ಕೋರೆಗಾಂವ್‍ಯುದ್ಧ ಸಮಾನತೆ ಮತ್ತು ಸ್ವಾಭಿಮಾನದ ಪ್ರತೀಕ ಎಂದು ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.
ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿಯು ಚಿಕ್ಕಮಗಳೂರು ನಗರದ ಆಜಾದ್‍ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ 208ನೆಯ ಭೀಮಾ ಕೋರೆಗಾಂವ್ ವಿಜಯೋತ್ಸವ ಶೌರ್ಯದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಚರಿತ್ರೆಯಲ್ಲಿ ಅನೇಕ ಯುದ್ಧ-ಚಳುವಳಿಗಳು ನಡೆದಿದ್ದರೂ ಭೀಮಾ ಕೋರೆಗಾಂವ್ ಅತ್ಯಂತ ಪ್ರಮುಖವಾದ ಸಂಗತಿ. ಪೇಶ್ವೆ ರಾಜರ ಆಡಳಿತ ಕಾಲಾವಧಿಯಲ್ಲಿ ಶೋಷಿತ ವರ್ಗದ ಮಹರ್ ಸಮುದಾಯದ ಸಿದ್ಧನಾಕ ಮತ್ತು ಭೀಮನಾಕ ಎಂಬ ಸೈನಿಕ ಮುಖ್ಯಸ್ಥರು ಬ್ರಿಟಿಷರ ವಿರುದ್ಧ ಯುದ್ಧವನ್ನು ಗೆದ್ದರೆ ತಮ್ಮ ಸಮುದಾಯಕ್ಕೆ ಸಮಾನವಾಗಿ ಬಾಳುವ ಅವಕಾಶ ಕೋರಿದ್ದರು. ಒಂದೊಮ್ಮೆ ಸೋಲಾದರೆ ವೀರಮರಣ ಹೊಂದಿದವರ ಕುಟುಂಬಗಳಿಗೆ ಪರಿಹಾರ ಕೇಳಿದ್ದರು. ಆದರೆ ಪೇಶ್ವೆ ರಾಜರು ತಿರಸ್ಕರಿಸಿ ಅಪಮಾನಗೊಳಿಸಿದ ಹಿನ್ನಲೆಯಲ್ಲಿ 500ಮಹರ್ ಸಮುದಾಯದ ಸೈನಿಕರ ಪಡೆಯೊಂದಿಗೆ ಬ್ರಿಟಿಷರ ಸೇನೆಯ ಜೊತೆ ಕೈಜೋಡಿಸಿ ಪೇಶ್ವೆಗಳನ್ನು ಪರಾಭವಗೊಳಿಸಿದ ವಿಜಯೋತ್ಸವ ಇದು ಎಂದರು.
ಒಂದೇ ದಿನದಲ್ಲಿ 28,000 ಸÉೈನ್ಯಬಲವನ್ನು ಹಿಮ್ಮೆಟ್ಟಿಸಿದ ಕೀರ್ತಿ ಸಿದ್ಧನಾಕ ಮತ್ತು ಭೀಮನಾಕ ನೇತೃತ್ವಕ್ಕೆ ಲಭ್ಯವಾಯಿತು. 1818ರಲ್ಲಿ ನಡೆದ ಐತಿಹಾಸಿಕ ಯುದ್ಧದಲ್ಲಿ 171ಜನ ಮಹರ್‍ಯೋಧರು ವೀರಮರಣ ಅಪ್ಪಿದ್ದು ಭೀಮಾನದಿಯಲ್ಲಿ ಸ್ನಾನಮಾಡಿ ವಿಜಯೋತ್ಸವ ಆಚರಿಸಿದ ಸ್ಮರಣೆ ಇಂದಿನ ಸಮಾರಂಭ ಎಂದ ಶಾಸಕ ತಮ್ಮಯ್ಯ, ಅಂದು ಹೊತ್ತಿದ ಕಿಚ್ಚಿನ ಫಲ ಮುಂದೆ ಡಾ.ಅಂಬೇಡ್ಕರ್ ಇದರಿಂದ ಪ್ರಭಾವಿತರಾಗಿ ಅಪೂರ್ವ ಸಂವಿಧಾನ ರಚಿಸಿದ್ದು ‘ಒಂದು ವ್ಯಕ್ತಿಗೆ ಒಂದು ಮತ’ ಅಧಿಕಾರ ಎಲ್ಲರಿಗೂ ಪ್ರಾಪ್ತಿಯಾಗಿದೆ ಎಂದರು.
ಜ್ಞಾನವೇ ನಿಜವಾದ ಸಂಪತ್ತು. ಜಾತಿ ತಾರತಮ್ಯ ಸಮಾಜಕ್ಕೆ ಶಾಪ. ಇಂದಿಗೂ ಜಾತಿವ್ಯವಸ್ಥೆ ಸ್ವಲ್ಪ ಉಳಿದಿದ್ದು ಅದನ್ನೂ ತೊಡೆಯಬೇಕು. ವಿಶ್ವಮಾನವ ಸಂದೇಶ ನೀಡಿದ ಕುವೆಂಪು ನಮ್ಮ ಜಿಲ್ಲೆಯವರೆಂಬುದು ಹೆಮ್ಮೆಯ ಸಂಗತಿ ಎಂದರು.
ನಾಗರಿಕ ಸಮಾಜದ ಅರ್ಥಹೀನ ವಿಚಾರಗಳ ವಿರುದ್ಧ ಭಾರತದಲ್ಲಿ ಉದಯಿಸಿದ ರತ್ನಗಳು ಬುದ್ಧ, ಬಸವ, ಅಂಬೇಡ್ಕರ್, ಕನಕರು. ಅಂದಿನ ಕಾಲದಲ್ಲಿ ಬಸವಣ್ಣ, ಅಂಬೇಡ್ಕರ್‍ರಿಗೆ ಕೆಲವು ಸಂಪ್ರದಾಯವಾದಿಗಳು ತೊಂದರೆ ಕೊಟ್ಟಿದ್ದರು. ಇಂದೂ ಅಂತಹವರು ಇದ್ದಾರೆ. ಸತ್ಯವನ್ನು ಮುಚ್ಚಿಡುವ ಬಚ್ಚಿಡುವ ಪ್ರವೃತ್ತಿ ಇದೆ. ಹಲವರು ಮೊಸಳೆಕಣ್ಣೀರು ಹಾಕುತ್ತಾರೆ ಏಕೆಂದರೆ ಇಂದು ಬಸವ ಮತ್ತು ಅಂಬೇಡ್ಕರ್ ಬಿಟ್ಟು ಬದುಕುವ ಶಕ್ತಿ ಯಾರಿಗೂ ಎಲ್ಲ ಎಂದÀು ತಮ್ಮಯ್ಯ ಗುಡುಗಿದರು.
ದಸಂಸ ಅಂಬೇಡ್ಕರ್‍ವಾದ ರಾಜ್ಯ ವಿಭಾಗೀಯ ಸಂಚಾಲಕ ಮರ್ಲೆಅಣ್ಣಯ್ಯ ಮಾತನಾಡಿ ನಗರದಲ್ಲಿ ಕ್ರಿಯಾಶೀಲವಾಗಿರುವ 40ಸಂಘಟನೆಗಳು ಸೇರಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಸ್ವಾಭಿಮಾನದ ಸಂಕೇತವಾಗಿ ಬೃಹತ್ ಸಮಾವೇಶಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಹಲವರ ಪರಿಶ್ರಮ ಯಶಸ್ಸಿಗೆ ಕಾರಣ. ಒಗ್ಗಟ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಂಡರೆ ಒಳ್ಳೆಯ ಸಾಧನೆ ನಮ್ಮದಾಗುತ್ತದೆ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಧ್ವನಿಸುರುಳಿಯ ಮೂಲಕ ಸಂದೇಶ ಕಳುಹಿಸಿದ್ದು ಮಹಾರ್ ಜನಾಂಗದ ಶೌರ್ಯ-ಸಾಹಸಗಳ ಪ್ರತೀಕವೇ ಕೋರೆಗಾಂವ್ ವಿಜಯೋತ್ಸವ. ದೇಶಕ್ಕಾಗಿ, ಧರ್ಮಕ್ಕಾಗಿ ಪ್ರಾಣಕೊಟ್ಟ ಹಿನ್ನಲೆಯ ಶೌರ್ಯದ ಯಶೋಗಾಥೆ ಇದು. ಪ್ರೀತಿ-ಸೌಹಾರ್ದ-ಸಾಮರಸ್ಯದ ಬದುಕು ನಮ್ಮದಾಗಬೇಕು. ಭೀಮಬಲ ಸಾಮಥ್ರ್ಯ ಪ್ರಕಟಿಸುವಾಗ ಭಾರತದ ಹಿತಕ್ಕಾಗಿ ಬಳಸಿಕೊಳ್ಳೋಣ ಎಂದು ಹಾರೈಸಿದರು.
ಎಸ್‍ಟಿಪಿಐ ರಾಜ್ಯಕಾರ್ಯದರ್ಶಿ ಅಂಗಡಿಚಂದ್ರು ಮಾತನಾಡಿ ಸಮ ಸಮಾಜಕಟ್ಟಲು ಕೋರೆಗಾಂವ್ ವಿಜಯೋತ್ಸವ ಸಹಕಾರಿ. ದೃಢಸಂಕಲ್ಪ ಮತ್ತು ನಿರ್ಧಾರದಿಂದ ಸಣ್ಣ ಗುಂಪು ದೊಡ್ಡ ಸೈನ್ಯವನ್ನು ಹಿಮ್ಮೆಟ್ಟಿಸಿತ್ತು. ಒಗ್ಗಟ್ಟಿನ ಪರಿಣಾಮವಿದು. ಜಾತಿ ಇಲ್ಲದ, ಭೀತಿ ಇಲ್ಲದ ಹೊಸನಾಡನ್ನು ಕಟ್ಟಬೇಕಾಗಿದೆ ಎಂದರು.
ಮಾಜಿಸಚಿವರಾದ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಬಿ.ಬಿ.ನಿಂಗಯ್ಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಕೋರೆಗಾಂವ್ ಯುದ್ಧ ಸಂದರ್ಭವನ್ನು ಅರಿಯಬೇಕು. ಅದು ಇತಿಹಾಸದ ಒಂದು ಭಾಗ. ಅಂಬೇಡ್ಕರ್ ವಿಚಾರಗಳನ್ನು ಅರ್ಥಮಾಡಿಕೊಂಡು ಸ್ವಾಭಿಮಾನದ ಕಿಚ್ಚನ್ನು ನಮ್ಮೊಳಗೆ ಹಚ್ಚಿಕೊಂಡು ನಡೆದಾಗ ಬದುಕಿಗೊಂದು ಅರ್ಥ ಬರುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿಯಬೇಕು. ಸಮಯಪ್ರಜ್ಞೆಯೊಂದಿಗೆ ವಿಚಾರವಂತಿಕೆಯಿಂದ ಸಂಘಟಿತರಾದರೆ ಸುಂದರ ಸಮಾಜ ನಿರ್ಮಿಸಬಹುದೆಂದರು.
ಸಾಣೇಹಳ್ಳಿ ಮಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ 12ನೆಯ ಶತಮಾನಕ್ಕೂ ಇಂದಿನ 21ನೆಯ ಶತಮಾನಕ್ಕೂ ಹೆಚ್ಚು ಬದಲಾವಣೆ ಇಲ್ಲ. ಆ ಸಮಸ್ಯೆಗಳು ವಿಜೃಂಭಿಸುತ್ತಲೇ ಇವೆ. ಜಾತಿಯ ಭೂತ ಮನುಷ್ಯರನ್ನು ಮನುಷ್ಯನನ್ನಾಗಿ ಕಾಣುವ ಅಂತಃಕರಣ ಕಳೆದುಕೊಂಡಿದ್ದೇವೆ. ಮೇಲುಕೀಳು ಭಾವ ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಮಾನತೆಗಾಗಿ ನಡೆದ ಕೋರೆಂಗಾವ್ ಯುದ್ಧವನ್ನು ಸ್ಮರಿಸುವುದು ಪ್ರಸ್ತುತ. ವಿಜಯೋತ್ಸವ ಎನ್ನುವುದಕ್ಕಿಂತ ಜನಜಾಗೃತಿ ಉತ್ಸವವಾಗಿ ಆಚರಿಸುವುದು ಸೂಕ್ತ ಎಂದರು.
ಚಾರ್ತುವರ್ಣಗಳಾಗಿ ವಿಂಗಡಿಸಿ ಒಂದುವರ್ಗ ಶ್ರೇಷ್ಠವೆಂದು ಹೇಳಿಕೊಂಡು ಉಳಿದವರನ್ನು ಕೀಳೆಂದು ಹೀಗಳೆಯುವ ವ್ಯವಸ್ಥೆ ಸರಿಯಲ್ಲ. ನೀರು ನೆಲಕ್ಕಿಲ್ಲದ ಜಾತಿ ಮನುಷ್ಯನಿಗೆ ಏಕೆ ಎಂದು ಬಸವಣ್ಣ ಪ್ರಶ್ನಿಸಿದ್ದರು. ವಿವಿಧ ವರ್ಗದ ಹಿನ್ನಲೆಯ ಪ್ರೇಮಿಗಳ ವಿವಾಹವನ್ನು ಅಂದು ನಡೆಸಿದಾಗ ವಿರೋಧಿಸಿದ ವರ್ಗದವರೆ ಇಂದೂ ಬಸವನನ್ನು ಕಬ್ಜಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಂದು ಅಪಾದಿಸಿದರು.
ಶಿಕ್ಷಣ, ಸಂಘಟನೆ, ಹೋರಾಟ ಸಮಾನ ಸಮಾಜ ನಿರ್ಮಾಣಕ್ಕೆ ಅಗತ್ಯ ಸಂಗತಿಗಳು ಇವು ಮೂರು ಹಳಿ ತಪ್ಪಬಾರದು. ಕ್ರಾಂತಿಗೀತೆ ಹಾಡುವುದಕ್ಕಿಂತ ಹೋರಾಟದ ಶಕ್ತಿ ಅರಿಯುವ ಅಧ್ಯಯನ ಮಾಡುವ ಪ್ರವೃತ್ತಿ ನಮ್ಮದಾಗಬೇಕು. ವಚನ ಸಂವಿಧಾನವು ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಂತೆಯೆ ಇದೆ. ವಚನಗಳು ಕನ್ನಡನಾಡಿಗೆ- ಕೆಲವರ್ಗಕ್ಕೆ ಸೀಮಿತವಾಗಿತ್ತು. ವಚನ ಸಾಹಿತ್ಯದ ಪೂರ್ಣಪ್ರಮಾಣದ ಪರಿಚಯ ಅಂಬೇಡ್ಕರ್‍ರವರಿಗೆ ಇದ್ದಿದ್ದರೆ ಅವರೂ ಉಲ್ಲೇಖಿಸುತ್ತಿದ್ದರೆಂದು ಸ್ವಾಮೀಜಿ ನುಡಿದರು.
ಕಾಯಕ, ಕಾಲ ಮತ್ತು ಕಾಸುಗಳಿಗೆ ಮಹತ್ವವಿದೆ. ಇವನ್ನು ಸಮರ್ಥವಾಗಿ ಬಳಸಿಕೊಂಡಾಗ ಸಾಧನೆ ಸಾಧ್ಯ. ಸ್ವಾತಂತ್ರ್ಯ ಮತ್ತು ಕಾಲದ ಪ್ರಜ್ಞೆ ಅರಿವು ನಮಗಿರಬೇಕು. ಡಿ.ಜೆ.ಸಂತೋಷವನ್ನು ತಿರಸ್ಕರಿಸಿ ಜಾನಪದ ವೈಭವ ಮೆರೆಸಬೇಕಾಗಿದೆ. ಅಬ್ಬರ ಆಡಂಬರದ ಶಬ್ದಕ್ಕಿಂತ ಮಧುರವಾದ ಈ ನೆಲದ ವಾದ್ಯಗಳನ್ನು ಬಳಸಿಕೊಂಡರೆ ಇನ್ನಷ್ಟು ಶಿಸ್ತು ಮತ್ತು ಸಂಘಟನೆ ಸಾಧ್ಯವಾಗುತ್ತದೆ ಎಂದು ಸಾಣೇಹಳ್ಳಿ ಶ್ರೀಗಳು ಕಿವಿಮಾತು ಹೇಳಿದರು.
ಭೀಮ್‍ಆರ್ಮಿ ಭಾರತ ಏಕಾತ ಮಿಷನ್ ರಾಜ್ಯಾಧ್ಯಕ್ಷ ರಾಜಗೋಪಾಲ ಮಾತನಾಡಿ ಬಸವಣ್ಣ , ಅಂಬೇಡ್ಕರ್, ಪೆರಿಯಾರ್, ನಾರಾಯಣ ಗುರುಜೀ ಸೇರಿದಂತೆ ಅನೇಕ ಸುಧಾರಕರು ನಮಗೆ ಪ್ರೇರಣೆಯಾಗಬೇಕು. ಅಂದು ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕಾಗಿ ಬಸವಣ್ಣನವರನ್ನು ಸಾಯಿಸಲಾಯಿತು. ಹಿಂದೂ ಜಾತಿ ತಾರತಮ್ಯ ಇಂದೂ ಮುಂದುರೆದಿದೆ ಎಂದರು.
ಬ್ರಿಟಿಷರು ಭಾರತಕ್ಕೆ ಬರದಿದ್ದರೆ ನಮ್ಮ ಸ್ಥಿತಿ ಇನ್ನೂ ಚಿಂತಾಜನಕವಾಗಿರುತ್ತಿತ್ತು. ಅವರು ಬಂದಿದ್ದರಿಂದ ಶಿಕ್ಷಣ-ಇಂಗ್ಲೀಷ್ ಕಲಿತು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಹಿಂದೆ ಸಂಸ್ಕøತ ಭಾಷೆ ಬಳಕೆಯಲ್ಲಿದ್ದು ಅದನ್ನು ಒಂದುವರ್ಗ ಬಚ್ಚಿಟ್ಟುಕೊಂಡು ಬಹುಜನರನ್ನು ವಿದ್ಯೆಯಿಂದ ದೂರವಿಟ್ಟಿದ್ದರು ಎಂದು ಆಪಾದಿಸಿದ ರಾಜಗೋಪಾಲ್, 1834ರಲ್ಲಿ ಲಾರ್ಡ್‍ಮೆಕಾಲೆ ಎಲ್ಲರಿಗೂ ಶಿಕ್ಷಣ ಆರಂಭಿಸಿದ ಪರಿಣಾಮ ಇಂದು ನಮ್ಮೆಲ್ಲರ ಕೈಯಲ್ಲೂ ಮೊಬೈಲ್ ಇದೆ. ಕಂಪ್ಯೂಟರ್, ಇಸ್ರೋ, ಐಐಟಿ ಐಐಎಂಗಳು ಬಂದಿವೆ. 42,000ಕೋಟಿರೂ. ಸರ್ಕಾರ ನಮಗಾಗಿ ವೆಚ್ಚ ಮಾಡುತ್ತಿದ್ದು ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕಾಗಿದೆ ಎಂದರು.
ದಂಟರಮಕ್ಕಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತಾಡಿದರು. ಎಸ್‍ಡಿಪಿಐ ಮುಖಂಡ ಮುನೀರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್‍ಬಸಪ್ಪ, ಸಂವಿಧಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಎಸ್‍ಟಿಪಿಐ ಜಿಲ್ಲಾಧ್ಯಕ್ಷ ಮುಸ್ತಾಫ್, ಎಸ್ಸಿಎಸ್‍ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾಸಮಿತಿ ಸದಸ್ಯ ರಮೇಶ, ಭೀಮ್‍ಆರ್ಮಿ ಜಿಲ್ಲಾ ಪ್ರಮುಖರಾದ ಗಿರೀಶ್, ಹೇಮಂತ್ ಮತ್ತು ರಾಜೇಶ್, ಮುಖಂಡರಾದ ಜವರಯ್ಯ, ಹಿರೇಮಗಳೂರು ರಾಮಚಂದ್ರ, ವಕೀಲ ರಮೇಶ, ಡಿಎಸ್‍ಎಸ್ ರಾಜ್ಯ ವಿಭಾಗೀಯ ಸಂಚಾಲಕ ಚಂದ್ರಶೇಖರ್, ಛÀಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಛಲವಾದಿರಘು, ಅಂಬೇಡ್ಕರ್ ವೈಚಾರಿಕ ವೇದಿಕೆ ಅಧ್ಯಕ್ಷ ಮಂಜುನಾಥ ಕೂದವಳ್ಳಿ, ಜನಪರ ಹೋರಾಟಗಾರ ಅರುಣಕುಮಾರ್ ಮತ್ತು ವಸಂತಎರೇಹಳ್ಳಿ ಸೇರಿದಂತೆ ವಿವಿಧ ಮುಖಂಡರು ಮುಖ್ಯಅತಿಥಿಗಳಾಗಿದ್ದರು.
ದ.ಸಂ.ಸ.ಮಾಧ್ಯಮಸಲಹೆಗಾರ ಹಿರೇಗೌಜಶಿವಕುಮಾರ್ ಸಂವಿಧಾನ ಪೂರ್ವಪೀಠಿಕೆಯನ್ನು ಸಭೆಗೆ ಬೋಧಿಸಿದರು. ಕರ್ನಾಟಕ ಪ್ರಗತಿಪರ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ಸ್ವಾಗತಿಸಿ, ಉಪನ್ಯಾಸಕರಾದ ಗಂಗಾಧರ್ ಮತ್ತು ನಾಗೇಶ್ವರ ಕಾರ್ಯಕ್ರಮ ನಿರೂಪಿಸಿದರು.



