ಎಟಿಎಂ ಯಂತ್ರಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 7.11 ಕೋಟಿ ರೂ. ದರೋಡೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸಿಎಂಎಸ್ ಸೆಕ್ಯುರಿಟೀಸ್ ಕಸ್ಟೋಡಿಯನ್ ವಾಹನದ ಮೇಲ್ವಿಚಾರಕ ರವಿ, ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ಬಂಧಿಸಲಾಗಿದೆ. ಅವರಿಂದ 5.76 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಪ್ರಕರಣ ವರದಿಯಾದ 54 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಆರರಿಂದ 8 ಜನರು ಶಾಮೀಲಾಗಿರುವ ಸಾಧ್ಯತೆಯಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ
ಮೂರು ತಿಂಗಳುಗಳಿಂದ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಕೃತ್ಯಕ್ಕೆ 15 ದಿನಗಳಿಂದಲೂ ಸ್ಥಳವನ್ನು ನಿಗದಿ ಮಾಡಿದ್ದರು. ನವೆಂಬರ್ 19ರಂದು 12:48ರ ಸುಮಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಅಶೋಕ ಪಿಲ್ಲರ್ – ಜಯನಗರ – ಡೇರಿ ಸರ್ಕಲ್ ಮಾರ್ಗದಲ್ಲಿ ಬಂದು, ಕಸ್ಟೋಡಿಯನ್ ವಾಹನವನ್ನು ಅಡ್ಡಗಟ್ಟಿ ತಾವು ಆರ್ಬಿಐ ನಿಯಂತ್ರಣಾಧಿಕಾರಿಗಳೆಂದು ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕೆಳಗಿಳಿಸಿದ್ದರು. ನಂತರ ಮತ್ತೋರ್ವ ಆರೋಪಿ ಕಸ್ಟೋಡಿಯನ್ ವಾಹನದೊಳಗೆ ಕುಳಿತು ಚಾಲಕನಿಗೆ ಡೇರಿ ಸರ್ಕಲ್ ನತ್ತ ಚಲಾಯಿಸುವಂತೆ ಸೂಚಿಸಿದ್ದರು.
ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು ಮೊಬೈಲ್ ಫೋನ್ ಕಿತ್ತುಕೊಂಡು, ಅವರನ್ನು ನಿಮ್ಹಾನ್ಸ್ ಬಳಿ ಕೆಳಗಿಳಿಸಿ ಕಾಲ್ಕಿತ್ತಿದ್ದರು. ಕೃತ್ಯ ನಡೆದ ನಂತರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗುವಷ್ಟರಲ್ಲಿ ಒಂದೂವರೆ ತಾಸು ಕಳೆದು ಹೋಗಿತ್ತು. ನಂತರ ನಾವು ತನಿಖೆ ಕೈಗೊಂಡಾಗ ಆರೋಪಿಗಳು ಸಿಸಿಟಿವಿ ಕ್ಯಾಮರಾಗಳು ಇರದ ಸ್ಥಳಗಳನ್ನು ಬಳಸಿಕೊಂಡಿರುವುದು, ಮೊಬೈಲ್ ಫೋನ್ಗಳನ್ನು ಬಳಕೆ ಮಾಡದಿರುವುದು ಹಾಗೂ ದರೋಡೆಯಾದ ಹಣದ ನೋಟುಗಳು ಸಹ ಸರಣಿ ನಂಬರ್ ನಲ್ಲಿ ಇರದಿರುವುದು ತನಿಖೆಗೆ ಸಾಕಷ್ಟು ಸವಾಲಿನ ಸಂಗತಿಯಾಗಿತ್ತು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.



