ಕೊಲೆಯಾದ ಮಂಜುನಾಥ
ಹಳೇ ಪ್ರಿಯತಮೆಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಕ್ಕೆ ಆಕೆಯ ಅಣ್ಣ ಹಾಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಸೇರಿ ಮಾಜಿ ಪ್ರಿಯತಮನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ನಡೆದಿದೆ. ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಹತ್ಯೆಯಾದ ಯುವಕನನ್ನು ಉಡೇವಾ ಗ್ರಾಮದ ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಮೃತ ಮಂಜುನಾಥ್ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆಕೆಯ ಮನೆಯವರು ಆತ ಬೇಡ ಅಂತ ವೇಣು ಎಂಬ ಬೇರೆ ಹುಡುಗನ ಜೊತೆ ಆಕೆಯ ಮದುವೆಯನ್ನ ನಿಶ್ಚಯ ಮಾಡಿದ್ದರು. ಆದರೆ, ಕಳೆದ 2 ದಿನಗಳ ಹಿಂದೆ ಆಕೆಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಂಜುನಾಥ್ ವಿಶ್ ಮಾಡಿದ್ದ.
ಈ ಹಿನ್ನೆಲೆ ಮಾತನಾಡಬೇಕು ಎಂದು ಮಂಜುನಾಥ್‌ನನ್ನು ಕರೆಸಿಕೊಂಡ ವೇಣು ಆತನ ಮೇಲೆ ಸ್ನೇಹಿತರಾದ ಕಿರಣ್, ಅಪ್ಪು ಮತ್ತು ಮಂಜು ಜೊತೆ ಜಗಳವಾಡಿದ್ದಾನೆ. ಗಲಾಟೆ ವೇಳೆ ಮಂಜುನಾಥ್‌ಗೆ ಚಾಕುವಿನಿಂದ ಇರಿದು ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡ ಮಂಜುನಾಥ್ ನನ್ನು ಕೂಡಲೇ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮಗನನ್ನ ಕಳೆದುಕೊಂಡ ಮಂಜು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



