ಕಾಂಗ್ರೆಸ್ ಸರಕಾರದ ಜನ ವಿರೋಧಿ ಆಡಳಿತದಿಂದಾಗಿ ಯಾವುದೇ ಸ್ಥಳೀಯ ಚುನಾವಣೆ ನಡೆದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಜನರು ಸೋಲಿಸಲಾರಂಭಿಸಿದ್ದಾರೆಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಮಂಗಳವಾರ ಪಟ್ಟಣದ ರೈತಭವನಲ್ಲಿ ಟಿಎಪಿಸಿಎಂಎಸ್‍ನ ಸಹಕಾರಿ ಮತದಾರರು, ಕಾರ್ಯಕರ್ತ ಬಂಧುಗಳಿಗೆ, ಚುನಾಯಿತ ಪ್ರತಿನಿಧಿಗಳು ಮತ್ತು ಎನ್‍ಡಿಎ ಮೈತ್ರಿಕೂಟದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಹು ನಿರೀಕ್ಷೆಯಿಂದ ರಾಜ್ಯದ ಜನರು ಕಾಂಗ್ರಸ್‍ಗೆ ಆಡಳಿತ ಕೊಟ್ಟಿದ್ದಾರೆ. ಆದರೆ ಅಭಿವೃದ್ಧಿಗೆ ಹಾಗೂ ಅಧಿಕಾರಿಗಳಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ಸರಕಾರಕ್ಕೆ ಬಂದೊದಗಿದೆ. ಇದರಿಂದ ರಾಜ್ಯದ ಜನತೆ ಕಾಂಗ್ರೆಸ್ ಸರಕಾರವನ್ನು ಕಿತ್ತೋಗೆಯಲು ಶಪಥ ಮಾಡಿದ್ದಾರೆ. ಇದೊಂದು ಎಲ್ಲಾ ಜನಪ್ರತಿನಿಧಿಗಳಿಗೆ ಪಾಠವಾಗುವುದರಿಂದ ಟಿಎಪಿಸಿಎಂಸ್ ಚುನಾವಣೆಯಲ್ಲಿ ಗೆದ್ದ ನಿರ್ದೇಶಕರು ಜನಪರವಾದ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.

ಎಂಎಲ್‍ಸಿ ಸಿ.ಟಿ.ರವಿ ಮಾತನಾಡಿ, ಗೃಹಜ್ಯೋತಿ ಹಣ ಲೂಟಿ ಹೊಡೆಯಲು ಹೋಗಿ ಸಚಿವೆ ಲಕ್ಷ್ಮೀ ಹೆಬಾಳಕರ್ ಸಿಕ್ಕಿಬಿದ್ದಿದ್ದಾರೆ. ರಾಜ್ಯದ ಜನತೆಯ ತೆರಿಗೆ ಹಣವನ್ನು ಎಲ್ಲಿ ಬಚ್ಚಿಟ್ಟಿದ್ದೀರೆಂದು ರಾಜ್ಯದ ಜನರಿಗೆ ಉತ್ತರ ನೀಡಬೇಕೆಂದು ಒತ್ತಾಯಿಸಿದ ಅವರು, ಕೃಷಿಯಲ್ಲಿ ಸಾಧನೆ ಮಾಡಿ ಅಧಿಕ ಆದಾಯ ಪಡೆಯುತ್ತಿರುವ ಅದೆಷ್ಟೋ ರೈತರು ನಾವಿಂದು ಕಾಣುತ್ತಿದ್ದೇವೆ. ಅವರಂತೆ ಎಲ್ಲಾ ರೈತರು ಕೃಷಿಯಲ್ಲಿ ಸಾಧನೆ ಮಾಡಬೇಕು. ಕಷ್ಟವಿದೆ ಎಂಬ ಕಾರಣಕ್ಕೆ ಯಾರೂ ಕೃಷಿ ಭೂಮಿ ಮಾರಾಟ ಮಾಡಬಾರದು. ಮುಂದಿನ ದಿನದಲ್ಲಿ ಮಣ್ಣಿನ ಮಕ್ಕಳದ್ದೇ ರಾಜ್ಯಬಾರ ನಡೆಯುತ್ತದೆ. ಪ್ರಕೃತಿ ಉಳಿಸುವ ರೈತರ ನೆರವಿಗೆ ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಕೃಷಿ ಪತ್ತಿನ ಸಂಘಗಳು ರೈತರಿಗೆ ಅನುಕೂಲವಾಗುವ ಕಾರ್ಯ ಮಾಡಬೇಕು. ಮುಂದಿನ ದಿನದಲ್ಲಿ ಕಾಫಿ ಕಲ್ಪವೃಕ್ಷವಾಗಿ ಪರಿವರ್ತನೆಗೊಳ್ಳಲಿದೆ. ಗುಣಮಟ್ಟದ ಕಾಫಿಗೆ ಆಧ್ಯತೆ ನೀಡಬೇಕು. ಬೇರೆ ರಾಜ್ಯದಲ್ಲಿ ಇಲ್ಲದ ಸರ್ಫೇಸಿ ನಮ್ಮ ರಾಜ್ಯದಲ್ಲಿ ಏಕಿದೆ ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದನ್ನು ಬಗೆಹರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‍ಶೆಟ್ಟಿ, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮಣ್‍ಗೌಡ, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷ ಜಿ.ಕೆ.ದಿವಾಕರ್, ನಿರ್ದೇಶಕಿ ಎ.ಕೆ.ಭಾರತೀ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಲ್.ಕಲ್ಲೇಶ್, ಉಪಾಧ್ಯಕ್ಷ ಕೆ.ಬಿ.ಗಣೇಶ್, ಮುಖಂಡರಾದ ಜ್ವಾಲನಯ್ಯ ಕಳಸ, ಎಂ.ಆರ್.ಜಗದಿಶ್, ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಬಿ.ಎನ್.ಜಯಂತ್, ಮನೋಜ್ ಹಳೆಕೋಟೆ, ಡಿ.ಬಿ.ಅಶೋಕ್, ಎಂ.ಸಿ.ಹೂವಪ್ಪ ಸೇರಿದಂತೆ ಎನ್‍ಡಿಎ ಮುಖಂಡರು ಟಿಎಪಿಸಿಎಂಎಸ್ ನಿರ್ದೇಶಕರು ಉಪಸ್ಥಿತರಿದ್ದರು.



