ಮಹಿಳಾ ಸಬಲೀಕರಣ ಆದ್ಯತೆಯಾಗಬೇಕು ಎಂದು ಚಿಕ್ಕಮಗಳೂರು ತಹಸೀಲ್ದಾರ್ ಕೆ.ಎಸ್. ರೇಷ್ಮಾ ಅಭಿಪ್ರಾಯಿಸಿದರು.
ಮಹಿಳಾ ಜಾಗೃತಿ ಸಂಘದ 39ನೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಚಿಕ್ಕಮಗಳೂರು ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ಮಾತನಾಡಿದರು.
ಮಹಿಳೆಯರ ಸ್ಥಿತಿಗತಿಯ ಬಗ್ಗೆ ಚಿಂತನೆ-ಸಮಾಲೋಚನೆಗೆ ಮಹಿಳಾ ಜಾಗೃತಿ ಸಂಘ ಅತ್ಯುತ್ತಮ ವೇದಿಕೆ ಆಗಿದೆ. ಸ್ತ್ರೀ ಸ್ವಾತಂತ್ರ್ಯದ ಸದ್ಭಳಕೆ ಕಾಣುತ್ತಿದ್ದೇವೆ. ಈ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಹೊರಗಡೆ ಹೋರಾಡಿದರೆ, ಮಹಿಳಾ ಅಧಿಕಾರಿಗಳು ಮತ್ತು ಉದ್ಯೋಗಸ್ಥರು ಆಡಳಿತದ ಒಳಗಿದ್ದುಕೊಂಡು ಮಹಿಳೆಯರ ಸಬಲೀಕರಣ ಹಾಗೂ ಸುಧಾರಣೆಗೆ ಶ್ರಮಿಸಲಾಗುತ್ತಿದೆ ಎಂದರು.
ಕುಟುಂಬದ ಜವಾಬ್ದಾರಿಯ ನಡುವೆ ಸಮಯಾವಕಾಶ ಮಾಡಿಕೊಂಡು ಇಂತಹ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವುದು ಒಳ್ಳೆಯ ಸಂಗತಿ. ಉದ್ಯೋಗಸ್ಥ ಮಹಿಳೆಯರು ಕುಟುಂಬ, ಕಛೇರಿ ಕಾರ್ಯಗಳ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವುದು ಕಷ್ಟಕರ, ಸವಾಲಿನ ಸಂಗತಿಯೂ ಹೌದು ಎಂದ ರೇಷ್ಮಾ, ಸಮಯದ ಹೊಂದಾಣಿಕೆ ಮುಖ್ಯವಾಗುತ್ತದೆ ಎಂದರು.
ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಸುಲೋಚನಾಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡರೆ ಹೆಚ್ಚಿನ ಕಾರ್ಯಗಳನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ನಾಲ್ಕು ತಿಂಗಳಿಗೊಮ್ಮೆ ಸೇವಾ ಯೋಜನೆಯನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಅಲ್ಪ ಪ್ರಮಾಣದ ಸಹಕಾರ ನೀಡಲಾಗುತ್ತಿದೆ ಎಂದರು.
ಗೌರಮ್ಮಬಸವೇಗೌಡರ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ಸಂಘ 39ವರ್ಷಗಳಿಂದ ನಿರಂತರವಾಗಿ ಕ್ರಿಯಾಶೀಲವಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ. ಶಾಲಾಶುಲ್ಕ, ಬಟ್ಟೆ, ಪುಸ್ತಕ, ಕಂಪ್ಯೂಟರ್, ಶುದ್ಧಕುಡಿಯುವನೀರು ಒದಗಿಸುವ ಮೂಲಕ ಇತಿಮಿತಿಯಲ್ಲಿ ಸೇವಾ ಕಾರ್ಯದಲ್ಲೂ ತೊಡಗಿದೆ. ಸ್ಥಾಪಕ ಅಧ್ಯಕ್ಷರು ದತ್ತಿ ನೀಡಿದ್ದು, ಅದರಲ್ಲಿ ಬರುವ ಬಡ್ಡಿ ಬಳಸಿ ಮೂರುವರ್ಷಕ್ಕೊಮ್ಮೆ ನಾಡಿನ ಸಾಧಕ ಮಹಿಳೆಯರನ್ನು ಗುರುತಿಸಿ 10,000ರೂ.ಗಳೊಂದಿಗೆ ‘ಮಹಿಳಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇತ್ತೀಚಿಗೆ ನಮ್ಮನ್ನು ಅಗಲಿರುವ ಸಾಲುಮರದ ತಿಮ್ಮಕ್ಕ, ಮೋಹಿನಿಸಿದ್ದೇಗೌಡರೂ ಮಹಿಳಾರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದರೆಂದು ಸುಲೋಚನಾ ಸ್ಮರಿಸಿದರು.
ಕಾರ್ಯದರ್ಶಿ ಕಾತ್ಯಾಯಿನಿಶೇಖರ್ ಸ್ವಾಗತಿಸಿ, ಸಹಕಾರ್ಯದರ್ಶಿ ಗೀತಾಸುಂದರೇಶ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರುಗಳಾದ ಗುಣರತ್ನ ನಂದೀಶ್ ಮತ್ತು ಯಶೋಧ ಶಿವಪ್ಪ ಪ್ರಾರ್ಥಿಸಿ, ಭಾರತಿಶಿವರದ್ರಪ್ಪ ವರದಿ ಮಂಡಿಸಿ, ಶೈಲಾಚೆಲುವಯ್ಯ ವಂದಿಸಿದರು.
ನಿರ್ದೇಶಕರುಗಳಾದ ಯಮುನಾಸಿ.ಶೆಟ್ಟಿ, ಪಾರ್ವತಿಬಸವರಾಜು, ಗೀತಾಮೂರ್ತಿ, ಡಿ.ಎಸ್.ಮಮತಾ, ಕವಿತಾಗೋಪಾಲ್, ರೇಣುಕಾಪ್ರಸನ್ನ, ಮತ್ತು ಸಿ.ಎಂ.ಹೇಮಾ ವೇದಿಕೆಯಲ್ಲಿದ್ದರು.
ಕಾತ್ಯಾಯಿನಿಸಿ.ಶೇಖರ್, ಚಂದ್ರಲೀಲಾಶೆಟ್ಟಿ, ಗೀತಾಕುಮಾರ್, ಶೈಲಾಚೆಲುವಯ್ಯ ಮತ್ತು ರೇಣುಕಾಕುಮಾರ್ ಶಾಲಾವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿದರು.
ವಿವಿಧ ಆಟೋಟ ಸ್ಪರ್ಧೆ, ಬೆಂಕಿರಹಿತ ಅಡುಗೆ ಸ್ಪರ್ಧೆ, ವಿವಿಧ ರಾಜ್ಯಗಳ ವೇಷಭೂಷಣ ಸ್ಪರ್ಧೆಯನ್ನು ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ನಡೆಸಿದ್ದು ವಿಜೇತರಿಗೆ ಸುಲೋಚನಾಶೇಖರ್ ಬಹುಮಾನ ವಿತರಿಸಿದರು. ಅದೃಷ್ಟ ರಾಣಿ, ಅದೃಷ್ಟ ವನಿತೆ, ಅದೃಷ್ಟ ಶಾಲಿನಿ, ಅದೃಷ್ಟ ಸಿರಿ ಪುರಸ್ಕಾರ ನೀಡಲಾಯಿತು. ಸಾಂಸ್ಕøತಿಕ ಕಾರ್ಯಕ್ರಮ ಗಮನಸೆಳೆಯಿತು.



