ಇತ್ತೀಚೆಗೆ ನಡೆದ ಚಿಕ್ಕಮಗಳೂರು ಜಿಲ್ಲಾ ಯುವಜನೋತ್ಸವ ಕಾರ್ಯಕ್ರಮದಲ್ಲಿ ತೀರ್ಪುಗಾರರ ನಿರ್ಲಕ್ಷ್ಯದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕಿದ್ದ ನಮ್ಮ ಕಲಾ ಸಂಘಕ್ಕೆ ದ್ರೋಹವೆಸಗಲಾಗಿದೆ ಎಂದು ಮೂಡಿಗೆರೆ ಮಿತ್ರ ಜಾನಪದ ಕಲಾ ಸಂಘದ ಸದಸ್ಯ ಕೆ.ಸಿ ಚಂದ್ರಶೇಖರ್ ದೂರಿದರು.
ಅವರು ಶನಿವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವೆಂಬರ್ 4ರಂದು ಚಿಕ್ಕಮಗಳೂರು ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಕಲಾ ಯುವ ಸಂಘಗಳ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜಾನಪದಗೀತೆ ಮತ್ತು ಜಾನಪದ ನೃತ್ಯ ಸ್ಪರ್ಧೆಯಲ್ಲಿ ನಮ್ಮ ತಂಡವು ಭಾಗವಹಿಸಿ ಗೆಲುವು ಸಾಧಿಸಿರುವುದು ಅಂಕಪಟ್ಟಿಯಲ್ಲಿ ಸ್ಪಷ್ಟವಾಗಿದೆ. ಆದರೆ ಈ ಸ್ಪರ್ಧೆಗೆ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಶಿವಕುಮಾರ್ ಬ್ಯಾರುವಳ್ಳಿ, ನೀಡಿರುವ ಅಂಕಪಟ್ಟಿಯಲ್ಲಿರುವ ಫಲಿತಾಂಶ ಹೊರತುಪಡಿಸಿ ಡಾ.ಪಿ.ಗೌರೀಶ್ ಮತ್ತು ಕೆ.ಸುಜಾತ ಅವರು ನೀಡಿರುವ ಅಂಕಗಳಲ್ಲಿ ತಿದ್ದಿಪಡಿಯಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಇದರಿಂದ ತಮ್ಮ ತಂಡಕ್ಕೆ ಮೋಸವಾಗಿದೆ ಎಂದು ಹೇಳಿದರು.
ಈ ಪ್ರಕ್ರಿಯೆ ಗಮಿನಿಸದರೆ ಯಾರೋ ಪ್ರಭಾವಿ ವ್ಯಕ್ತಿಗಳು ಪ್ರಭಾವ ಬೀರಿ ಡಾ.ಪಿ.ಗೌರೀಶ್ ಮತ್ತು ಕೆ.ಸುಜಾತ ತೀರ್ಪುಗಾರರ ಮೇಲೆ ಒತ್ತಡ ಅಥವಾ ಆಮಿಷ ಬೀರಿ, ಗೆಲುವು ಪಡೆಯಬೇಕಿದ್ದ ನಮ್ಮ ತಂಡವನ್ನು ಅಂಕಪಟ್ಟಿ ತಿದ್ದುವ ಮೂಲಕ ಸೋಲಿಸಿ, ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ ತಂಡ ಹಾಗೂ ಜೈಬೀಮ್ ಕಲಾ ತಂಡವನ್ನು ಗೆಲ್ಲಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗಿದೆ.
ಹಾಗಾಗಿ ಪಾರದರ್ಶಕತೆ ಇಲ್ಲದ ಫಲಿತಾಂಶ ತಡೆ ಹಿಡಿದು, ತಿದ್ದುಪಡಿ ಮಾಡುವ ಮುನ್ನ ಅಂಕ ಪಟ್ಟಿಯಲ್ಲಿ ನಮೂದಿಸಿದ ಅಂಕಗಳ ಆಧಾರದ ಮೇಲೆ ನಮ್ಮ ತಂಡಕ್ಕೆ ಪ್ರಥಮ ಸ್ಥಾನ ಘೋಷಣೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಬೇಕು. ಇಲ್ಲವಾದರೆ ಯಾವುದೇ ತಂಡವನ್ನು ಕಳಿಸಬಾರದು.
ಈ ಘಟನೆಗೆ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಬಾಲಾಜಿ ಕಾರಣವಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹಾಗಾಗಿ ಅವರನ್ನು ಇನ್ನು ಮುಂದೆ ಯಾವುದೇ ಯುವ ಜನೋತ್ಸವದಲ್ಲಿ ಭಾಗವಹಿಸದಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಿತ್ರ ಜಾನಪದ ಕಲಾ ಸಂಘದ ಸದಸ್ಯರಾದ ಜಯಪಾಲ್, ನವೀನ್ ಕಣಚೂರು, ಸುನೀಲ್ ಹಂತೂರು, ಶಶಿ ಜೇನುಬೈಲ್ ಉಪಸ್ಥಿತರಿದ್ದರು
*****



