ಚಿಕ್ಕಮಗಳೂರು-ನಗರ ವ್ಯಾಪ್ತಿಯಲ್ಲಿ ನಕ್ಷಾ ಯೋಜನೆಯಡಿ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ಆಸ್ತಿಗಳ ಮಾಹಿತಿ ಅವರ ಮೊಬೈಲ್‌ನಲ್ಲೇ ಸೀಗುವಂತೆ ಮಾಡಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ತಿಳಿಸಿದರು.
ಈ ಸಂಬಂಧ ಸಾಫ್ಟ್ವೇರ್ ಸಿದ್ಧವಾಗುತ್ತಿದೆ. ನಗರಸಭೆ ಸಿಬ್ಬಂದಿ ನಗರಸಭೆ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ಆರಂಭಿಸಿದ್ದಾರೆ. ಜನವರಿ ಅಂತ್ಯದ ವರಗೆ ಈ ಕಾರ್ಯ ನಡೆಯಲಿದೆ ಎಂದರು.
ನಗರದಲ್ಲಿ ಉದ್ಯಾನವನ, ರಸ್ತೆಗಳ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಮುಂಬರುವ 2026-27ರ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಸಲಹೆಗಳು ಬಂದಿವೆ ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 14 ಸಂಘ-ಸಂಸ್ಥೆ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಿ ನಂತರ ಮಾಹಿತಿ ನೀಡಿದರು.
ಬೀದಿ ನಾಯಿಗಳನ್ನು ನಿಯಂತ್ರಿಸಬೇಕು ಎನ್ನುವ ಪ್ರಮುಖ ಬೇಡಿಕೆಯನ್ನು ಸಭೆ ಮುಂದಿಟ್ಟಿದ್ದಾರೆ. ಬೀದಿ ನಾಯಿಗಳ ನಿಯಂತ್ರಣ ಸಂಬಂಧ ಈ ವರ್ಷದಲ್ಲಿ ಏಳೆಂಟು ಬಾರಿ ಟೆಂಡರ್ ಕರೆದರೂ ಯಾರೊಬ್ಬರೂ ಮುಂದೆ ಬಂದಿಲ್ಲ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೇವೆ ಎಂದರು.
ಬೀದಿ ನಾಯಿಗಳನ್ನು ನಿಯಂತ್ರಿಸಲು ನಗರಸಭೆ ವತಿಯಿಂದಲೇ ಇಬ್ಬರು ತಜ್ಞ ಪಶು ವೈದ್ಯರನ್ನು ನೇಮಿಸಿಕೊಂಡು ನಗರಸಭೆ ಸಿಬ್ಬಂದಿಗೆ ಡಾಗ್ ಕ್ಯಾಚಿಂಗ್ ತರಬೇತಿ ನೀಡಿ ನಾಯಿಗಳನ್ನು ಸೆರೆ ಹಿಡಿಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಜನವರಿ 8 ರಂದು ನಡೆಯಲಿರುವ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಬೇಕು ಎನ್ನುವ ಸಲಹೆಗೆ ಈ ವರ್ಷ ಇನ್ನೂ ನಾಲ್ಕುಕಡೆಗಳಲ್ಲಿ ಘಟಕಗಳನ್ನು ಆರಂಭಿಸಲಾಗುವುದು ಎಂದು ಸಭೆ ಗಮನಕ್ಕೆ ತಂದಿದ್ದೇವೆ ಎಂದರು.
ಕಳೆದ ಸಾಲಿನಲ್ಲಿ ನಾಲ್ಕು ಕಡೆಗಳಲ್ಲಿ ಹೊಸದಾಗಿ ಶೌಚಾಲಯಗಳನ್ನು ನಿರ್ಮಿಸಿ ಉದ್ಘಾಟಿಸಲಾಗಿದೆ ಎನ್ನುವುದನ್ನು ಮನವರಿಕೆ ಮಾಡಿದ್ದೇವೆ ಎಂದರು.
ಉದ್ಯಾನವನಗಳ ಅಭಿವೃದ್ಧಿ ಸಂಬಂಧ ಬಂದ ಸಲಹೆಗೆ ಪ್ರತಿಕ್ರಿ ಸಿ ಈ ವರ್ಷ ನಗರಸಭೆ ಆವರಣದ ಪಾರ್ಕ್ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಳಸಿರುವುದರಿಂದ ಇತರೆ ಪಾರ್ಕ್ಗಳ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಈ 2026-27 ನೇ ಸಾಲಿನ ಬಜೆಟ್‌ನಲ್ಲಿ ಪಾರ್ಕ್ಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಪದವಿ ಓದುವ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್ ಕೊಡಲು ಅವಕಾಶವಿದೆ. ಅದನ್ನು ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳಿಗೂ ನೀಡಬೇಕು ಎಂದು ಸಭೆಯಲ್ಲಿ ಕೋರಿಕೆ ಬಂದಿದೆ. ಆದರೆ ಸರ್ಕಾದ ಸುತ್ತೋಲೆಯಲ್ಲಿ ಅದಕ್ಕೆ ಅವಕಾಶವಿಲ್ಲ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದರು.
ನಗರದಲ್ಲಿ ಮನೆ ಮನೆ ಕಸ ಸಂಗ್ರಹಣೆ ನಿರ್ವಹಣೆ ಕಾರ್ಯವನ್ನು ಜನವರಿ 1 ರಿಂದಲೇ ನಗರಸಭೆ ವಹಿಸಿಕೊಳ್ಳುತ್ತಿದೆ. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಕಸವನ್ನು ವಿಂಗಡಣೆ ಮಾಡಿ ಕಡ್ಡಾಯವಾಗಿ ನಗರಸಭೆ ವಾಹನಕ್ಕೆ ನೀಡಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅವಕಾಶ ಮಾಡಬಾರದು ಎಂದು ಮನವಿ ಮಾಡಿದರು.
ನಗರದಲ್ಲಿ ನಗರಸಭೆ ವತಿಯಿಂದ 100 ಸಿಸಿ ಕ್ಯಾಮರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಜನವರಿ 15 ರ ನಂತರ ಅವುಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಇಂದಿನ ಪೂರ್ವಭಾವಿ ಸಭೆಯಲ್ಲಿ ಬಂದಿರುವ ಸಲಹೆಗಳನ್ನು ಪರಿಶೀಲಿಸಿ ಸರ್ವಸದಸ್ಯರ ಸಭೆ ಮುಂದಿಟ್ಟು ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾಬಾಯಿ ಇದ್ದರು. ಕೆ.ಮೋಹನ್, ಸಿ.ಆರ್.ಪ್ರೇಂಕುಮಾರ್, ಕೆ.ಸಿ.ವಸಂತಕುಮಾರ್, ದಿನೇಶ್‌ಪಟವರ್ಧನ್, ವಕೀಲರಾದ ನಟರಾಜ್, ಬಿ.ಆರ್.ಜಗದೀಶ್, ಕೋಟೆ ಜಗದೀಶ್, ಧರ್ಮೇಶ್, ಚರ್ಚೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆಗಳನ್ನು ನೀಡಿದರು.



