ಶಿಕ್ಷಣಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿರುವುದು ಉತ್ತಮ ಎಂದು ಚಿಕ್ಕಮಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಕರೆ ನೀಡಿದರು.
ಚಿಕ್ಕಮಗಳೂರು ರೋಟರಿಕ್ಲಬ್ ನಗರದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ‘ಯುವ ಚೇತನ 2025-26’ ಪ್ರತಿಭೋತ್ಸವವನ್ನು ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಭ್ಯಾಸದ ಸಂದರ್ಭದಲ್ಲಿ ಓದಿನ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಾಲತಾಣಗಳಿಂದ ಅಂತರ ಕಾಯ್ದುಕೊಳ್ಳಬೇಕು. ಜಾಲತಾಣಗಳು ಪ್ರಾಥಮಿಕ-ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅನಿವಾರ್ಯವೆನಲ್ಲ. ಮಹಾನ್ ಸಾಧಕರು ಜಾಲತಾಣ ಬಳಸಿದವರಲ್ಲ ಎಂದ ರುದ್ರಪ್ಪ, ಇಂದಿನ ಯುವಕರು ವಿಶೇಷವಾಗಿ ರೀಲ್ಸನ ಗೀಳಿಗೆ ಬಿದ್ದಿರುವುದು ಆತಂಕದಾಯಕ. ಪಠ್ಯದಲ್ಲಿರುವ ಪದ್ಯದ ಸಾಲು-ಅರ್ಥ ನೆನಪಿರದಿದ್ದರೂ ಬಹುತೇಕರಿಗೆ ರೀಲ್ಸ್‍ನ ಪ್ರತಿ ಪದವೂ ನೆನಪಿರುತ್ತದೆ. ಓದುವ ವಯಸ್ಸಿನಲ್ಲಿ ತಲೆತಗ್ಗಿಸಿ ಓದಿದರೆ ಮುಂದೆ ಜೀವನ ಪರ್ಯಂತ ತಲೆಯೆತ್ತಿ ಬಾಳಲು ಸಾಧ್ಯವಾಗುತ್ತದೆ ಎಂದರು.
ಇಂದು ಯುವಜನರಲ್ಲಿ ಸಾಮಾನ್ಯವಿಜ್ಞಾನದ ಆಸಕ್ತಿ ಕುಂದಿದೆ. ವಾಸ್ತವವಾಗಿ ವಿಜ್ಞಾನದ ಆವಿಷ್ಕಾರಗಳು ಎಲ್ಲ ರಂಗಗಳಲ್ಲೂ ವ್ಯಾಪಿಸಿದ್ದು ಅದರ ಲಾಭ ಪಡೆಯಲು ವಿಜ್ಞಾನ ಕಲಿಕೆ ಅನಿವಾರ್ಯ. ವಿಫುಲ ಅವಕಾಶಗಳು ಇಲ್ಲಿ ಸಿಗುತ್ತವೆ. ಮೆಡಿಕಲ್-ಇಂಜಿನಿಯರಿಂಗ್ ಶಿಕ್ಷಣಕಷ್ಟೆ ವಿಜ್ಞಾನ ಕಲಿಕೆ ಸೀಮಿತವಾಗಿರುವುದು ಸರಿಯಲ್ಲ ಎಂದ ಬಿಇಓ ರುದ್ರಪ್ಪ ಶಿಕ್ಷಣದ ಸಬಲೀಕರಣಕ್ಕೆ ರೋಟರಿ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ವಲಯ 7ರ ಸಹಾಯಕ ರಾಜ್ಯಪಾಲ ತರೀಕೆರೆಯ ಪ್ರವೀಣ್‍ನಾಹರ್ ಮುಖ್ಯಅತಿಥಿಗಳಾಗಿ ಮಾತನಾಡಿ ಮೂರು ದಶಕಗಳಿಂದ ಚಿಕ್ಕಮಗಳೂರು ರೋಟರಿಕ್ಲಬ್ ಯುವಕರಿಗೆ ಉತ್ತಮ ಅವಕಾಶ ಕಲ್ಪಿಸಿ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿಕೊಂಡು ಬಂದಿರುವುದು ಮಾದರಿ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎನ್.ಪಿ.ಲಿಖಿತ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸಲು ಯುವಚೇತನ ಪ್ರತಿಭೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಬಹುಮಾನಕ್ಕಿಂತ ಪಾಲ್ಗೊಳ್ಳುವಿಕೆ ಹೆಚ್ಚಿನದು. ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಸ್ಪರ್ಧಿಗಳು ಶಿಸ್ತುಬದ್ಧವಾಗಿ ನಿಯಮಗಳೊಂದಿಗೆ ಭಾಗವಹಿಸಬೇಕು ಎಂದರು.
ರೋಟರಿ ಬೆಳೆದುಬಂದ ಹಾದಿಯನ್ನು ಹರ್ಷಿತ್ ಡಿ.ವಶಿಷ್ಠ ವಿವರಿಸಿದರು. ಸ್ಪರ್ಧೆಯ ವಿವರಗಳನ್ನು ಯುವಚೇತನದ ಅಧ್ಯಕ್ಷ ಎಂ.ಎಸ್.ಕಿಶನ್ ತಿಳಿಸಿದರು. ಲಿಖಿತ್ ಸ್ವಾಗತಿಸಿ, ನಿಕಟಪೂರ್ವಅಧ್ಯಕ್ಷ ಎಂ.ಎಲ್.ಸುಜಿತ್ ಪ್ರಾರ್ಥಿಸಿದರು. ಯುವಚೇತನ ಸಹಅಧ್ಯಕ್ಷ ಮನೋಜಬೈಸಾನ್ ವಂದಿಸಿದರು. ಯುವಚೇತನದ ನಿರ್ದೇಶಕ ಫಣಿಂದ್ರನಾಡಿಗ್ ಪ್ರಾಸ್ತಾವಿಸಿದರು.
*************************

‘ಯುವಚೇತನ 2025-26’ರ ಮುಕ್ತಾಯ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಉಪಮುಖ್ಯಾಧಿಕಾರಿ ತಿಪ್ಪೆಸ್ವಾಮಿ ಮಾತನಾಡಿ :
ಆಧುನಿಕತೆ ಆವಿಷ್ಕಾರಗಳ ಹಿನ್ನಲೆಯಲ್ಲಿ ಎಲ್ಲ ರಂಗಗಳಲ್ಲೂ ಇಂದು ಸ್ಪರ್ಧೆ ಏರ್ಪಟ್ಟಿದೆ. ವಿದ್ಯಾರ್ಥಿ ಯುವಜನರು ಸ್ಪರ್ಧೆಎದುರಿಸಲು ತಯಾರಿ ನಡೆಸಿ ಸಿದ್ಧರಾಗಬೇಕು. ಯುವ ಚೇತನದಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು. ಆಸಕ್ತ ಕ್ಷೇತ್ರದಲ್ಲಿ ನಿರಂತರ ಪ್ರಯತ್ನ ಅಭ್ಯಾಸ ಆಸಕ್ತಿ, ಪರಿಶ್ರಮ ಸಾಧನೆಗೆ ಮೆಟ್ಟಿಲುಗಳು ಎಂದರು.
ಯುವಕರು ದೇಶದ ಶಕ್ತಿ. ಸನ್ಮಾರ್ಗದಲ್ಲಿ ಯುವಜನರನ್ನು ಸಮಾಜ ಪೋಷಿಸಿ ಬೆಳೆಸಿದರೆ ಅವರು ದೇಶಕ್ಕೆ ಆಸ್ತಿಯಾಗುತ್ತಾರೆ. ಇದರಿಂದ ಸದೃಢಸಮಾಜ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದ ತಿಪ್ಪೇಸ್ವಾಮಿ, ಮನೆಯೆ ಮೊದಲ ಪಾಠಶಾಲೆ. ಮೊದಲ ಕಲಿಕೆ ಆರಂಭವಾಗುವುದು ಮನೆಯಿಂದಲೇ ಎಂಬುದನ್ನು ಪೋಷಕರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಮುಂದೆ ಗುರಿ ಹಿಂದೆ ಗುರು ಇದ್ದಾಗ ಸಾಧನೆ ಸಾಧ್ಯ. ಹಿಂದೆಲ್ಲ ಗುರುವೇ ನಮಃ ಎನ್ನಲಾಗುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಇಂದು ಗುರು ಏನು ಮಹಾ ಎನ್ನುವಂತಾಗಿದೆ. ಜವಾಬ್ದಾರಿಯುತ ಪ್ರಜೆಗಳಾಗಿ ಹಿರಿಯರು ವರ್ತಿಸಬೇಕು. ಮಕ್ಕಳಿಗೆ ಆದಷ್ಟು ಮೊಬೈಲ್ ಕೊಡಬಾರದು. ಗೊತ್ತಿಲ್ಲದ ಅಪ್ಲಿಕೇಷನ್ ಬಳಕೆ ಬೇಡ. ಇದರಿಂದ ಲಕ್ಷಾಂತರ ರೂಪಾಯಿ ಕಳೆದಕೊಂಡ ಉದಾಹರಣೆಗಳಿವೆ ಎಂದ ಡಿವೈಎಸ್‍ಪಿ ತಿಪ್ಪೇಸ್ವಾಮಿ, ಮೊಬೈಲ್‍ನಲ್ಲಿ ವೈಯಕ್ತಿಕ ಫೋಟೊಗಳನ್ನು ಹಾಕುವುದು ಬೇಡ ಎಂದು ಸಲಹೆ ಮಾಡಿದರು.
ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸುಶಿಕ್ಷಿತರೇ ಹೆಚ್ಚು ಇದರಲ್ಲಿ ಬಲಿಯಾಗು ತ್ತಿರುವುದು ವಿಷಾದನೀಯ. ಅಪರಿಚಿತರ ಕರೆಗಳಿಗೆ ಮಾತೃಭಾಷೆಯಲ್ಲೆ ಉತ್ತರಿಸುವುದನ್ನು ಅಭ್ಯಾಸ ಮಾಡಿದರೆ ಅರ್ಧದಷ್ಟು ತೊಂದರೆಗೊಳಗಾಗುವುದು ತಪ್ಪುತ್ತದೆ. ಹಿಂದಿ ಅಥವಾ ಇಂಗ್ಲೀಷ್‍ನಲ್ಲಿ ಮಾತನಾಡುತ್ತಾ ಒಂದುರೀತಿಯಲ್ಲಿ ಹಿಪ್ನೋಟೈಸ್ ಮಾಡುತ್ತಾರೆ. ಅಪರಿಚಿತ ಹೇಳುವ ಮಾತುಗಳು ನಂಬಿ ಮೋಸ ಹೋಗುವ ಸಂದರ್ಭಗಳು ಹೆಚ್ಚಾಗುತ್ತಿದ್ದು ಇದೇ ಟ್ರೇಂಡಿಂಗ್ ಸೈಬರ್ ಅಪರಾಧ ಎಂದ ತಿಪ್ಪೇಸ್ವಾಮಿ, ಮುನ್ನಚ್ಚರಿಕೆ ನಂತರದ ಅಪಾಯವನ್ನು ತಡೆಗಟ್ಟುತ್ತದೆ ಎಂದರು.
ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎನ್.ಪಿ.ಲಿಖಿತ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಯುವಚೇತನ ಒಂದರೀತಿಯ ಪ್ರತಿಭೋತ್ಸವ. ಯುವಕರಲ್ಲಿ ಧೈರ್ಯ ಆತ್ಮವಿಶ್ವಾಸ ನಾಯಕತ್ವವನ್ನು ಪ್ರೇರೇಪಿಸುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಅನೇಕ ಸಂಗತಿಗಳನ್ನು ಕಲಿಯಬಹುದು. ತಂಡ ಸ್ಫೂರ್ತಿಯೊಂದಿಗೆ ಕಾರ್ಯನಿರ್ವಹಣೆಗೂ ಸಹಕಾರಿ ಎಂದರು. ರೋಟರಿ ವಲಯತಂಡನಾಯಕ ಆರ್.ನಾಗೇಂದ್ರ ಮುಖ್ಯಅತಿಥಿಗಳಾಗಿ ಮಾತನಾಡಿ ವಿಜೇತರನ್ನು ಅಭಿನಂದಿಸಿದರು.
ರೋಟರಿ ಕಾರ್ಯದರ್ಶಿ ಹರ್ಷಿತ್ ಡಿ.ವಸಿಷ್ಟ ರೋಟರಿ ಒಂದು ಸಂಸ್ಥೆಯಲ್ಲ ಜನಪರ ಆಂದೋಲನ. ಸೇವೆ ಒಟ್ಟಾಗಿ ಕಾರ್ಯನಿರ್ವಹಿಸುವ ಸೌಹಾರ್ದ ಸಾಮರಸ್ಯವನ್ನು ಬೆಳೆಸುವ ಆಂದೋಲನ. ಚಿಕ್ಕಮಗಳೂರಿನಲ್ಲೂ ರೋಟರಿ ನಿರಂತರವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಜೀವನಸಂಧ್ಯಾ ಹೆಮ್ಮೆಯ ಯೋಜನೆಯಾಗಿದ್ದು ಬಾಳಸಂಜೆಯ 60ವೃದ್ಧರಿಗೆ ಆಶ್ರಯತಾಣವಾಗಿದೆ. ಕಣ್ಣಿನ ಆಸ್ಪತ್ರೆಯೂ ವಿಶೇಷ ಸೇವೆಗೆ ಹೆಸರಾಗಿದೆ ಎಂದರು.
ರೋಟರಿ ಯುವಸೇವಾ ವಿಭಾಗದ ಜಿಲ್ಲಾನಿರ್ದೇಶಕ ಫಣೀಂದ್ರನಾಡಿಗ್ ಮಾತನಾಡಿ ಯುವಚೇತನ ಜಿಲ್ಲೆಯಲ್ಲೆ ಪ್ರತಿಷ್ಠಿತ ಯೋಜನೆ. ಕಳೆದ 34ವರ್ಷಗಳಿಂದ ನಿರಂತರವಾಗಿ ಯುವಕರಿಗೆ ಉತ್ತಮ ವೇದಿಕೆಯಾಗಿದೆ. ಯುವಕರೆ ದೇಶದ ಆಧಾರಸ್ತಂಭವಾಗಿದ್ದು ಅವರಲ್ಲಿ ಪ್ರೇರಣೆ, ಪ್ರೋತ್ಸಾಹ ನೀಡುವಲ್ಲಿ ಸಹಕಾರಿಯಾಗಿದೆ ಎಂದರು.
ಯುವಚೇತನ ಉಪಸಮಿತಿ ಅಧ್ಯಕ್ಷ ಎಂ.ಎಸ್.ಕಿಶನ್, ಸಹಅಧ್ಯಕ್ಷ ಮನೋಜ್‍ಬೈಸಾನಿ, ನಿ.ಪೂ.ಅಧ್ಯಕ್ಷ ಎಂ.ಎಲ್.ಸುಜಿತ್, ಪ್ರಾಯೋಜಕ ತಿಮ್ಮಯ್ಯ ಮತ್ತಿತರರು ಮಾತನಾಡಿದರು.



