ಮೂಡಿಗೆರೆ ಎಂ.ಜಿ.ಎಂ. ಸರ್ಕಾರಿ ಆಸ್ಪತ್ರೆಯ ನುರಿತ ಮೂಳೆತಜ್ಞರಾಗಿದ್ದ ಡಾ. ಶ್ರೀನಿವಾಸ ಮೂರ್ತಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದವರಾದ ಡಾ. ಶ್ರೀನಿವಾಸ ಮೂರ್ತಿ ಕಳೆದ ಒಂದೂವರೆ ವರ್ಷದಿಂದ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಮೂಳೆ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ನವೆಂಬರ್ 7ರ ಶುಕ್ರವಾರ ಸಂಜೆವರೆಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ ಸಂಜೆ ಕೊಳ್ಳೆಗಾಲಕ್ಕೆ ತೆರಳಿದ್ದ ಶ್ರೀನಿವಾಸ ಮೂರ್ತಿಯವರು ಶನಿವಾರ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತಿಮ ಸಂಸ್ಕಾರ ಇಂದು ಭಾನುವಾರ ಕೊಳ್ಳೆಗಾಲದಲ್ಲಿ ನೆರವೇರಿಲಿದೆ.
ಮೂಳೆ ತಜ್ಞರಾಗಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ, ಕಳೆದ ಒಂದೂವರೆ ವರ್ಷದಿಂದ ಮೂಡಿಗೆರೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉತ್ತಮ ಸೇವಾ ಮನೋಭಾವನೆ ಹೊಂದಿದ್ದ ಇವರು ಮೂಳೆ ಚಿಕಿತ್ಸೆಯಲ್ಲಿ ಅತ್ಯಂತ ಪರಿಣತಿ ಹೊಂದಿದ್ದರು. ಅಂಗವೈಕಲ್ಯತೆ ಹೊಂದಿದ್ದರೂ ಅದನ್ನು ಲೆಕ್ಕಿಸದೇ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದರು.
ಡಾ. ಶ್ರೀನಿವಾಸ ಮೂರ್ತಿಯವರ ಅಕಾಲಿಕ ನಿಧನಕ್ಕೆ ಮೂಡಿಗೆರೆ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ. ಎಂ.ಜಿ.ಎಂ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕ ಹಾಗೂ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ವರ್ಗ, ಎಂಜಿಎಂ ಆಸ್ಪತ್ರೆ ಟ್ರಸ್ಟ್ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



