ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಸಮೀಪದ ಕೆಳಗೂರು ಗ್ರಾಮದಲ್ಲಿ ಸೋಮವಾರ ಶಬರಿಮಲೆ ಯಾತ್ರೆಗೆ ಹೊರಟಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ಬ್ಯಾರಿ ಮುಸಲ್ಮಾನ ಬಾಂಧವರು ಫಲಹಾರ ಒದಗಿಸಿ ಶುಭ ಹಾರೈಕೆಯ ಬೀಳ್ಕೊಡುಗೆಯನ್ನು ನೀಡಿದರು.
ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎ.ಯು ಇಬ್ರಾಹಿಂ, ಬದುಕುವಾಗ ನೆರೆಯ ಪರಿಸರದಲ್ಲಿ ಎಲ್ಲರೂ ಕೂಡ ಸಹೋದರತ್ವದಿಂದ ಬಾಳ್ವೆ ನಡೆಸುತ್ತೇವೆ ಸುಖ ದುಃಖಗಳಲ್ಲಿ ಭಾಗಿಯಾಗುತ್ತೇವೆ ಧರ್ಮಗಳು ತತ್ವಗಳು ಸಿದ್ದಾಂತಗಳು ವಿಭಿನ್ನವಾದರೂ ಅವುಗಳ ಸಾರುವ ಸಾರ ಒಂದೇ ಆಗಿದ್ದು ಎಲ್ಲರೂ ಪರಮಾತ್ಮನ ಸನ್ನಿಧಿಗೆ ಹೋಗುವ ವಿಳಾಸಗಳು ಬೇರೆ ಬೇರೆ ಅಷ್ಟೇ ಸೌಹಾರ್ದತೆ ಸಹೋದರತ್ವದಿಂದ ಶಾಂತಿಯುತ ಸಮಾಜವನ್ನು ನಿರ್ಮಿಸೋಣ ಎಂದು ಮನವಿ ಮಾಡಿದರು.
ಬಳಿಕ ಶಬರಿಮಲೆ ಯಾತ್ರೆಗೆ ಕೆಳಗೂರಿನಿಂದ ಗುರುಸ್ವಾಮಿಗಳಾದ ಸತೀಶ್ ಮಡೆನೇರಲು, ಪೂರ್ಣೇಶ್ ಕೆಳಗೂರು ನೇತೃತ್ವದಲ್ಲಿ ಹೊರಟಿದ್ದ 30 ಮಂದಿ ಅಯ್ಯಪ್ಪ ಮಾಲಾಧಾರಿಗಳಿಗೆ ಹಣ್ಣಿನ ಬುಟ್ಟಿ ಮತ್ತು ಕುಡಿಯುವ ನೀರಿನ ಬಾಟಲ್ ಗಳನ್ನು ನೀಡಿ ಪ್ರಯಾಣಕ್ಕೆ ಶುಭ ಹಾರೈಸಿ ಬೀಳ್ಕೊಡುಗೆ ನೀಡಲಾಯಿತು.
ಬ್ಯಾರಿ ಒಕ್ಕೂಟದ ಉಪಾಧ್ಯಕ್ಷರಾದ ಇಸಾಕ್, ಖಜಾಂಚಿ ಇಬ್ರಾಹಿಂ ಶಾಲಿಮಾರ್, ಸಮುದಾಯದ ಹಿರಿಯ ಮುಖಂಡರಾದ ಎಕೆ, ಇಸ್ಮಾಯಿಲ್, ಸ್ಥಳೀಯ ಮುಖಂಡರಾದ ಮುಳ್ಳುಂಡೆ ಮಂಜುನಾಥ್, ಭಕ್ತಾದಿಗಳು ಭಾಗವಹಿಸಿದ್ದರು.



