿ ಅಧಿಕಾರದ ಗದ್ದುಗೆಯೇರುವ ಸಂಭ್ರಮದಲ್ಲಿದ್ದಾಗ ಗಾಂಧೀ ಎಲ್ಲಿದ್ದರು ಗೊತ್ತಾ? ಪಶ್ಚಿಮ ಬಂಗಾಳದ ನೌಖಾಲಿಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯಕ್ಕಾಗಿ ಶ್ರಮಿಸುತ್ತಿದ್ದರು. ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಗಾಂಧೀ ಸಾಕ್ಷಿಯಾಗಬೇಕೆಂದು ಕರೆ ಕಳುಹಿಸಿದಾಗ, ಗಾಂಧೀ ನೌಖಾಲಿಯ ಒಂದು ಮರದ ನೆರಳಿನಲ್ಲಿ ನಿಂತು ‘ನಾನು ಈ ಸಂದರ್ಭದಲ್ಲಿ ಬರಲಾಗುವುದಿಲ್ಲ’ ಎಂದು ಒಂದು ಮರದ ಎಲೆಯನ್ನು ಸಂದೇಶವಾಹಕರೊಂದಿಗೆ ಕಳುಹಿಸಿದ್ದರು. ಎಂತಹ ನಿರ್ಲಿಪ್ತತೆ, ನಿಸ್ವಾರ್ಥತೆ ಗಾಂಧೀಜಿಯದು.
ಇಂದಿನ ಮಂದಿಯದು ಬಾವುಟ ಹಿಡಿದರೆ, ಭಾರತನೇ ಬೇಕು, ಧ್ವಜ ಹಿಡಿದರೆ, ದರ್ಬಾರು ಮಾಡಬೇಕು. ಸಣ್ಣ ಸೇವೆಗೂ ಸನ್ಮಾನ, ಅಭಿನಂದನೆ, ಪ್ರಶಸ್ತಿ, ಪದವಿ, ಪುರಸ್ಕಾರ, ಗೂಟದ ಕಾರು ಎಲ್ಲ ಬೇಕು. ಕೆಲವೊಮ್ಮೆ ಯಾವುದನ್ನೂ ಮಾಡದಿದ್ದರೂ, ದೇಶಕ್ಕೋಸ್ಕರ ದುಡಿಯದಿದ್ದರೂ ದೇಶದಿಂದ ಎಲ್ಲವೂ ಬೇಕು!
ಪೂನಾ ಒಪ್ಪಂದದ ಸಂದರ್ಭದಲ್ಲಿ ಗಾಂಧೀ ಹಿಂದುತ್ವವಾದಿಯಾದರೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ 55 ಕೋಟಿ ಕೊಡಿಸಿ ಜಾತ್ಯತೀತರಾದರು. ಗಾಂಧೀ ದಲಿತರು, ಹಿಂದೂಗಳು, ಮುಸ್ಲಿಂ ಬಾಂಧವರಿಗೆ ಜೀವ ನೀಡಿ ತಾವು ಜೀತತೆತ್ತರು. ಹಾಗಾಗಿ ಗಾಂಧೀ ಸದ್ಯ ಪ್ರಪಂಚದ ವಿಸ್ಮಯ!
ಒಟ್ಟಾರೆ ಗಾಂಧಿ ಇತಿಹಾಸದಲ್ಲಿ ಸಾಂದರ್ಭಿಕವಾಗಿ ಕೆಲವೊಮ್ಮೆ ದಲಿತ ವಿರೋಧಿಯಾಗಿ, ಪ್ರಖರ ಹಿಂದೂತ್ವವಾದಿಯಾಗಿ, ಮತ್ತೊಮ್ಮೆ ಮುಸ್ಲಿಂ ಪರವಾಗಿ ಕಂಡರೂ, ಇವೆಲ್ಲವನ್ನೂ ಮೀರಿ ಹಿಂದೂ ಧರ್ಮದ, ಹಾಗೂ ದೇಶದ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಹಾಗೂ ಇನ್ನಿತರ ಧರ್ಮಗಳ ಐಕ್ಯತೆಯ ಹಾಗೂ ಸಮಗ್ರತೆಯ ಸಂಕೇತವಾಗಿ ಕಾಣುತ್ತಾರೆ.
ಆದರೆ, ಇಂದು ಗಾಂಧೀ ಮಾರ್ಗ ಯಾರಿಗೂ ಬೇಕಿಲ್ಲ. ಗಾಂಧಿ ಹೆಸರಿನಲ್ಲಿ ರಸ್ತೆ ಬೇಕು ಅಷ್ಟೇ! ಅಧಿಕಾರ-ಅಂತಸ್ತು ಎಲ್ಲವೂ ಬೇಕು. ಗಾಂಧಿ, ಭಾರತದಲ್ಲಿ ಇದ್ದರು ಎಂಬುದೇ ಜಗತ್ತಿನ ಏಳು ಅದ್ಭುತಗಳನ್ನು ಮೀರಿದ ಮಹಾನ್ ವಿಸ್ಮಯ! ಮೇಣದಬತ್ತಿಯಂತೆ ಉರಿದು ದೇಶಕ್ಕೆ ಬೆಳಕಾದಿರಿ, ನಿಮಗೊಂದು ಅನಂತ ಪ್ರಣಾಮಗಳು! ನಿಮಗೆ ಕಾಲ-ದೇಶಗಳ ಗಡಿಯಿಲ್ಲ!
ಕುಂದೂರು ಅಶೋಕ್.
ಲೇಖಕರು ಮತ್ತು ಶಿಕ್ಷಕರು,
ಮೊ. 9449736868



