ಚಿಕ್ಕಮಗಳೂರು ಜಿಲ್ಲೆಯ ಎನ್‍ಆರ್ ಪುರ ಸುತ್ತಮುತ್ತ ಕಳೆದ ಎರಡು ವರ್ಷದಿಂದ ರೈತರಿಗೆ ಹಾಗೂ ಗ್ರಾಮದ ಜನರಿಗೆ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಈ ಆನೆ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ ಎರಡು ವರ್ಷದಿಂದ ಉಪಟಳ ನೀಡುತ್ತಿತ್ತು. ವಗಡೆ, ಕಾನೂರು, ಬಾಳೆಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ, ಹೊರಬೈಲು, ನೇರ್ಲೆ, ಗೋಣಿಕೊಪ್ಪ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಈ ಸಲಗವು ನಿರಂತರವಾಗಿ ಬೆಳೆ ಹಾನಿ ಮಾಡುತ್ತಿತ್ತು. ಇದರಿಂದ ರೈತರ ತೋಟಗಳಿಗೆ ಅಪಾರ ನಷ್ಟ ಉಂಟಾಗಿತ್ತು.
ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆನೆ ಸೆರೆ ಹಿಡಿಯುವಂತೆ ಆದೇಶಿಸಿದ್ದರು. ಹಾಗಾಗಿ ಸಕ್ರೆಬೈಲಿನಿಂದ ಮೂರು ಕುಮ್ಕಿ ಆನೆಗಳು ಹಾಗೂ ಕುಶಾಲನಗರದ ದುಬಾರೆಯಿಂದ ಮೂರು ಆನೆಗಳು ಸೇರಿ ಒಟ್ಟು 6 ಕುಮ್ಕಿ ಆನೆಗಳು ಕಾರ್ಯಾಚರಣೆಯಗೆ ಆಗಮಿಸಿದ್ದವು. ಸೋಮವಾರ ಬೆಳಿಗ್ಗೆ ಗುಡ್ಡೆಹಳ್ಳ ಬಳಿ ಅರವಳಿಕೆ ನೀಡಿ ಆನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.



