ಕವಿತೆ ಒಂದು ವಿಸ್ಮಯ. ವಿದ್ಯಮಾನ ಅನುಭವವಾಗಿ ಕವಿತೆ ಸಂಭವಿಸುತ್ತದೆ ಎಂದು ಹಿರಿಯ ಕವಿ ಡಾ.ಬಿ.ಆರ್.ಲಕ್ಷ್ಮಣರಾವ್ ವಿಶ್ಲೇಷಿಸಿದರು.
ಅಖಿಲ ಭಾರತೀಯ ಸಾಹಿತ್ ಪರಿಷದ್, ಸುಗಮ ಸಂಗೀತಗಂಗಾ ನೇತೃತ್ವದಲ್ಲಿ ಕಲ್ಕಟ್ಟೆಪುಸ್ತಕದಮನೆ, ನಾದಚೈತನ್ಯ, ಮಲ್ಲಿಗೆಸುಗಮಸಂಗೀತ ಟ್ರಸ್ಟ್ ಸಹಯೋಗದೊಂದಿಗೆ ಚಿಕ್ಕಮಗಳೂರು ನಗರದ ಮಾಧ್ಯಮಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಕವನ ಕಟ್ಟುವ ಬಗೆ’ ಕುರಿತಂತೆ ಅವರು ಮಾತನಾಡಿದರು.
ಪ್ರತಿಭೆ, ತಾಳ್ಮೆ ಮತ್ತು ಪರಿಶ್ರಮ ಇದ್ದರೆ ಪೂರ್ಣಪ್ರಮಾಣದ ಕವಿಯಾಗಿ ಹೊಮ್ಮಬಹುದು. ಕವಿತೆಗೆ ನಿರ್ಧಿಷ್ಟ ಫಾರ್ಮುಲಾ ಇಲ್ಲ. ಕವಿತೆ ಸಂಭವಿಸುವುದೇ ಹೊರತು ಆಗುವುದಲ್ಲ. ವಿದ್ಯಮಾನ ಅನುಭವ-ಅನಿರೀಕ್ಷಿತವಾಗಿ ಮುಟ್ಟಬೇಕು. ಹೇಗೆ ಹೇಳಿದರೆ ಕೇಳುಗರನ್ನು ಮುಟ್ಟತ್ತದೆ ಎಂಬುದೇ ವಿಶೇಷ. ಮನಸ್ಸಿನಲ್ಲಿ ಯಾವಾಗ, ಹೇಗೆ, ಸಂಭವಿಸುತ್ತದೆ ಎಂಬುದು ಸ್ವತಃ ಕವಿಗೂ ಗೊತ್ತಿರುವುದಿಲ್ಲ ಎಂದ ಬಿಆರ್‍ಎಲ್, ‘ಕವಿತೆ ನಿನೇಕೆ ಪದಗಳಲ್ಲಿ ಅವಿತೆ’ ಎಂದರು.
‘ಕವಿತೆ ಕಟ್ಟುವ ಬಗೆ’ ಎಂಬ ವಿಷಯವೇ ಆಸಕ್ತಿದಾಯಕ. ನಾವಾಡುವ ಮಾತಿನಲ್ಲೆ ಕವಿತೆ ಇದೆ. ಕವಿತೆ ಕಟ್ಟುವುದನ್ನು ಹೇಳಿಕೊಡಬಹುದು, ಆದರೆ ಹುಟ್ಟುವ ಬಗೆ ಕಲಿಸಲಾಗದು. ಪ್ರತಿಭೆ ಇದ್ದವರಿಗೆ ಕವಿತೆ ಕಟ್ಟುವುದನ್ನು ಕಲಿಸಬಹುದು. ಇಂದಿನ ಬಹಳಷ್ಟು ಕವಿಗಳಿಗೆ ಕಟ್ಟುವ ಬಗೆ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟುಜನ ಬರೆಯುತ್ತಾರೆ. ಒಳ್ಳೆಯ ಐಡಿಯಾಗಳಿರುತ್ತವೆ ಆದರೆ ಕಾಯುವ ತಾಳ್ಮೆ ಕಾಡುತ್ತದೆ. ಕುದಿ ಬರುವಷ್ಟು ಕಾಯ್ದರೆ ಮಾತ್ರ ಸಾರ-ಸತ್ವ ಚೆನ್ನಾಗಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಅಡಿಗರಿಗೆ ಹತ್ತಿರ ಇದ್ದರೂ ಕೆ.ಎಸ್.ನರಸಿಂಹಸ್ವಾಮಿ ಪ್ರಭಾವ ತಮ್ಮಮೇಲೆ ಹೆಚ್ಚಾಗಿದೆ. ಬೇಂದ್ರೆ, ಅಡಿಗ, ಕುವೆಂಪು ಅವರ ಅನೇಕ ಕವಿತೆಗಳು ಶ್ರೇಷ್ಠ. ಆದರೆ ಎಲ್ಲವೂ ಅಲ್ಲ. ಏಕೆಂದರೆ ಕವಿತೆ ರೆಸಪಿ ಅವರಿಗೂ ಗೊತ್ತಿಲ್ಲ. ಭಾಷೆ, ಭಾವ, ಲಯ, ಛಂದೋಬದ್ಧತೆ, ಮನದ ತುಮುಲಗಳು, ವಿದ್ಯಮಾನ ಅನುಭವವಾಗಿ ಕವಿತೆ ಜನಪ್ರಿಯಗೊಳ್ಳುತ್ತದೆ. ಇವೆಲ್ಲವೂ ಕವಿತೆಯಲ್ಲಿ ಸಹಜವಾಗಿ ಅಂತರ್ಗತ ಎಂದು ವ್ಯಾಖ್ಯಾನಿಸಿದ ಲಕ್ಷ್ಮಣರಾವ್, ಜಾಲಿ ಬಾರ್-ಲಿಂಬೆಗಿಡ ಕವಿತೆಗಳನ್ನು ವಾಚಿಸಿ ಮೂರುತಲೆಮಾರುಗಳಲ್ಲೂ ಹರಿದಿರುವುದನ್ನು ಉಲ್ಲೇಖಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಸಕ್ತಸಾಲಿನ ಪ್ರಶಸ್ತಿಪುರಸ್ಕøತ ವಿಜ್ಞಾನ ಸಾಹಿತಿ ಡಾ.ಪ್ರದೀಪಕೆಂಜಿಗೆ ಮಾತನಾಡಿ ವಿಜ್ಞಾನ ಮತ್ತು ಸಾಹಿತ್ಯ ಜಗತ್ತಿನ ಶಾಂತಿಗೆ ಪೂರಕ. ಅಶಾಂತಿ, ದ್ವೇಷ, ಯುದ್ಧಮನಸ್ಥಿತಿ ನಮ್ಮೊಳಗೆ ಹುದುಗಿದೆ. ಮಾನವರಷ್ಟೆ ಅಲ್ಲ ಪ್ರಾಣಿಜಗತ್ತಿನಲ್ಲೂ ಇದೆ. ರಾಜಕೀಯ ಮಾಡುವುದು ಪ್ರಾಣಿಗಳಲ್ಲೂ ಇದೆ. ಮನಷ್ಯನಿಗೆ ಹೆಚ್ಚು ಹೋಲಿಕೆ ಇರುವ ಚಿಂಪಾಂಜಿಗಳಲ್ಲಿ ನಮ್ಮೆಲ್ಲ ಸ್ವಭಾವಗಳನ್ನು ಕಾಣಬಹುದೆಂದರು.
ಉಗಾಂಡದ ಕಿಬಾಲೆ ದಟ್ಟಅರಣ್ಯದಲ್ಲಿ 200 ಚಿಂಪಾಂಜಿಗಳ ವರ್ತನೆಯನ್ನು ಮೂರುದಶಕಗಳ ಕಾಲ ಅಧ್ಯಯನ ಮಾಡಿ ಸಂಶೋಧನಾತ್ಮಕವಾಗಿ ದಾಖಲಿಸಲಾಗಿದೆ ಎಂದು ವಿವರಿಸಿದ ಡಾ.ಪ್ರದೀಪ್, ಚಿಂಪಾಂಜಿಗಳು ನಮ್ಮಂತೆ ಸಭೆ ನಡೆಸಿವೆ. 120 ಮತ್ತು 60 ಚಿಂಪಾಂಜಿಗಳು ಪ್ರತ್ಯೇಕ ತಂಡಗಳಾಗಿ ವಿಭಜನೆಗೊಂಡಿವೆ. ದೊಡ್ಡಗುಂಪು 24 ಚಿಂಪಾಂಜಿಗಳನ್ನು ಕೊಲೆ ಮಾಡಿರುವುದೂ ಸೇರಿದಂತೆ ಅನೇಕ ಸಂಗತಿಗಳು ಸಾಮ್ಯತೆಯನ್ನು ತೋರಿಸಿಕೊಟ್ಟಿದೆ ಎಂದರು.
30ಸಾವಿರವರ್ಷಗಳ ಜಗತ್ತಿನ ಮಾನವ ವಿಕಾಸ ಇತಿಹಾಸದಲ್ಲಿ 1950ರಿಂದ 2020ರವರೆಗೆ ಕಳೆದ 70ವರ್ಷಗಳ ಕಾಲಘಟ್ಟದಲ್ಲಿ ಅತಿಹೆಚ್ಚು ಶಾಂತಪರ್ವ. ರಕ್ಷಣಾವೆಚ್ಚ ಒಟ್ಟು ಜಗತ್ತಿನಲ್ಲಿ ಶೇ.2.5ರಷ್ಟಿತ್ತು. ರಷ್ಯಾದೇಶ ಉಕ್ರೇನ್ ಮೇಲೆ ಧಾಳಿಮಾಡಿದ ನಂತರ ಯುದ್ಧ ಸಂಬಂಧಿ ಖರ್ಚು ವೆಚ್ಚಗಳು ಹೆಚ್ಚಿವೆ, ಈಗ ಶೇ.13ಕ್ಕೇರಿದೆ. ಟ್ರಂಪ್ ಯುದ್ಧವೆಚ್ಚವನ್ನು ಶೇ.25ಕ್ಕೇರಿಸುವ ಮನಸ್ಥಿತಿಯಲ್ಲಿದ್ದಾರೆ. ಯುದ್ಧಕ್ಕಾಗಿಯೆ ಇಷ್ಟೊಂದು ಹಣ ವೆಚ್ಚ ಮಾಡಿದರೆ ಆರೋಗ್ಯ, ಶಿಕ್ಷಣ ಮತ್ತಿತರ ಸಾಮಾಜಿಕ ಕೆಲಸಗಳಿಗೆ ಹಣದ ಕೊರತೆಯ ಜೊತೆಗೆ ಅಶಾಂತಪರ್ವ ಜಗತ್ತನ್ನು ಆವರಿಸಲಿದೆ ಎಂದು ಡಾ.ಪ್ರದೀಪ್ ಆತಂಕಿಸಿದರು.
ಸುಗಮಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಕವಿತೆ ಕುರಿತಂತೆ ಅರ್ಥಪೂರ್ಣ ಸಂವಾದ ನಡೆದಿದೆ. ಯುವಜನತೆ ಸಾಹಿತ್ಯದಲ್ಲಿ ತೊಡಗಿಕೊಳ್ಳಬೇಕು. ಹಿರಿಯರೆ ಹೆಚ್ಚು ಇಂದಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆರೋಗ್ಯವೇ ಭಾಗ್ಯ. ನಗುವೇ ಆರೋಗ್ಯದ ಮದ್ದು. ಕವಿತೆ ಸಾಹಿತ್ಯ ಆರೋಗ್ಯಕ್ಕೆ ಸಹಕಾರಿ ಎಂದ ಡಾ||ಜೆಪಿಕೆ ಓದುವ ಪ್ರವೃತ್ತಿ ಹೆಚ್ಚಾಗಬೇಕೆಂದರು.
ಅಭಿನಂದಿಸಿ ಮಾತನಾಡಿದ ಅಭಾಸಾಪ ಜಿಲ್ಲಾಧ್ಯಕ್ಷ ಸ.ಗಿರಿಜಾಶಂಕರ್, ತೇಜಸ್ವಿಯವರು ಒಪ್ಪಿಕೊಂಡ ಲೇಖಕ ಡಾ.ಪ್ರದೀಪ್ ಪರಿಸರ ವಿಜ್ಞಾನದ ಆಂತರ್ಯ ಅರ್ಥಮಾಡಿಕೊಂಡ ವಿಜ್ಞಾನಿ-ಲೇಖಕ. ಅವರ ‘ನರ-ವಾನರ’ ಅನುವಾದ ಕೃತಿಯಲ್ಲ, ನಮ್ಮ ಚಿಂಪಾಂಜಿ ವರ್ತನೆ ಅರ್ಥಮಾಡಿಕೊಂಡ ಅಪೂರ್ವಕೃತಿ ಎಂದು ಬಣ್ಣಿಸಿದರು.
ವಿಮರ್ಶಕ, ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಅಭಿನಂದನಾ ಭಾಷಣದಲ್ಲಿ ಕಾವ್ಯವನ್ನೆ ಧ್ಯಾನಿಸುವ ಕವಿ ಬಿಆರ್‍ಎಲ್. ಕವಿ-ಕವಿತೆ ಜೊತೆ ವ್ಯವಹರಿಸಿ ಅವನ್ನೆಲ್ಲ ನಮ್ಮೊಡನೆ ಭಾವದ ಜೊತೆ ದಾಟಿಸುತ್ತಿರುವ ಅಪರೂಪದ ಸಾಹಿತಿ. 200ಕ್ಕೂ ಹೆಚ್ಚು ಭಾವಗೀತೆ ರಚಿಸಿದ್ದಾರೆ. ಆಡುವಭಾಷೆ-ಹಾಡುವಭಾಷೆ ಇವರಿಗೆ ಸಿದ್ಧಿಸಿದೆ. ಬದುಕಿನ ಶೋಧ ಇವರ ಕವಿತೆಗಳಲ್ಲಿ ದಟ್ಟವಾಗಿದೆ ಎಂದು ಅಭಿನಂದಿಸಿದರು.
ನಗರದ ಪ್ರತಿಭೆಗಳಾದ ಲಾಲಿತ್ಯಅಣ್ವೇಕರ್, ರೇಖಾಪ್ರೇಮಕುಮಾರ್, ಮಲ್ಲಿಗೆಸುಧೀರ್ ಬಿಆರ್‍ಎಲ್ ಕವಿತೆಗಳಿಗೆ ದನಿಯಾದರು. ಲಕ್ಷ್ಮಣರಾವ್ ಹಾಗೂ ಪ್ರದೀಪ್ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಕಲ್ಕಟ್ಟೆಪುಸ್ತಕಮನೆಯ ಹೆಚ್.ಎಂ.ನಾಗರಾಜರಾವ್ ಸ್ವಾಗತಿಸಿ, ಅಭಾಸಾಪ ಶೃಂಗೇರಿ ವಿಭಾಗ ಸಂಯೋಜಕ ಪ್ರಭುಲಿಂಗಶಾಸ್ತ್ರಿ ನಿರೂಪಿಸಿ, ಜಿಲ್ಲಾಕಾರ್ಯದರ್ಶಿ ಪ್ರಶಾಂತಹೊಳೆಹೊನ್ನೂರು ವಂದಿಸಿದರು.
ಸುಗಮ ಸಂಗೀತಗಂಗಾ ಕಾರ್ಯದರ್ಶಿ ಮಂಜುನಾಥಕಾಮತ್, ವಿಶ್ರಾಂತಪ್ರಾಂಶುಪಾಲರಾದ ಎಚ್.ಎಸ್. ಪುಟ್ಟೇಗೌಡ, ದೇವಿಕಾ ಮತ್ತು ವಿಶ್ವಮೂರ್ತಿ, ಶಿಕ್ಷಣತಜ್ಞ ಎಂ.ಎನ್.ಷಡಕ್ಷರಿ, ಕವಿಗಳಾದ ಅರವಿಂದದೀಕ್ಷಿತ್, ಲತಾಶೇಖರ್, ಶೀಲಾ, ಲಕ್ಷಿಶಾಮರಾವ್ ಮತ್ತು ರಮೇಶಬೊಂಗಾಳೆ, ಡಾ||ಗೌರಿವರುಣ್, ಡಾ.ವರ್ಷಾ, ಬಿಸಲೇಹಳ್ಳಿ ಸೋಮಶೇಖರ್, ಬೆಂಗಳೂರಿನ ಶಿವಕುಮಾರ್, ಅಶೋಕಶೆಟ್ಟಿ, ಕುಮಾರಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.



