ಬಡವರಿಗೆ ಅತ್ಯವಶ್ಯಕವಾದ ಬಿಪಿಎಲ್ ಕಾರ್ಡ್‍ಗಳನ್ನು ಅನರ್ಹತೆ ಹೆಸರಲ್ಲಿ ರಾಜ್ಯ ಸರಕಾರ ರದ್ದು ಮಾಡುತ್ತಿರುವುದು ಸರಿಯಲ್ಲ ಎಂದು ಮೂಡಿಗೆರೆ ತಾಲ್ಲೂಕು ಬಿಜೆಪಿ ವಕ್ತಾರ ವಿನಯ್ ಹಳೆಕೋಟೆ ತಿಳಿಸಿದ್ದಾರೆ.
ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. ಇದು ಸಾಲದೆಂಬಂತೆ ಅದೇ ಗ್ಯಾರಂಟಿ ಸಮಿತಿ ಹೆಸರಲ್ಲಿ ತನ್ನ ಕಾರ್ಯಕರ್ತರಿಗೆ ಹುದ್ದೆ ನೀಡಿ, ತಾಲೂಕು ಗಳಲ್ಲಿ ಅರ್ಹ ಬಿಪಿಎಲ್ ಕಾರ್ಡ್‍ದಾರರನ್ನು ಅನರ್ಹಗೊಳಿಸುವು ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಬಾಡಿಗೆ ವಾಹನ ಇಟ್ಟುಕೊಂಡವರ ಬಿಬಿಎಲ್ ಕಾರ್ಡ್ ರದ್ದುಗೊಳಿಸಲಾಗಿದೆ. ಅಲ್ಲದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಡ ಮಕ್ಕಳ ಕುಟುಂಬ, ಯಾವುದೇ ಆದಾಯವಿಲ್ಲದ ನಿವೇಶನ ಹೊಂದಿದ ಕುಟುಂಬದ ಕಾರ್ಡನ್ನು ರದ್ದು ಮಾಡಿ, ಬಡವರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಾಗಿದೆ ಎಂದು ದೂರಿದ್ದಾರೆ.
ಈಗ ರದ್ದಾಗಿರುವ ಬಡ ಕುಟುಂಬದ ಸದಸ್ಯರಿಗೆ ಆರೋಗ್ಯ ಕೈಕೊಟ್ಟಲ್ಲಿ ಆಸ್ಪತ್ರೆ ಚಿಕಿತ್ಸೆ ಪಡೆಯಲು ಸರಕಾರದಿಂದ ಯಾವುದೇ ಸೌಲತ್ತುಗಳು ದೊರಕುವುದಿಲ್ಲ. ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಸರಕಾರ ಚಿಂತನೆ ಮಾಡದೇ ಬಡವರ ಮೇಲೆ ಗದಪ್ರಹಾರ ಮಾಡಲು ಮುಂದಾಗಿದೆ. ಹಿಂದೆ ಬಿಜೆಪಿ ಸರಕಾರ ರೇಷನ್ ಕಾರ್ಡ್ ಪರಿಷ್ಕರಣೆ ಮಾಡಲು ಮುಂದಾದಾಗ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಅಪ ಪ್ರಚಾರ ಮಾಡಿದ್ದರು. ಈಗ ಅದೇ ಕಾಂಗ್ರೆಸ್‍ನ ಆಡಳಿತ ಅನರ್ಹ ಹೆಸರಲ್ಲಿ ಕಾರ್ಡ್‍ಗಳನ್ನು ರದ್ದು ಮಾಡುತ್ತಿರುವುದು ಸರಿಯಲ್ಲ. ಬಡವರ ವಿರುದ್ಧ ರೂಪಿಸಿರುವ ಇಂತಹ ಯೋಜನೆ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಬಿಜೆಪಿ ವತಿಯಿಂದ ಹೋರಾಟ ರೂಪಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.



