ಮಹಾತ್ಮಾಗಾಂಧೀಜಿಯವರ ನೇತೃತ್ವದ ಅಹಿಂಸಾತ್ಮಕ ಹೋರಾಟ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಮುಖ ಕಾರಣ ಎಂದು ಕರ್ನಾಟಕ ರಾಜ್ಯ ಇಂಧನ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು.
ಬ್ರಿಗ್ರೆಡ್ ಫೌಂಡೇಶನ್ ನಗರದ ಹೊಸಮನೆ ವೃತ್ತದಲ್ಲಿ ಭವ್ಯವಾಗಿ ನಿರ್ಮಿಸಿರುವ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ’ವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕೆಲಸ ಈ ಮೂಲಕ ಆಗಿದೆ. ಜಿಲ್ಲೆಯ ಹಿರಿಯರೂ ನಾಯಕತ್ವವಹಿಸಿ ಹೋರಾಟ ಮಾಡಿದ್ದಾರೆ. ಇದೊಂದು ಅಪೂರ್ವ ಕಾರ್ಯ. ವಿಶೇಷವಾಗಿ ಯುವಜನತೆಗೆ ಸ್ಫೂರ್ತಿ ಮತ್ತು ಪ್ರೇರಣದಾಯಕವಾಗಿ ನಿರ್ಮಾಣಗೊಂಡಿದೆ ಎಂದು ಸಚಿವರು ಬ್ರಿಗೆಡ್ ಕಾರ್ಯವನ್ನು ಶ್ಲಾಘಿಸಿದರು.
ಭಾರತ ಸ್ವಾತಂತ್ರ್ಯ ಗಳಿಸಬೇಕಾದರೆ ಕ್ರಾಂತಿಕಾರಿಗಳ ತ್ಯಾಗ ಬಲಿದಾನಗಳ ಕೊಡುಗೆ ಗಮನಾರ್ಹ. ಬ್ರಿಟೀಷ್ ಸೈನ್ಯದ ವಿರುದ್ಧ ಅನೇಕ ರಾಜಮಹಾರಾಜರೂ ಹೋರಾಟ ಮಾಡಿದ್ದಾರೆ. ಆದರೆ ಇದರಿಂದ ಸ್ವಾತಂತ್ರ್ಯ ಗಳಿಸಲಾಗಲಿಲ್ಲ. ಬ್ರಿಟೀಷರ ತುಪಾಕಿ, ಮದ್ದುಗುಂಡುಗಳ ಪರಿಣಿತಿ ವಿಶೇಷವಾಗಿತ್ತು. ಆದರೆ ಮಹಾತ್ಮಾಗಾಂಧೀಜಿ ಅವರ ಅಹಿಂಸಾ ರೀತಿಯ ಹೋರಾಟ ಬ್ರಿಟಿಷರು ಇಲ್ಲಿಂದ ತೆರಳುವಂತಾಯಿತು. ಗಾಂಧೀಜಿ ಅವರುಕೊಟ್ಟ ಸಹಿಷ್ಣುತೆ, ಸರ್ವಧರ್ಮ ಸಮಭಾವ, ರಾಮರಾಜ್ಯ ಪರಿಕಲ್ಪನೆ, ಗ್ರಾಮಸ್ವರಾಜ್ಯ ಕಾರ್ಯಕ್ರಮಗಳು ಸ್ವಾತಂತ್ರ್ಯ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂಬುದು ತಮ್ಮ ನಂಬಿಕೆ ಎಂದು ಸಚಿವ ಜಾರ್ಜ್ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಿಗ್ರೆಡ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಆರ್.ಜಯಶಂಕರ್ ಮಹಾತ್ಮಾಗಾಂಧೀಜಿ ಸೇರಿದಂತೆ ಹಲವರು ಸ್ವಾತಂತ್ರ್ಯಹೋರಾಟಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದು ಅವರೆಲ್ಲರ ನೆನಪಿಸುವ ಸ್ಮಾರಕ ನಮ್ಮೂರಿನಲ್ಲಿ ನಿರ್ಮಾಣಗೊಂಡಿದೆ. ಅವರ ಬಲಿದಾನ, ಭಾವ್ಯಕ್ಯತೆ, ಭರವಸೆ, ನಿಸ್ವಾರ್ಥವಾದ ತ್ಯಾಗ ಮನೋಭಾವ ಯುವಜನರಿಗೆ ಸ್ಫೂರ್ತಿಯಾಗಬೇಕೆಂಬ ಸದಾಶಯ ಇದೆ. ಸ್ಥಳೀಯ ಜನರಷ್ಟೆ ಅಲ್ಲ ಪ್ರವಾಸಿಗರನ್ನೂ ಸೆಳೆದು ಪ್ರೇರಣೆ ನೀಡುವ ತಾಣ ಇದಾಗಲಿದೆ ಎಂದರು.
ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು ಎಂದು ಲೋಕಮಾನ್ಯ ಬಾಲಗಂಗಾಧರ ಗುಡುಗಿದ್ದರೆ, ನಂಬಿಕೆ, ವಿಶ್ವಾಸ ಕಟ್ಟಿಕೊಟ್ಟವರು ನೆಹರು. ಸ್ವಾತಂತ್ರ್ಯ ಕೊಡೊದಲ್ಲ ಪಡೆಯುವುದು ಎಂದು ನೇತಾಜಿಸುಭಾಷ್ ಚಂದ್ರಬೋಸ್ ಹೇಳಿದ್ದರು. ಹಲವು ನಾಯಕರ ಸದ್ವಿಚಾರಗಳನ್ನು ನೆನಪಿಸುವ ಅಪೂರ್ವ ತಾಣವಾಗಿ ಸ್ಮಾರಕ ಮೈತಾಳಿದೆ. ಯುವಜನತೆಯನ್ನು ದೇಶಕಟ್ಟುವ ನಿಟ್ಟಿನಲ್ಲಿ ರೂಪುಗೊಳಿಸಲು ಸಹಕಾರಿಯಾಗಿ. ಆತ್ಮಾವಲೋಕನ ಸಂದರ್ಭವನ್ನು ಸೃಷ್ಟಿಸುವುದೆಂದು ಜಯಶಂಕರ್ ವಿವರಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಮಹಾತ್ಮಾಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರೀಗಳಂತಹ ಪುಣ್ಯಪುರುಷರ ಜನ್ಮದಿನದಂದು ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ಲೋಕಾರ್ಪಣೆಗೊಳ್ಳುತ್ತಿರುವುದು ಅರ್ಥಪೂರ್ಣ. ಚಿಕ್ಕಮಗಳೂರಿನಲ್ಲಿ ಹುಟ್ಟಿಬೆಳೆದು ಬೆಂಗಳೂರು ಸೇರಿ ತಮ್ಮದೇ ಬ್ರಿಗ್ರೆಡ್ ಸಾಮ್ರಾಜ್ಯ ನಿರ್ಮಿಸಿರುವ ಜಯಶಂಕರ್ ತಂಡ ಹುಟ್ಟೂರಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಅಂದದ ಸ್ಮಾರಕ ರಚಿಸಿರುವುದು ಅಭಿನಂದನಾರ್ಹ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ನಮ್ಮ ಕರ್ತವ್ಯವನ್ನು ನೆನಪಿಸುತ್ತದೆ. ಅಂದಿನ ಹೋರಾಟ, ಗಾಂಧೀಜಿ ಅವರ ಅನುಭವ ಜೀವಂತವಾಗಿಡಬೇಕು. ನಿರಂತರವಾದ ಸಮಾಜಜಾಗೃತಿ, ಎಲ್ಲರೂ ಒಂದೆಂಬ ಭಾವದಿಂದ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಇದು ಪ್ರೇರಕ. ಕರ್ತವ್ಯವನ್ನು ನಿರ್ವಹಿಸಿ ಹಕ್ಕನ್ನು ಕೇಳಬೇಕೆಂಬುದು ತಿಳಿಸುತ್ತದೆ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ವಿಶ್ವ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆದಿರುವ ಚಿಕ್ಕಮಗಳೂರಿನ ಹಿರಿಮೆಗೆ ಮತ್ತೊಂದು ಗರಿ ಈ ಸ್ಮಾರಕ. ಇದು ಊರಿನ ಲ್ಯಾಂಡ್‍ಮಾರ್ಕ್ ಆಗಲಿದೆ. ಜಯಶಂಕರ್ ಅವರ ಬ್ರಿಗ್ರೆಡ್ ಒಳ್ಳೆಯಕೆಲಸ ಮಾಡಿದೆ. ಶಾಲೆಯ ಮುಂಭಾಗದಲ್ಲಿ ರೂಪುಗೊಂಡಿರುವ ಸ್ಮಾರಕ ಯುವಮನಸ್ಸುಗಳಿಗೆ ಉತ್ತಮ ಸಂದೇಶ ನೀಡುತ್ತದೆ. ಇದೇ ಶಾಲೆಯಲ್ಲಿ ಜಯಶಂಕರ ಕುಟುಂಬದ 22ಮಂದಿ ಕಲಿತಿದ್ದು ಋಣತೀರಿಸುವ ಅರ್ಥಪೂರ್ಣ ಕಾರ್ಯ ನಿರ್ವಹಿಸಿದ್ದಾರೆಂದರು.
ದೂರದರ್ಶನ ನಿರೂಪಕ ಶಂಕರಪ್ರಕಾಶ್ ಕಾರ್ಯಕ್ರಮ ನಿರೂಪಿಸಿದ್ದು, ಜಯಶಂಕರ್ ಸ್ವಾಗತಿಸಿ, ಸಿಇಓ ಶಿವಯೋಗಿಕಳಸದ ವಂದಿಸಿದರು.
ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿ.ಪಂ.ಸಿಇಓ ಕೀರ್ತನಾ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ, ಸದಸ್ಯ ಕುಮಾರ, ಸ್ಮಾರಕದ ವಾಸ್ತುಶಿಲ್ಪಿ ಸಂಜಯ್, ಬ್ರಿಗ್ರೆಡ್ ನಿರ್ದೇಶಕರಾದ ಎಂ.ಆರ್.ಗುರುಮೂರ್ತಿ ಮತ್ತು ನಿರೂಪಾಶಂಕರ್ ಮತ್ತಿತರರು ವೇದಿಕೆಯಲ್ಲಿದ್ದರು.



