ಇವತ್ತು ಎಲ್ಲಾ ಜಾತಿ, ಧರ್ಮ, ಭಾಷೆಯ ಜನರು ಎಲ್ಲಾ ರಂಗದಲ್ಲಿ ಗುರುತಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಭಾರತ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವಿನಿ ಹೇಳಿದರು.
ಅವರು ಬುಧವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತಾಲೂಕು ಆಡಳಿತ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಯಿಂದ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಎಂದರೆ ಎಸ್ಸೀ ಎಸ್ಟಿಗೆ ಮೀಸಲೆಂಬ ಭಾವನೆ ಈಗಲೂ ಎಲ್ಲರಲ್ಲೂ ಇದೆ. ಇದನ್ನು ಮೊದಲು ತಲೆಯಿಂದ ಕಿತ್ತೊಗೆಯಬೇಕು. ಹಿಂದೆ ಮಹಿಳೆಯರು, ಬಡವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿರಲಿಲ್ಲ. ಸಂವಿಧಾನದಿಂದ ಮಹಿಳೆಯರು ಸೇರಿದಂತೆ ಎಲ್ಲಾ ಜಾತಿ, ಧರ್ಮ, ಭಾಷೆಯ ಜನರು ಎಲ್ಲಾ ಸವಲತ್ತು ಪಡೆಯುವ ಜತೆಗೆ ಸಾಮರಸ್ಯದಿಂದ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದು ಹೇಳಿದರು..
ಬಿಇಒ ಮೀನಾಕ್ಷಿ ಮಾತನಾಡಿ, ಬ್ರಿಟೀಷರ ಆಳ್ವಿಕೆ ಕಾಲದಲ್ಲಿ ನಮ್ಮ ದೇಶ ಪ್ರಾಂತ್ಯಗಳೆಲ್ಲಾ ಹಂಚಿ ಹೋಗಿತ್ತು. ಸ್ವಾತಂತ್ರ್ಯ ದೊರಕಿದ ಬಳಿಕ ಎಲ್ಲಾ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಏಕ ರೂಪದ ರಾಷ್ಟ್ರ ನಿರ್ಮಾಣ ಮಾಡುವ ಸವಾಲು ನಮ್ಮ ದೇಶಕ್ಕೆ ಎದುರಾಗಿತ್ತು. ಈ ಸಂದರ್ಭದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದ ಅಡಿಯಲ್ಲಿ ಎಲ್ಲರೂ ಬದುಕಬೇಕೆಂಬ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ವಿವಿಧತೆಯಲ್ಲಿ ಏಕತೆ ಕಾಣಲು ಸಾಧ್ಯವಾಗಿದೆ. ಹಾಗಾಗಿ ಸಂವಿಧಾನದ ಬಗ್ಗೆ ಭಾರತೀಯರೆಲ್ಲರೂ ತಿಳಿದು, ಅದರಂತೆ ಬಾಳಬೇಕೆಂದು ಹೇಳಿದರು.
ತಾ.ಪಂ. ಇಒ ದಯಾವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಕøತಿ ಚಿಂತಕ ಪ್ರಸನ್ನಗೌಡ, ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಬಿಎಸ್‍ಪಿ ತಾಲೂಕು ಅಧ್ಯಕ್ಷ ಎಲ್.ಬಿ.ರಮೇಶ್ ಮಾತನಾಡಿದರು.
ಛಲವಾದಿ ಮಹಾಸಭಾದ ಅಧ್ಯಕ್ಷ ಮಂಜುನಾಥ್, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಕೆ.ಮಂಜುನಾಥ್, ಬಿಇಒ ಮೀನಾಕ್ಷಿ, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಮುಖಂಡರಾದ ಅಣ್ಣೇಗೌಡ, ಯು.ಬಿ.ಮಂಜಯ್ಯ, ಗಿರೀಶ್ ಹೆಸಗಲ್, ಸೀತಮ್ಮ, ಸರೋಜಾ, ವಿಜೇಂದ್ರ, ಬಕ್ಕಿ ರವಿ, ಬಕ್ಕಿ ಮಂಜು, ಕೃಷ್ಣ, ಹರೀಶ್ ಮತ್ತಿತರರಿದ್ದರು.



