40 ವರ್ಷದ ಹಿಂದೆ ಕಂದಾಯ ಭೂಮಿ ಸೇರಿದಂತೆ ತಲತಲಾಂತರದಿಂದ ಕೃಷಿ ಮಾಡಿಕೊಂಡು ಬಂದಿದ್ದ ಭೂಮಿಯನ್ನು ಇದೀಗ ಎಸ್‍ಐಟಿ ಮೂಲಕ ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾಗಿರುವ ಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಎಸ್‍ಐಟಿ ನೇಮಕ ರದ್ದುಪಡಿಸಬೇಕು ಎಂದು ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 40 ವರ್ಷದ ಹಿಂದೆ ಕಂದಾಯ ಇಲಾಖೆ ಗಮನಕ್ಕೆ ಬಾರದೆ ಕಂದಾಯ ಭೂಮಿಯಲ್ಲಿ ಅರಣ್ಯ ಇಲಾಖೆಯು ಗಿಡ ಬೆಳೆಸಿ ಇದೀಗ ಅರಣ್ಯ ಭೂಮಿ ಎಂದರೆ ಒಪ್ಪಲು ಸಾಧ್ಯವಿಲ್ಲ. ಅಲ್ಲಿ ತಲತಲಾಂತರದಿಂದ ರೈತರು, ಕೂಲಿ ಕಾರ್ಮಿಕರು, ನಿವಾಸಿಗಳಿದ್ದರೂ ಕೂಡ ಇದನ್ನು ಪರಿಗಣಿಸದೇ ಎಸಿ ರೂಮ್ ನಲ್ಲಿ ಕುಳಿತು, ಅರಣ್ಯ ಕಾಯಿದೆ 4/1 ನೋಟಿಫಿಕೇಷನ್ ಮಾಡಲಾಗಿದೆ. ಇದರಿಂದ ರೈತರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಹೇಳಿದರು.
ಹಿಂದೆ 4/1 ನೋಟಿಫಿಕೇಷನ್ ಮಾಡುವಾಗ ರೈತರಿಗೆ ಕನಿಷ್ಟ ಒಂದು ನೋಟೀಸು ನೀಡಿಲ್ಲ. ಅಲ್ಲದೇ ಯಾವ ರೈತರ ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳ ಗಮಕ್ಕೂ ತಂದಿರಲಿಲ್ಲ. ಈಗ 40 ವರ್ಷ ಕಳೆದ ನಂತರ ಈಗ ಏಕಾಏಕಿ ನೋಟಿಸ್ ಕೊಡಲಾರಂಭಿಸಿದ್ದಾರೆ. ಡೀಮ್ಡ್ ಅರಣ್ಯ ಪ್ರದೇಶದ ಬಗ್ಗೆ ಸುಪ್ರೀಂ ಕೋರ್ಟ್ ಮರು ಪರಿಶೀಲಿಸಲು ಆದೇಶ ನೀಡಿದೆ. ಇದಿನ್ನೂ ತೀರ್ಮಾನಗೊಂಡಿಲ್ಲ. ಅದೇ ರೀತಿ 4/1 ಕೂಡ ಇತ್ಯರ್ಥಗೊಂಡಿಲ್ಲ. ಹಾಗಾಗಿ ನೋಟೀಸು ನೀಡುವುದನ್ನು ನಿಲ್ಲಸಬೇಕು. ಜನರನ್ನು ಹೊರಗೆ ನೂಕಿ ಅರಣ್ಯ ಉಳಿಸಲು ಸಾಧ್ಯವಿಲ್ಲ. ಒಂದು ವೇಳೆ ರೈತರಿಗೆ ತೊಂದರೆ ಕೊಡಲು ಮುಂದಾದರೆ ಸ್ಥಳದಲ್ಲೇ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
******



