ಇಪ್ಪತ್ತು ವರ್ಷದ ಹಿಂದೆ ಮೂಡಿಗೆರೆ ತಾಲ್ಲೂಕು ಬಣಕಲ್ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತೆ ಅದೇ ಶಾಲೆಯ ಕೊಠಡಿಯಲ್ಲಿ ಕುಳಿತಿದ್ದರು. ಅಂದು ಪಾಠ ಮಾಡಿದ ಶಿಕ್ಷಕರು ಬಂದು ಶಾಲೆಯ ಇದೇ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕದ ತೆಗೆದು ಹಾಜರಾತಿ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಂದ ಉತ್ತರ ಪಡೆದುಕೊಂಡರು. ಎರಡು ದಶಕದ ಹಿಂದಿನ ಶಾಲೆಯ ನೆನಪನ್ನು ಮತ್ತೆ ಮೆಲುಕು ಹಾಕಿದರು. ಪ್ರಾರ್ಥನೆಗೆ ಸಾಲಾಗಿ ನಿಂತು ನಾಡಗೀತೆಗೆ ಧ್ವನಿಯಾದರು.
ಬಣಕಲ್ ಪ್ರೌಢಶಾಲೆಯ 2006-2008ರ ಬ್ಯಾಚ್‍ನ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಮತ್ತು ಗುರು ವಂದನಾ ಕಾರ್ಯಕ್ರಮ ಇಂತಹ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಯಿತು. 40 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ನೆನಪನ್ನು ಮೆಲುಕು ಹಾಕಿದರು.
ಶಿಕ್ಷಕರಾದ ಎನ್ ಚಂದ್ರಶೇಖರ್, ಪಿ ವಾಸುದೇವ್, ಜಿ.ಎಚ್ ಶ್ರೀನಿವಾಸ್, ವಲ್ಸಮ್ಮ, ಕವಿತಾ, ಸಿ ಬೋರಕ್ಕ, ಡಿ.ಎನ್ ಪ್ರವೀಣ್, ಉಮಾ ಮಹೇಶ್ ಅವರನ್ನು ಗೌರವಿಸಲಾಯಿತು. ಬೇರೆ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳು ಎರಡು ದಶಕಗಳ ನಂತರ ಸಿಕ್ಕ ತಮ್ಮ ಸಹಪಾಠಿಗಳನ್ನು ಕಂಡು ಕುಶಲೋಪರಿ ವಿಚಾರಿಸಿದರು.
ಶಾಲಾ ದಿನಗಳನ್ನು ನೆನಪಿಸಿಕೊಂಡರು. ನೌಕರಿ, ಮದುವೆ, ಮಕ್ಕಳು ಮುಂತಾದವುಗಳ ಬಗ್ಗೆ ಪರಿಚಯ ಮಾಡಿಕೊಂಡರು. ಬದುಕಿನ ಜಂಜಾಟಗಳಲ್ಲಿ ಮುಳುಗಿ ಹೋಗಿದ್ದ ವಿದ್ಯಾರ್ಥಿಗಳು ಮತ್ತೆ ಶಾಲೆಯ ಚಂದದ ದಿನಗಳನ್ನು ಕಳೆದ ಶಾಲೆಯಲ್ಲಿ ಮತ್ತೆ ಸೇರಿ ಸಂತೋಷಪಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ವಿದೇಶದಲ್ಲಿ ನೌಕರಿಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಗೂಗಲ್ ಮೀಟ್ ಮೂಲಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಶಾಲೆಯ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು. ಹಾಗೂ ನೀರಿನ ದಿಸ್ಪೆನ್ಸರ್ ಅನ್ನು ಶಾಲೆಗೆ ಕೊಡುಗೆ ನೀಡಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್. ದಿವಾಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ಬಿ.ಕೆ.ಪೃಥ್ವಿ, ನಿರ್ದೇಶಕರಾದ ಜಕವುಲ್ಲಾ, ಬಿ.ಎಸ್.ವಿಕ್ರಂ ಮುಂತಾದವರು ಇದ್ದರು.
ವರದಿ : ನಂದೀಶ್ ಬಂಕೇನಹಳ್ಳಿ



