ನವೆಂಬರ್ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ (Nomination rules) ಬದಲಾವಣೆ ಆಗಲಿದ್ದು, ಬ್ಯಾಂಕ್ ಅಕೌಂಟ್, ಲಾಕರ್‌ಗಳಿಗೆ 1ಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.
ಈವರೆಗೆ 1 ಬ್ಯಾಂಕ್ ಖಾತೆ ಅಥವಾ ಲಾಕರ್‌ಗಳಿಗೆ ಇದ್ದ ಒಬ್ಬರು ನಾಮಿನಿ ಬದಲಿಗೆ ನಾಲ್ವರು ನಾಮಿನಿಗಳಿಗೆ ಅವಕಾಶ ಸಿಗಲಿದೆ. ಈ ಮೂಲಕ ಕ್ಲೈಮ್ ಸೆಟಲ್‌ಮೆಂಟ್‌ಗಳು ಮತ್ತಷ್ಟು ನೇರ ಹಾಗೂ ಸುಲಭವಾಗಲಿದೆ. ಡೆಪಾಸಿಟ್ ವೇಳೆಯೇ ಖಾತೆದಾರರು 4 ನಾಮಿನಿಗಳನ್ನು ಆಯ್ಕೆ ಮಾಡಬಹುದು. ಠೇವಣಿದಾರರು ಮೃತರಾದ ನಂತರ ಇದರಲ್ಲಿ ಎಲ್ಲರೂ ಏಕಕಾಲದಲ್ಲಿ ಅಥವಾ ಕ್ರಮಸಂಖ್ಯೆಗೆ ಅನುಗುಣವಾಗಿ ಖಾತೆದಾರರ ಹಣಕಾಸಿಗೆ ಉತ್ತರಾಧಿಕಾರಿಗಳಾಗುವ ಅವಕಾಶ ನೀಡಲಾಗಿದೆ.
ಇದರಿಂದಾಗಿ ಗೊಂದಲ ಇಲ್ಲದೇ ನಿಗದಿತ ಹಣಕಾಸಿನ ಭಾಗವು ಆ ನಾಮಿನಿಗಳಿಗೆ ನೇರವಾಗಿ ವರ್ಗಾವಣೆ ಆಗಲಿದೆ. ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯಿದೆ-2025 ನವೆಂಬರ್ 1ರಿಂದ ಜಾರಿಗೆ ಬರಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ಹೇಳಿದೆ.
ಈ ಹಿಂದೆ ಒಬ್ಬರೇ ನಾಮಿನಿ ನಿಯದಲ್ಲಿ ಕೆಲವೊಂದು ಗೊಂದಲಗಳು ಏರ್ಪಡುತ್ತಿದ್ದವು. ನಾಮಿನಿ ವ್ಯಕ್ತಿ ಮೃತಪಟ್ಟಾಗ ಹೊಸದಾಗಿ ನಾಮಿನಿಯನ್ನು ಖಾತೆಯ ವಿವರಗಳಿಗೆ ಸೇರಿಸಬೇಕಾಗಿತ್ತು. ಈಗ ಕ್ರಮ ಸಂಖ್ಯೆಗೆ ಅನುಗುಣವಾಗಿ ನಾಲ್ವರು ನಾಮಿನಿಗಳನ್ನು ಸೇರಿಸಬಹುದಾಗಿದೆ. ಏಕಕಾಲದಲ್ಲಿ ಎಲ್ಲಾ ನಾಮಿನಿಗಳಿಗೆ ಅಥವಾ ಮೊದಲ ನಾಮಿನಿಗೆ ಮೊದಲ ಪ್ರಾಶಸ್ತ್ಯ ರೀತಿಯಲ್ಲಿಯೂ ಆಯ್ಕೆ ಮಾಡಿಕೊಳ್ಳಲು ಅವಕಾಶವಿರಲಿದೆ. ಠೇವಣಿದಾರರು ಅಥವಾ ಖಾತೆದಾರರು ಮೃತರಾದ ನಂತರ ನಾಮಿನಿದಾರರ ಕ್ರಮಸಂಖ್ಯೆಗೆ ಅನುಗುಣವಾಗಿ ಹಣಕಾಸಿಗೆ ಉತ್ತರಾಧಿಕಾರಿಗಳಾಗಲಿದ್ದಾರೆ.
ಇದು ಕೇವಲ ಆಯ್ಕೆಯಷ್ಟೇ ಖಾತೆದಾರರ ಇಚ್ಚೆಗೆ ಸಂಬಂಧಿಸಿರುತ್ತದೆ. ಅವರು ಒಂದು ನಾಮಿನಿ, ಎರಡು ನಾಮಿನಿ, ಮೂರು ನಾಮಿನಿ ಅಥವಾ ನಾಲ್ವರು ನಾಮಿನಿದಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಮೃತಪಟ್ಟನಂತರ ಏಕಕಾಲದಲ್ಲಿ ಸೂಚಿಸಿದ ಎಲ್ಲಾ ನಾಮಿನಿಗಳಿಗೂ ಸಮ ಪ್ರಮಾಣದಲ್ಲಿ ಅಥವಾ ಖಾತೆದಾರರು ಸೂಚಿಸಿದ ಶೇಕಡಾವಾರು ಪ್ರಮಾಣದಲ್ಲಿ ಹಣವನ್ನು ಹಂಚಿಕೆ ಮಾಡುವ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬಹುದು.
ಅಥವಾ ಕ್ರಮಸಂಖ್ಯೆಗೆ ಅನುಗುಣವಾಗಿಯೂ ನಾಮಿನಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕ್ರಮ ಸಂಖ್ಯೆಗೆ ಅನುಗುಣವಾಗಿ ನಾಮಿನಿ ಆಯ್ಕೆ ಮಾಡಿಕೊಂಡರೆ ಮೊದಲನೆ ನಾಮಿನಿ ಮೃತಪಟ್ಟರೆ ಹಣಕ್ಕೆ ಎರಡನೇ ನಾಮಿನಿ ಹಕ್ಕುದಾರರಾಗುತ್ತಾರೆ, ಒಂದು ಮತ್ತು ಎರಡನೇ ನಾಮಿನಿ ಇಬ್ಬರು ತೀರಿಕೊಂಡಿದ್ದರೆ ಮೂರನೇ ನಾಮಿನಿ ಹಕ್ಕುದಾರರರಾಗುತ್ತಾರೆ. ಮೊದಲ ಮೂವರು ತೀರಿಕೊಂಡಿದ್ದರೆ ನಾಲ್ಕನೇ ನಾಮಿನಿ ಹಕ್ಕುದಾರರಾಗಿರುತ್ತಾರೆ.
ಆದರೆ ಲಾಕರ್ ಗಳಲ್ಲಿ ಇಟ್ಟ ಚಿನ್ನಾಭರಣ ಅಥವಾ ಇತರೆ ಸಂಪತ್ತುಗಳ ಮೇಲಿನ ನಾಮಿನಿ ಹಕ್ಕನ್ನು ಕ್ರಮಸಂಖ್ಯೆಗೆ ಅನುಗುಣವಾಗಿಯೇ ಆಯ್ಕೆ ಮಾಡಿಕೊಳ್ಳಲು ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಏಕಕಾಲದಲ್ಲಿ ಎಲ್ಲಾ ನಾಮಿನಿಗಳಿಗೂ ಹಕ್ಕು ಇರುವುದಿಲ್ಲ.
ಈಗಾಗಲೇ ಹೊಂದಿರುವ ಖಾತೆಗಳಿಗೂ ನಿಗದಿತ ಫಾರಂಗಳನ್ನು ಭರ್ತಿ ಮಾಡಿ ಹೊಸ ನಿಯಮದಂತೆ ನಾಮಿನಿಗಳನ್ನು ಸೇರಿಸಲು ಅವಕಾಶವಿದೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಸ್ಪಷ್ಟನೆ ದೊರೆತಿಲ್ಲ.



