ಬಾಗಿನ ಅರ್ಪಣೆ ಪೂಜ್ಯನೀಯ ಆಚರಣೆಯಾಗಿದೆ. ಪರಸ್ಪರವಾಗಿ ಗೌರವ ಸೂಚಿಸುವುದು, ಶುಭ ಹಾರೈಸುವುದು ಹಾಗೂ ಸಂಬಂಧಗಳ ಬಲವರ್ಧನೆಯ ಪ್ರತೀಕವೇ ಬಾಗಿನ ವಿತರಣೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಮಂಗಳವಾರ ಸಂಜೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನವರಾತ್ರಿ ಉತ್ಸವದಲ್ಲಿ ಮಹಿಳೆಯರಿಗೆ ಬಾಗಿನ ವಿತರಿಸಿ ಮಾತನಾಡಿದರು.
ತನ್ನ ತಾಯಿ ಮೋಟಮ್ಮ ಅವರ ಮಾರ್ಗದರ್ಶನದಿಂದ ಮಹಿಳೆಯರಿಗೆ ಈ ಬಾಗೀನ ಕೊಡುವ ಸೌಭಾಗ್ಯ ದೊರಕಿದೆ. ಮಧ್ಯಾಹ್ನ ಕಳಸದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಸುಮಾರು 1800 ಮಹಿಳೆಯರಿಗೆ ಬಾಗಿನ ವಿತರಿಸಿ ಬಂದಿದ್ದೇನೆ. ಇಲ್ಲಿ ಕೂಡ ಮಹಿಳೆಯರು ಸರತಿ ಸಾಲಿನಲ್ಲಿ ಬಂದು ಬಾಗೀನ ಸ್ವೀಕರಿಸಿ, ದೇವಿ ದರ್ಶನ ಪಡೆದು ಉತ್ತಮ ಬದುಕು ಸಾಗಿಸುವಂತಾಗಲಿ ಎಂದು ಆಶಿಸಿದ ಅವರು, ಪ್ರತಿ ವರ್ಷ ಬಾಗಿನ ಕೊಡುವ ಪುಣ್ಯದ ಕಾರ್ಯಕ್ಕೆ ಎಲ್ಲರ ಸಹಕಾರ ಹಾಗೂ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದರು.
ಶ್ರೀ ದುರ್ಗ ಸಮಿತಿ ಅಧ್ಯಕ್ಷೆ ಹಾಗೂ ಮಾಜಿ ಸಚಿವೆ ಮೋಟಮ್ಮ, ಕಾರ್ಯಾಧ್ಯಕ್ಷ ಕೆ.ಮಂಚೇಗೌಡ, ಜಿಲ್ಲಾ ಕಸಪಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಮಂಚೇಗೌಡ, ಪ.ಪಂ. ಸದಸ್ಯೆ ಗೀತಾ ರಂಜನ್ ಅಜಿತ್‍ಕುಮಾರ್ ಮತ್ತಿತರರಿದ್ದರು.



