ಬೆಂಗಳೂರಿನ ಕೊಗಿಲು ಎಂಬಲ್ಲಿ ಅಕ್ರಮವಾಗಿ ಮನೆಕಟ್ಟಿಕೊಂಡವರನ್ನು ಸರ್ಕಾರ ತೆರವು ಮಾಡಿಸಿದ ನಂತರ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಇತ್ತ ಕಳೆದ ಆರು ವರ್ಷಗಳಿಂದ ಸರ್ಕಾರದ ನೆರವಿನ ಭರವಸೆಯಲ್ಲಿ ದಿನದೂಡುತ್ತಿರುವ ಮೂಡಿಗೆರೆ ತಾಲ್ಲೂಕಿನ ನೆರೆ ಸಂತ್ರಸ್ತರು ತಮ್ಮ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಹೊರ ರಾಜ್ಯದವರ ಮೇಲೆ ಸರ್ಕಾರ ತೋರುತ್ತಿರುವ ಕಾಳಜಿಯನ್ನ ಮಲೆನಾಡಿಗರ ಮೇಲೆ ಏಕೆ ತೋರುತ್ತಿಲ್ಲ ಎಂದು ಮೂಡಿಗೆರೆ ತಾಲೂಕಿನ ಮಲೆಮನೆ – ಮದುಗುಂಡಿ ಗ್ರಾಮದ ಜನ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

2019ರ ಆಗಸ್ಟ್ 9 ರಂದು ಮೂಡಿಗೆರೆ ತಾಲೂಕಿನ ಪಶ್ಚಿಮಘಟ್ಟದ ಸಾಲಿನಲ್ಲಿ ಸುರಿದ ಮಹಾಮಳೆಯಿಂದ ಹಲವಾರ ಗ್ರಾಮಗಳು ನಾಮಾವಶೇಷವಾಗಿದ್ದವು. ಹತ್ತಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಮಲೆಮನೆ ಮದುಗುಂಡಿ ಎಂಬ ಗ್ರಾಮಗಳ ಜನರು ಅಕ್ಷರಶಃ ಬೀದಿಗೆ ಬಿದ್ದಿದ್ದರು. ತಮ್ಮ ಮನೆ ಜಮೀನು ಮಹಾಮಳೆಯಲ್ಲಿ ಕೊಚ್ಚಿ ಹೋಗಿದ್ದವು. ಅಂದು ಅಲ್ಲಿನ ಜನರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿ ಮುಂದಿನ ಬದುಕಿಗೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಮತ್ತು ಪರ್ಯಾಯ ಭೂಮಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಂದಿನ ಬಿಜೆಪಿ ಸರ್ಕಾರವಾಗಲಿ, ಈಗ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರಕ್ಕಾಗಲಿ ಅಲ್ಲಿನ ಜನರಿಗೆ ಪರಿಹಾರ ಅಥವಾ ಭೂಮಿ ಕೊಡಲು ಸಾಧ್ಯವಾಗಿಲ್ಲ. ಅಂದಿನಿಂದಲೂ ಜನ ಸರ್ಕಾರಕ್ಕೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಜನರ ಭವಣೆ ಮಾತ್ರ ನೀಗಿಲ್ಲ.
ಈಗ ಕೇರಳದ ರಾಜಕಾರಣಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಅಲ್ಪಸಂಖ್ಯಾತರ ಎಂದು ಪರರಾಜ್ಯದ ಜನರ ಮೇಲೆ ಒಂದೇ ರಾತ್ರಿಗೆ ಸರ್ಕಾರಕ್ಕೆ ಬಂದಿರೋ ಪ್ರೀತಿ ಆರು ವರ್ಷದಿಂದ ಪರಿಹಾರಕ್ಕಾಗಿ ಅಲೆದಾಡುತ್ತಿರುವ ಮಲೆನಾಡಿನ ಜನರ ಮೇಲೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಕೇರಳಿಗರಿಗೆ ತಕ್ಷಣ ಸ್ಪಂದಿಸಿ ಮನೆ ಕಟ್ಟಿಕೊಡಲು ಮುಂದಾಗಿರುವ ಸರ್ಕಾರಕ್ಕೆ ಆರು ವರ್ಷಗಳಿಂದ ಸ್ವಂತ ಸೂರಿಲ್ಲದೆ ಅಲೆಯುತ್ತಿರುವ ತನ್ನದೇ ರಾಜ್ಯದ ಮಲೆನಾಡಿಗರ ಅಳಲು ಕೇಳಿಸುತ್ತಿಲ್ಲವೇ ಎಂಬ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರ ಮಲೆನಾಡಿಗರ ಬಗ್ಗೆಯೂ ಇದೇ ರೀತಿಯ ಕಾಳಜಿ ವಹಿಸಿ ಆದಷ್ಟು ಬೇಗ ಇಲ್ಲಿನ ಸಂತ್ರಸ್ತರಿಗೆ ಸೂಕ್ತ ಭೂಮಿ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.



