ಮೂಡಿಗೆರೆ ವಲಯ ಕೃಷಿ ಮತ್ತು ತೋಟಗಾರಿಕೆ ಸಂಸೊಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ವಿವಿಧ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಸಂಘ ಸಂಶ್ಥೆಗಳ ಸಂಯಕ್ತಾಶ್ರಯದಲ್ಲಿ ಡಿ.19 ಮತ್ತು 20ರಂದು ಎರಡು ದಿನ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು ಆರ್ಥಿಕವಾಗಿ ಸಬಲರಾಗಲು ಕೃಷಿ ಮತ್ತು ತೋಟಗಾರಿಕಾ ಮೇಳ ಅತ್ಯಂತ ಸಹಕಾರಿಯಾಗಿದೆ. ಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ಕೃಷಿ ಯಂತೋಪಕರಣ, ವಿವಿಧ ಬಗೆಯ ಕೃಷಿ ಗಿಡಗಳು, ಜಾನುವಾರು ಸೇರಿದಂತೆ ನಾನಾ ಬಗೆಯ ಕೃಷಿ ಬಗ್ಗೆ ರೈತರು ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೇ ವಿಜ್ಞಾನಿಗಳಿಂದ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಹಾಗಾಗಿ ಮೇಳದ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕೆಂದು ಹೇಳಿದರು.
ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಂದ ರೈತಗರಿಗೆ ಮಾಹಿತಿ, ಜತೆಗೆ ವಿಜ್ಞಾನಿಗಳೊಂದಿಗೆ ಸಂವಾದ, ರೈತರಿಗೆ ಉತ್ತಮವಾದ ಆಧುನಿಕ ತಂತ್ರಜ್ಞಾನದ ಮಾಹಿತಿ, ಅಡಕೆ ಬೆಳೆ ಜತೆಗೆ ಮಿಶ್ರ ಬೆಳೆ ಬೆಳೆಯುವುದು, 12 ತಳಿಗಳ ಕೋಳಿ, ಕುರಿ, ಹಸು, ಜೇನು ಸಾಕಾಣಿಗೆ ಮೂಲಕ ಆದಾಯ, ಅಡಕೆ ಸಿಪ್ಪೆಯಲ್ಲಿ ಗೊಬ್ಬರ ತಯಾರಿಕೆ, 20 ತಳಿಗಳ ಭತ್ತ, ವಿದೇಶಿ ಹಣ್ಣುಗಳು, ಜಲಮುಕ್ತಿ ಭತ್ತದ ಬೆಳೆ ಬಿಡುಗಡೆ ಸೇರಿದಂತೆ ನಾನಾ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ರೈತರು ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಹಾಗಾಗಿ ರೈತರು ಸೇರಿದಂತೆ ಮುಂದಿನ ಯುವ ಪೀಳಿಗೆ ಕೃಷಿ ಬಗ್ಗೆ ಅರಿತುಕೊಳ್ಳಲು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್, ನಿರ್ದೇಶಕ ಪಿ.ಕೆ.ನಾಗೇಶ್, ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ನಿರ್ದೇಶಕ ಯೋಗೇಶ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಶ್ರೀನಿವಾಸ್, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಎ.ವಿ.ಸ್ವಾಮಿ, ಸಸ್ಯ ಸಂರಕ್ಷಣ ವಿಜ್ಞಾನಿ ಡಾ.ಸುಚಿತ್ರ ಉಪಸ್ಥಿತರಿದ್ದರು.




