ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಮೂಲಕ ಜಾರಿಗೆ ತರುತ್ತಿರುವ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯ ನವೀಕರಣ ಮತ್ತು ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮುಂದಿನ ಸಾಲಿಗೆ ಯಶಸ್ವಿನಿ ಆರೋಗ್ಯ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ದಿನಾಂಕ :03-1-2026 ರಿಂದ 31-03-2026ರ ವರೆಗೆ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ರಂಗನಾಥ ಜಿ ಅವರು ; ರಾಜ್ಯದಲ್ಲಿ ಯಾವುದೇ ಸಹಕಾರಿ ಸಂಸ್ಥೆಗಳ ಸದಸ್ಯರಾದ ಮತ್ತು ಸಹಕಾರಿ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಸಂಘಗಳ ಸದಸ್ಯರಾದವರ ಕುಟುಂಬದವರಿಗೆ ಈ ಯೋಜನೆ ಅನ್ವಯವಾಗುತ್ತದೆ.
ಗ್ರಾಮೀಣ ಪ್ರದೇಶದ 4 ಜನರ ಕುಟುಂಬಕ್ಕೆ ರೂ. 500-00 ಹಾಗೂ ನಗರ ಪ್ರದೇಶದ 4 ಜನರ ಕುಟುಂಬಕ್ಕೆ ರೂ. 1000-00 ಹಣ ಪಾವತಿಸಿ ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ಕುಟುಂಬದಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರಿದ್ದರೆ ಗ್ರಾಮೀಣ ಭಾಗದಲ್ಲಿ ತಲಾ ಒಬ್ಬರಿಗೆ ರೂ. 100 ಹಾಗೂ ನಗರ ಪ್ರದೇಶದಲ್ಲಿ ರೂ. 200 ಹೆಚ್ಚುವರಿ ಶುಲ್ಕ ಪಾವತಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ ಯಾವುದೇ ಶುಲ್ಕವಿರುವುದಿಲ್ಲ, ವಿಶೇಷ ಘಟಕ ಯೋಜನೆಯಡಿ ಸರ್ಕಾರವೇ ಅವರ ಶುಲ್ಕವನ್ನು ಭರಿಸುವುದು, ಇದಕ್ಕೆ ಸೂಕ್ತ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೊಂದಣಿ ಶುಲ್ಕ ಇಲ್ಲದೇ ಇರುವುದರಿಂದ ಒಂದೇ ಬಾರಿಗೆ ಮೂರು ವರ್ಷಗಳ ಅವಧಿಗೆ ನೊಂದಣಿ ಮಾಡಲಾಗುವುದು.
ಕಳೆದ ಬಾರಿ ಹೆಸರು ನೊಂದಾಯಿಸಿಕೊಂಡು ಅದನ್ನು ಮುಂದಿನ ಅವಧಿಗೂ ಮುಂದುವರಿಸಿಕೊಂಡು ಹೋಗಲು ಬಯಸುವವರು, ಇದುವರೆಗೂ ಹೆಸರು ನೊಂದಾಯಿಸಿಕೊಳ್ಳದವರು ತಾವು ಸದಸ್ಯರಾಗಿರುವ ಸಹಕಾರ ಸಂಘಗಳಲ್ಲಿ 31-3-2026ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ.
ತುರ್ತು ಆರೋಗ್ಯ ಸಮಸ್ಯೆಯಾದಾಗ ಈ ಯೋಜನೆ ಬಹಳ ಅನುಕೂಲಕರವಾಗಿದ್ದು, ಕುಟುಂಬಕ್ಕೆ ರೂ. 5 ಲಕ್ಷದ ವರೆಗೆ ಆರೋಗ್ಯ ರಕ್ಷಾ ವಿಮೆ ಸೌಲಭ್ಯವಿರುತ್ತದೆ.
ಹೆಸರು ನೊಂದಾಯಿಸಲು ನಿಗದಿತ ನೋಂದಣಿ ಶುಲ್ಕದೊಂದಿಗೆ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ ಮತ್ತು 2 ಪಾಸ್ ಪೋರ್ಟ್ ಅಳತೆಯ ಪೋಟೋ ನೀಡಬೇಕಾಗುತ್ತದೆ.



