fafadf_page-0001 (1)

 

 

ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿಕೊಡಲು ಮೋಹಿನಿ ಸಿದ್ದೇಗೌಡ ಅವರು ಅರ್ಹನಿಶಿ ಶ್ರಮಿಸಿದವರು ಎಂದು ಚಿಕ್ಕಮಗಳೂರು ಕಸ್ತೂರಿ ಬಾ ಸದನದ ಅಧ್ಯಕ್ಷೆ ಯಮುನಾ ಸಿ.ಶೆಟ್ಟಿ ನುಡಿದರು.

ಸೋಮವಾರ  ದೈವಾಧೀನರಾದ ಕಸ್ತೂರ್ಬಾ ಸದನದ ಕಾರ್ಯದರ್ಶಿ ಮೋಹಿನಿಸಿದ್ದೇಗೌಡರ ಪಾರ್ಥಿವ ಶರೀರವನ್ನು ಅವರೆ ಕಟ್ಟಿ ಬೆಳೆಸಿದ ವಿಜಯಪುರದ ಕಸ್ತೂರಿ ಬಾ ಸದಸನಕ್ಕೆ ಬರಮಾಡಿಕೊಂಡು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

1996ರಿಂದ ಸಂಸ್ಥೆಯ ಕಾರ್ಯದರ್ಶಿಯಾಗಿ ಸತತವಾಗಿ ಮುನ್ನಡೆಸಿಕೊಂಡು ಬಂದ ಚೇತನ ಇಂದು ಅಗಲಿದೆ. ಕೌಟುಂಬಿಕ ಸಲಹಾ ಕೇಂದ್ರದ ಅಧ್ಯಕ್ಷರಾಗಿ ಜೊತೆಗೆ ಉದ್ಯೋಗಸ್ಥ ಮಹಿಳೆಯರ ವಸತಿಗೃಹ ಮತ್ತು ಸಾಂತ್ವನಕೇಂದ್ರದ ಮುಖ್ಯಸ್ಥರಾಗಿ ಮೋಹಿನಿಯಕ್ಕ ಅವರ ಕಾರ್ಯನಿರ್ವಹಣೆ ಆದರ್ಶಪ್ರಾಯ. ತೊಂದರೆಗೊಳಗಾದ ಹೆಣ್ಣುಮಕ್ಕಳ ನೆರವಿಗೆ ನಿಂತು ಹೋರಾಟ ನಡೆಸುವ ಮನೋಭಾವ ಹಿಂದಿನಿಂದಲೂ ಅವರದ್ದಾಗಿತ್ತು. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಶಿಬಿರ ಜೊತೆಗೆ ಕಾನೂನು ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಸಂಘಟಿಸಿದ ಮಹಿಳಾಪರ ಗಟ್ಟಿಧ್ವನಿ ಎಂದು ಯಮುನಾ ಸ್ಮರಿಸಿದರು.

ಪರಿತ್ಯಕ್ತ ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸಿಕೊಡುವಲ್ಲಿ ಶ್ರಮಿಸುತ್ತಿದ್ದ ಮೋಹಿನಕ್ಕ ಕೆಲವು ಅನಾಥ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಪೂರ್ಣವೆಚ್ಚವನ್ನು ಭರಿಸುವ ಮೂಲಕ ಮಾದರಿಯ ಹಾದಿ ನಿರ್ಮಿಸಿಕೊಟ್ಟವರು. ಕಸ್ತೂರಿ ಬಾ ಸದಸನಕ್ಕೆ ‘ಕಿತ್ತೂರುರಾಣಿ ಚೆನ್ನಮ್ಮ’ ಪ್ರಶಸ್ತಿ ತಂದುಕೊಟ್ಟಿದ್ದ ಇವರಿಗೆ ‘ಸುವರ್ಣದೇವಿ ಮಹಿಳಾರತ್ನ’, ಮಹಿಳಾ ಜಾಗೃತಿ ಸಂಘದ ‘ಮಹಿಳಾ ರತ್ನ’ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಬಂದಿದೆ. 80ವರ್ಷದ ಧೀಮಂತ ಮಹಿಳೆ ನಮ್ಮನ್ನು ಅಗಲಿರುವುದು ಕಸ್ತೂರಿಬಾ ಸದನ ಸೇರಿದಂತೆ ಸ್ತ್ರೀಸಂಕುಲಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಯಮುನಾ ಸ್ಮರಿಸಿದರು.

ಸಹಕಾರ್ಯದರ್ಶಿ ರೀನಾ ಸುಜೇಂದ್ರ ಮಾತನಾಡಿ ಎಲ್ಲರಿಗೂ ಧೈರ್ಯಸ್ಥೈರ್ಯಗಳನ್ನು ತುಂಬುತ್ತಾ ಮುನ್ನಡೆಯುತ್ತಿದ್ದ ಮೋಹಿನಕ್ಕ ತಮ್ಮ ಮನೆಗಿಂತ ಹೆಚ್ಚಾಗಿ ಕಸ್ತೂರಿ ಬಾ ಸದನವನ್ನು ಪ್ರೀತಿಸುತ್ತಾ ಇದರ ಏಳಿಗೆಗೆ ಶ್ರಮಿಸಿದವರೆಂದು ನುಡಿದರು.

ವಕೀಲೆ ಆರುಂಧತಿ ಮಾತನಾಡಿ ವಿದ್ಯಾರ್ಥಿದೆಸೆಯಲ್ಲೆ ಪರಿಚಿತರಾಗಿ ಸಂಕಷ್ಟದ ಸಂದರ್ಭಗಳಲ್ಲೆಲ್ಲ ಧೈರ್ಯತುಂಬಿ ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ ಹೆಣ್ಣುಮಕ್ಕಳನ್ನು ವಿವಿಧ ಸೇವಾಕಾರ್ಯಗಳಲ್ಲಿ ತೊಡಗಲು ಪ್ರೇರೇಪಿಸುತ್ತಿದ್ದರೆಂದರು.
ರಾಷ್ಟ್ರ ಸೇವಿಕಾ ಸಮಿತಿ ಮುಖ್ಯಸ್ಥೆ ಸೌಭಾಗ್ಯಶೇಷಾದ್ರಿ ಮಾತನಾಡಿ ರಾಮಮಂದಿರ ಮುಕ್ತಿ ಹೋರಾಟ ಜೊತೆಗೆ ದತ್ತಜಯಂತಿ, ಅನುಸೂಯಜಯಂತಿ ಸಂದರ್ಭದಲ್ಲಿ ಮೋಹಿನಕ್ಕ ಮಹಿಳಾ ತಂಡದ ನೇತೃತ್ವ ವಹಿಸುತ್ತಿದ್ದರೆಂದರು.

ಸಿಬ್ಬಂದಿಗಳ ಪರವಾಗಿ ಮಾತನಾಡಿ ಕೃಷ್ಣಮೂರ್ತಿ 30ವರ್ಷಗಳ ಒಡನಾಟದಲ್ಲಿ ಅವರ ಸಾಮಾಜಿಕ ಕಾಳಜಿ, ಜೊತೆಗಾರರ ಬಗ್ಗೆ ಇದ್ದ ಪ್ರೀತಿ ವಿಶ್ವಾಸ, ಸಿಬ್ಬಂದಿಗಳ ಬಗ್ಗೆ ತೋರುತ್ತಿದ್ದ ಮಮಕಾರ ಸ್ಮರಣೀಯ ಎಂದರು.

ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ 80ರ ದಶಕದಲ್ಲಿ ವಿದ್ಯಾರ್ಥಿ ದೆಸೆಯಿಂದ ಪರಿಚಿತರಾದ ಮೋಹಿನಕ್ಕ ನೇರ, ದಿಟ್ಟ ನಡೆ-ನುಡಿಗಳಿಗೆ ಹೆಸರಾದವರು. ಸಂಘ ಪರಿವಾರದ ಕಾರ್ಯಕರ್ತರಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ಕೆಇಬಿ ನೌಕರರ ಮಹಿಳಾ ಸಂಘದ ಕಾರ್ಯದರ್ಶಿಯಾಗಿ 1980ರ ವೇಳೆಗೆ ಸಾರ್ವಜನಿಕ ಜೀವನ ಆರಂಭಿಸಿ ನಗರಸಭಾ ಸದಸ್ಯೆಯಾಗಿ, ಜಿಲ್ಲಾ ಶಿಶುಕಲ್ಯಾಣ ಸಮಿತಿಯ ಬಾಲಸೇವಿಕಾ ತರಬೇತಿ ಕೇಂದ್ರದ ಉಪಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರೆಂದರು.
ಯಶಸ್ವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ ವಿಶೇಷವಾಗಿ ಸಾರಾಯಿ ಮಾರಾಟದ ವಿರುದ್ಧ ಸಮರ ಸಾರಿದವರು. ಕರ್ನಾಟಕ ರಾಜ್ಯ ಧಾರ್ಮಿಕ ಸಂಸ್ಥೆಯ ಸದಸ್ಯರಾಗಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಮೋಹಿನಿಸಿದ್ದೇಗೌಡರದು ಸಮಾಜಮುಖಿ ಸಾರ್ಥಕ ಬದುಕೆಂದು ನುಡಿದರು.

ಕಸ್ತೂರಿಬಾ ಸದನದ ಕಾರ್ಯಕಾರಿಮಂಡಳಿ ಸದಸ್ಯರಾದ ಜಯಶ್ರೀನಂಜರಾಜ್, ಶುಭರಾಮೇಗೌಡ, ಗೀತಾಚಂದ್ರಶೇಖರ್, ಅರ್ಚನಾವಿಕ್ರಮ್, ಪಾರ್ವತಿಬಸವರಾಜು ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು.

ಅಂತಿಮ ನಮನ:

ಮಾಜಿ ಸಚಿವ ಡಿ.ಎನ್.ಜೀವರಾಜ್, ಮೃತರ ಸಹೋದರ ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಕರ್ನಾಟಕ ರಾಜ್ಯ ಪರಿಸರ ಮೌಲ್ಯವರ್ಧಕ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ರೇಣುಕಾಚಾರ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜು, ದತ್ತಪೀಠ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದ ಎಸ್.ಎಂ.ಬಾಷಾ, ರಾಷ್ಟ್ರಸೇವಿಕಾ ಸಮಿತಿ ಮುಖ್ಯಸ್ಥೆ ರಾಧಗೋಪಿನಾಥ್, ರಾಜಲಕ್ಷ್ಮಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾಶೆಟ್ಟಿ, ಸಿಡಿಎ ಮಾಜಿಸದಸ್ಯೆ ಸೂರ್ಯಗೋವಿಂದ, ಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ, ಬಿಜೆಪಿ ರೈತಮೋರ್ಚಾ ರಾಜ್ಯಪ್ರಧಾನಕಾರ್ಯದರ್ಶಿ ಕಲ್ಮರುಡಪ್ಪ ಮತ್ತಿತರರು ಕಸ್ತೂರಿ ಬಾ ಸದನದಲ್ಲಿ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ಪಾರ್ಥಿವ ಶರೀರವನ್ನು ಮೂಡಿಗೆರೆ ಮುದ್ರೆಮನೆ ಕಾಫಿ ಕ್ಯೂರಿಂಗ್ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ಅಗಲಿದ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ