ಕರ್ನಾಟಕ ಜಾನಪದ ಪರಿಷತ್ತು ಮೂಡಿಗೆರೆ ತಾಲೂಕು ಘಟಕದ ವತಿಯಿಂದ ಜಾನಪದ ಕಲೋತ್ಸವವನ್ನು ತಾಲೂಕು ಘಟಕದ ಅಧ್ಯಕ್ಷರಾದ ರವಿ ಕುನ್ನಳ್ಳಿ ಇವರ ಅಧ್ಯಕ್ಷತೆಯಲ್ಲಿ ಕುನ್ನಳ್ಳಿ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ಜರಗಿತು.
ಜಾನಪದ ಕಲೋತ್ಸವವನ್ನು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಪಿ ಕುಮಾರಸ್ವಾಮಿ ಅವರು ಉದ್ಘಾಟಿಸಿದರು.
ಜಾನಪದ ಕಲೋತ್ಸವ ಕಾರ್ಯಕ್ರದಲ್ಲಿ ಮೂಡಿಗೆರೆ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ನವೀನ್ ಬಿ ಆರ್ ಇವರು ಜಾನಪದದ ಬಗ್ಗೆ ಪ್ರಧಾನ ಉಪನ್ಯಾಸವನ್ನು ನೀಡಿದರು.
ಮಾನವನ ಹವ್ಯಾಸಗಳು ಮತ್ತು ಅನುಸರಣೆಗಳು ಹಳೆಯ ತಲೆಮಾರಿನಿಂದ ಹೊಸ ತಲೆಮಾರಿಗೆ ಮಾತಿನ ಮೂಲಕ ಹಸ್ತಾಂತರಗೊಳಿಸುತ್ತೇವೆಯೋ ಅವು ಪುಸ್ತಕ ಅಚ್ಚು ವಿಷಯಗಳು ಆಗಿರುವುದಿಲ್ಲವೋ ಅಲ್ಲಿ ನಾವು ಜಾನಪದವನ್ನು ಕಾಣುತ್ತೇವೆ ಎಂದು ಅಭಿಪ್ರಾಯಪಟ್ಟರು. ತಲತಲಾಂತರದಿಂದ ಕಿವಿಯಿಂದ ಕಿವಿಗೆ ಬಾಯಿಯಿಂದ ಬಾಯಿಗೆ ಹರಿದು ಬಂದಿರುವ ಪದಗಳೇ ಜಾನಪದ ವಾಗಿದೆ. ಜಾನಪದದ ಪ್ರಕಾರಗಳಲ್ಲಿ ಗಾದೆಗಳು, ಒಗಟುಗಳು,ಒಡಪುಗಳು ಕಥೆಗಳು ಜಾನಪದ ಗೀತೆಗಳು, ಕಥನ ಗೀತೆಗಳು,ಲಾವಣಿಗಳು, ಪುರಾಣಗಳು, ನಾಟಕಗಳು, ಆಚರಣೆಗಳನ್ನು ಒಳಗೊಂಡಿರುವುದಾಗಿ ನವೀನ್ ರವರು ಜಾನಪದದ ಬಗ್ಗೆ ಪ್ರಧಾನೋಪನ್ಯಾಸದಲ್ಲಿ ತಿಳಿಸಿದರು.
ಕುನ್ನಳ್ಳಿ ರವಿಯವರು ತುಂಬಾ ವ್ಯವಸ್ಥಿತವಾಗಿ ಕುನ್ನಳ್ಳಿ ಸಮುದಾಯ ಭವನದಲ್ಲಿ ಜಾನಪದ ಕಲೋತ್ಸವವನ್ನು ಆಯೋಜಿಸಿದ್ದು ಎಲ್ಲರ ಮನಸೆಳೆಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿ, ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಸೇರಿದಂತೆ ಹಿರಿಯರನ್ನು ಅಭಿನಂದಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಗೋಪಾಲಗೌಡರು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಡಿ.ಕೆ ಲಕ್ಷ್ಮಣ್ ಗೌಡರು, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಶ್ರೀಮತಿ ಭಾರತೀಯ ರವೀಂದ್ರ, ಕೃಷಿ ಪತ್ತಿನ ಸಹಕಾರ ಸಂಘದ ವಿಶ್ವನಾಥ್ ಗೌಡ ಹೆಚ್.ಜಿ, ಜೆ ಸಿ ಐ ಅಧ್ಯಕ್ಷರಾದ ಕೆ ಕೆ ಪ್ರದೀಪ್ ಜಾನಪದ ಪರಿಷತ್ತಿನ ಉಪಾಧ್ಯಕ್ಷರಾದ ಕಂಬರಡಿ ಚಂದ್ರೇಗೌಡ, ಕರ್ನಾಟಕ ಜಾನಪದ ಪರಿಷತ್ತಿನ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ, ಕರ್ನಾಟಕ ಜಾನಪದ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಬಕ್ಕಿ ರವಿ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ್ ಕುನ್ನಳ್ಳಿ, ಶ್ರೀಮತಿ ವಿದ್ಯಾಶಶಿ, ಜಾನಪದ ಆಸಕ್ತರು, ಗ್ರಾಮಸ್ಥರು ಹಾಜರಿದ್ದರು.
ನಿವೃತ್ತ ಶಿಕ್ಷಕಿ ಶ್ರೀಮತಿ ದಾಕ್ಷಾಯಿಣಿ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ದೀಪಿಕಾ ಸ್ವಾಗತಿಸಿ,ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಸಂಭ್ರಮದ ರಾಜ್ಯಾಧ್ಯಕ್ಷರಾದ ಎಂ ಎಸ್ ನಾಗರಾಜು ರವರು ನಿರೂಪಿಸಿದರು.



