ದೇಣಿಗೆ ಕೊಡುವುದರಲ್ಲಿ ಖುಷಿ ಇದೆ: ಪ್ರೊ.ಪಾಲಾಕ್ಷ
ಚಿಕ್ಕಮಗಳೂರು ಡಿ.19(ಪಿಎನ್‍ಬಿ) ದೇಣಿಗೆ ಕೊಡುವುದರಲ್ಲಿ ಖುಷಿ ಇದೆ. ಅಹಂ ಬಿಟ್ಟರೆ ಮಾನವೀಯ ಕೆಲಸಗಳು ಸುಲಭವಾಗುತ್ತದೆ ಎಂದು ರೋಟರಿ3182 ಜಿಲ್ಲಾರಾಜ್ಯಪಾಲ ಕೆ.ಪಾಲಾಕ್ಷ ನುಡಿದರು.
ಚಿಕ್ಕಮಗಳೂರು ರೋಟರಿ ಕ್ಲಬ್‍ಗೆ ನಿನ್ನೆ ಅಧಿಕೃತ ಭೇಟಿ ನೀಡಿದ್ದ ಅವರು, ಸಂಜೆ ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.
ಸೇವೆಯಿಂದ ತೃಪ್ತಿ ಸಿಗುತ್ತದೆ. ಸೇವೆಗೆ ರೋಟರಿ ಉತ್ತಮ ವೇದಿಕೆ. ಸೇವಾ ಕಾರ್ಯವೇ ದೇಶ ಸೇವೆಯೂ ಹೌದು. ಮನುಕುಲದ ಏಳಿಗೆಗೆ ಸೇವೆ ಅತ್ಯಗತ್ಯ ಎಂದ ಪ್ರೊ.ಪಾಲಾಕ್ಷ, ಸಾಮಾಜಿಕ ಕಾರ್ಯಕ್ಕೆ ಯುವಕರನ್ನು ಹೆಚ್ಚು ತೊಡಗಿಸಲು ಶ್ರಮಿಸಬೇಕೆಂದರು.
ಹಣವೇ ಸರ್ವಸ್ವ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಣವಲ್ಲದೆ ಅನ್ಯ ಸಂಗತಿಗಳು ನಮಗೆ ಸಂತೋಷ, ಸಮಾಧಾನ, ನೆಮ್ಮದಿಯನ್ನು ತಂದು ಕೊಡುತ್ತದೆ. ದೇಣಿಗೆ ಕೊಡುವುದರಲ್ಲಿ ಖುಷಿ ಇದೆ. ಬಟ್ಟೆ, ವಜ್ರಾಭರಣ ಖರೀದಿಸಬಹುದು. ಆದರೆ ಸೌಂದರ್ಯವನ್ನು ಕೊಳ್ಳಲಾಗದು. ಒಳ್ಳೆಯ ಹಾಸಿಗೆ ಖರೀದಿಸಬಹುದಾದರೂ ನಿದ್ರೆ ಖರೀದಿಸಲಾಗದು. ಮೈಕಲ್‍ಜಾಕ್ಸನ್ 68,000ರೂ.ಗಳ ಹಾಸಿಗೆ ಹೊಂದಿದ್ದರೂ ಒಂದುತಾಸು ಸುಖನಿದ್ರೆಗೆ ನಾಲ್ಕುಗುಳಿಗೆಗಳನ್ನು ಸೇವಿಸುತ್ತಿದ್ದ ಎಂದು ಉಲ್ಲೇಖಿಸಿದರು.
ಅಂತರರಾಷ್ಟ್ರೀಯ ರೋಟರಿ ಶತಮಾನಗಳ ಇತಿಹಾಸ ಹೊಂದಿದೆ. 200ಕ್ಕೂ ಹೆಚ್ಚು ದೇಶಗಳಲ್ಲಿ ರೋಟರಿ ಸದಸ್ಯರು ಮನುಕುಲದ ಒಳಿತಿಗೆ ಕೊಡುಗೆ ನೀಡುತ್ತಿದ್ದಾರೆ. 2000ಕ್ಕೂ ಹೆಚ್ಚು ಎಳೆಯಮಕ್ಕಳ ಹೃದಯಚಿಕಿತ್ಸೆ ಉಚಿತವಾಗಿ ರೋಟರಿ ಮಾಡಿದೆ. 20,000ಕ್ಕೂ ಹೆಚ್ಚು ಕ್ಯಾಟ್ರ್ಯಾಕ್ಟ್ ಚಿಕಿತ್ಸೆ ಮಾಡಿದೆ. 200ಕ್ಕೂ ಹೆಚ್ಚು ಡಯಾಲಿಸಿಸ್‍ಗಳನ್ನು ಆಸ್ಪತ್ರೆಗಳಿಗೆ ವಿತರಿಸಿದೆ. ಕುಡಿಯುವ ನೀರಿಗಾಗಿ 55ಚೆಕ್‍ಡ್ಯಾಂಗಳನ್ನು, ಆರೇಳು ಸರ್ಪೋಟಿಂಗ್ ಡ್ಯಾಂಗಳನ್ನು ನಿರ್ಮಿಸಿದೆ. 180ಕ್ಕೂ ಹೆಚ್ಚು ಜಾಗತಿಕ ಅನುದಾನ ಪಡೆಯಲಾಗಿದೆ. 180ಕ್ಕೂ ಹೆಚ್ಚು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಪಟ್ಟಿ ಮಾಡಿದ ಪ್ರೊ.ಪಾಲಾಕ್ಷ, ರೋಟರಿಗೆ ನಾವು ನೀಡಿದ ದೇಣಿಗೆಗಿಂತ ಹೆಚ್ಚು ಹಣವನ್ನು ಸತ್ಕಾರ್ಯಗಳಿಗಾಗಿ ಪಡೆದಿದ್ದೇವೆಂದರು.
ಫೇಸ್‍ಬುಕ್ ಮತ್ತು ವಾಟ್ಸ್‍ಅಪ್‍ನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ನಾವು, ಉದ್ಯೋಗ, ಕುಟುಂಬ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಸೇವಾ ಕಾರ್ಯಗಳಲ್ಲಿ, ಸಾಮಾಜಿಕ ಸಮ್ಮಿಲಗಳಲ್ಲಿ ಪಾಲ್ಗೊಳ್ಳಬೇಕು. ರೋಟರಿ ಇವಕ್ಕೆಲ್ಲ ಉತ್ತಮ ವೇದಿಕೆ. ಒಳ್ಳೆಯ ವಾತಾವರಣ-ಸ್ನೇಹಿತರು-ಕಾರ್ಯಗಳು ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಸಹಕಾರಿ. ನಾವು ಯಾರೊಂದಿಗೆ ಇರುತ್ತೆವೆಯೋ ನಮ್ಮ ಘನತೆ ಅದಕ್ಕೆ ತಕ್ಕನಾಗಿರುತ್ತದೆ. ಇದ್ದಲು ಮತ್ತು ವಜ್ರ ಒಂದೇ ಧಾತುವಿನದಾದರೂ ಸಂಸ್ಕರಣೆಯಿಂದ ಮೌಲ್ಯ ನಿರ್ಧಾರವಾಗುತ್ತದೆ ಎಂದರು.
ಹಿರಿತನ ಮತ್ತು ಅನುಭವವನ್ನು ಗೌರವಿಸಿ ಉಪಯೋಗಿಸಿಕೊಳ್ಳುವುದರಲ್ಲಿ ಜಾಣತನವಿದೆ. ಕೇವಲ 16ವರ್ಷದ ಶಾಲಾಕ್ರಿಕೆಟಿಗ ಸಚ್ಚಿನ್‍ತೆಂಡುಲ್ಕರ್ ಟೆಸ್ಟ್ ಮ್ಯಾಚ್‍ಗೆ ಆಯ್ಕೆಯಾಗುತ್ತಾರೆ. ಮೊದಲ ಮ್ಯಾಚ್‍ನಲ್ಲಿ ಎರಡು ಓವರ್‍ಗೆ ನಿರ್ಗಮಿಸಿ ಒಬ್ಬರೆ ಕೊಠಡಿಯಲ್ಲಿ ದುಃಖಿಸುವಾಗ ತಂಡದ ವ್ಯವಸ್ಥಾಪಕ ರವಿಶಾಸ್ತ್ರಿ ಸಮಾಧಾನಪಡಿಸಿ ಎದುರಾಳಿಯ ಅನುಭವ ಅಳೆದು ಬ್ಯಾಟ್ ಬೀಸಬೇಕೆಂಬ ಕಿವಿಮಾತು ಹೇಳುತ್ತಾರೆ. ಹಿರಿಯರ ಅನುಭವದ ಮಾತು ಅನುಕರಿಸಿದ ಸಚ್ಚಿನ್ ಮುಂದೆ ಒಂದೂವರೆ ದಶಕಗಳ ಕಾಲ ಭಾರತೀಯ ಕ್ರಿಕೆಟ್‍ನ್ನು ಆಳುತ್ತಾರೆಂದು ಉದಾಹರಿಸಿದ ರೋಟರಿ ರಾಜ್ಯಪಾಲ ಪಾಲಾಕ್ಷ, ಚಿಕ್ಕಮಗಳೂರು ರೋಟರಿಜಿಲ್ಲೆಯಲ್ಲೆ ಪ್ರತಿಷ್ಠಿತ ಮತ್ತು ಮಾದರಿಯ ಘಟಕವಾಗಿ 67ವರ್ಷಗಳಿಂದಲೂ ಕ್ರಿಯಾಶೀಲವಾಗಿದೆ ಎಂದರು.
ಸಹಾಯಕ ರಾಜ್ಯಪಾಲ ತರೀಕೆರೆಯ ಪ್ರವೀಣ್‍ನಾಹರ್ ಮಾತನಾಡಿ ಜನವರಿ 23, 24, 25ರಂದು ಹಾಸನದಲ್ಲಿ ರೋಟರಿ ಜಿಲ್ಲಾಸಮ್ಮೇಳನ ವೈಶಿಷ್ಟ್ಯಪೂರ್ಣವಾಗಿ ಜರುಗುತಿದ್ದು ಸದಸ್ಯರು ಕುಟುಂಬಸಮೇತ ಪಾಲ್ಗೊಳ್ಳಬೇಕೆಂದರು.
ವಲಯನಾಯಕ ಆರ್.ನಾಗೇಂದ್ರ ಮಾತನಾಡಿ ರೋಟರಿಜಿಲ್ಲೆಯ 84ಕ್ಲಬ್‍ಗಳಲ್ಲಿ ಚಿಕ್ಕಮಗಳೂರುಕ್ಲಬ್‍ನ ಘನತೆ ಎತ್ತರಕ್ಕಿದೆ. ಹಿರಿ-ಕಿರಿಯರ ಸಮ್ಮಿಲನ ಇಲ್ಲಿದೆ. ಜೀವನಸಂಧ್ಯಾ ವೃದ್ಧಾಶ್ರಮ ಯೋಜನೆ ಸೇವಾಕಾರ್ಯಕ್ಕೆ ಮುಕುಟಪ್ರಾಯವಾಗಿದೆ. ನಿರಂತರವಾಗಿ ಉತ್ತಮ ಚಟುವಟಿಕೆ ವೈವಿಧ್ಯಮಯ ಸೇವೆಗಳಿಂದ 68ವರ್ಷಗಳಿಂದ ಮುನ್ನಡೆದಿರುವುದು ಮಾದರಿ ಎಂದರು.
ಚಿಕ್ಕಮಗಳೂರು ರೋಟರಿಕ್ಲಬ್‍ಅಧ್ಯಕ್ಷ ಎನ್.ಪಿ.ಲಿಖಿತ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಹಿರಿಯರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಚಟುವಟಿಕೆಗಳಿಗೆ ಸ್ಫೂರ್ತಿದಾಯಕವಾಗಿದೆ. ಮುಂಬರುವ ದಿನಗಳಲ್ಲೂ ಒಳ್ಳೆಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದೆಂದರು.
ಟಿಆರ್‍ಎಫ್‍ಅಧ್ಯಕ್ಷ ಜಿ.ಎಲ್.ವೆಂಕಟೇಶಮೂರ್ತಿ ಕ್ಲಬ್‍ಸದಸ್ಯರು ಅಂತರರಾಷ್ಟ್ರೀಯ ರೋಟರಿಫೌಂಡೇಶನ್‍ಗೆ ನೀಡಿದ 5ಲಕ್ಷರೂ.ಗಳ ಕೊಡುಗೆಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿ ಮಾತನಾಡಿ 1917ರಲ್ಲಿ 26.5ಡಾಲರ್‍ನೊಂದಿಗೆ ಆರಂಭಗೊಂಡ ಫೌಂಡೇಶನ್ ಇಂದು ಜಗತ್ತಿನ ಅತಿದೊಡ್ಡ ದತ್ತಿನಿಧಿಯಾಗಿ ಪರಿಗಣಿಸಲ್ಪಟ್ಟಿದೆ. 4ಬಿಲಿಯನ್‍ಡಾಲರ್ ಹಣವನ್ನು ಹೊಂದಿದೆ. 1985ರಲ್ಲಿ ಪೋಲಿಯೋ ನಿರ್ಮೂಲನೆಗೆ ನೆರವು ಆರಂಭಿಸಿ ಎರಡುಬಿಲಿಯನ್ ಡಾಲರ್ ವೆಚ್ಚದಲ್ಲಿ ಪೋಲಿಯೋಹನಿ ನೀಡಿದೆ ಎಂದು ವಿವರಿಸಿದರು.
ಮಾಜಿಅಧ್ಯಕ್ಷರುಗಳಾದ ಎಂ.ಎಲ್.ಸುಜಿತ್ ಪ್ರಾರ್ಥಿಸಿ, ಎನ್.ಶ್ರೀವಾತ್ಸವ್ ಅತಿಥಿಗಳನ್ನು ಪರಿಚಯಿಸಿದರು. ನಿರ್ದೇಶಕ ಕೆ.ಎಸ್.ಆದರ್ಶ ಹೊಸ ಸದಸ್ಯರನ್ನು ಪರಿಚಯಿಸಿದರು. ಲಿಖಿತ್ ಸ್ವಾಗತಿಸಿ, ಹರ್ಷಿತ್‍ವಸಿಷ್ಠಿ ವರದಿಮಂಡಿಸಿ ವಂದಿಸಿದರು. ಟಿಆರ್‍ಎಫ್‍ಗೆ ಸಾವಿರಡಾಲರ್ ಕೊಡುಗೆ ನೀಡಿ ಮಲ್ಟಿಪಲ್ ಪಿಎಚ್‍ಎಫ್ ಪುರಸ್ಕಾರಕ್ಕೆ ಪಾತ್ರರಾದ ಮಾಜಿಅಧ್ಯಕ್ಷರುಗಳಾದ ಎ.ಎಂ.ನಂಜುಂಡಸ್ವಾಮಿ, ಕೆ.ಬಿ.ಅನಂತೇಗೌಡ, ಶ್ರೀವಾತ್ಸವ್ ಸೇರಿದಂತೆ ದಾನಿಗಳನ್ನು ಪ್ರೊ.ಪಾಲಾಕ್ಷ ಗೌರವಿಸಿದರು.



