ಮೂಡಿಗೆರೆ ; ಕೃಷಿಕ ಸಮಾಜದಿಂದ ರೈತ ದಿನಾಚರಣೆ
ರೈತರ ಶ್ರೇಯೋಭಿವೃದ್ಧಿಗೆ ಕೃಷಿಕ ಸಮಾಜ ಸದೃಢವಾಗಬೇಕು ; ಡಿ.ಎಲ್. ಅಶೋಕ್ ಕುಮಾರ್
ಕೃಷಿಕ ಸಮಾಜ ರಾಜ್ಯ ಸರ್ಕಾರದ ಒಂದು ಅಂಗವಾಗಿದ್ದು, ರಾಜ್ಯದ ರೈತರ ಶ್ರೇಯೋಭಿವರದ್ಧಿಗೆ ಪೂರಕವಾದ ಸಲಹೆಗಳನ್ನು ಸರ್ಕಾರಕ್ಕೆ ನೀಡುವ ಕೆಲಸ ಮಾಡುತ್ತಿದೆ. ರಾಜ್ಯ ಕೃಷಿ ಸಚಿವರು ಕೃಷಿಕ ಸಮಾಜದ ಸಲಹೆಗಳಿಗೆ ಹೆಚ್ಚಿನ ಮಾನ್ಯತೆ ನೀಡಿ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ ಅಭಿಪ್ರಾಯಿಸಿದರು.

ಇವರು ಶುಕ್ರವಾರ ಜಿಲ್ಲಾ ಕೃಷಿಕ ಸಮಾಜ ಮತ್ತು ಮೂಡಿಗೆರೆ ತಾಲ್ಲೂಕು ಕೃಷಿಕ ಸಮಾಜದ ವತಿಯಿಂದ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರೈತರು ಕೃಷಿಕ ಸಮಾಜದ ಸದಸ್ಯರಾಗುವುದರ ಮೂಲಕ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ರೈತರ ಸಂಘಟಿತರಾದಾಗ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಕೃಷಿಕ ಸಮಾಜ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡಿಗೆರೆ ಕೃಷಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಯತೀಶ್ ; ಮಾಜಿ ಪ್ರಧಾನಿ ಚೌದ್ರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಚರಣ್ ಸಿಂಗ್ ಅವರು ಕೇವಲ 6 ತಿಂಗಳು ಪ್ರಧಾನಿಯಾಗಿದ್ದರು, ಅವರು ಅಲ್ಪ ಕಾಲದಲ್ಲಿಯೇ ರೈತರ ಶ್ರೇಯೋಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದರು ಎಂದು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಮತ್ತು ನಿಗಧಿತ ಬೆಲೆ ಸಿಗಬೇಕು. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದರೆ ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಆಗಬೇಕು ಎಂದು ಅಭಿಪ್ರಾಯಿಸಿದರು.
ಮೂಡಿಗೆರೆ ತೋಟಗಾರಿಕಾ ಕಾಲೇಜು ಡೀನ್ ಡಾ. ಶ್ರೀನಿವಾಸ್ ಅವರು ಮಾತನಾಡಿ ; ಭಾರತ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ರೈತರು ಸರ್ಕಾರದ ಯೋಜನೆಗಳ ಮತ್ತು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಸಮಗ್ರ ಕೃಷಿಯ ಮೂಲಕ ಹೆಚ್ಚಿನ ಲಾಭ ಗಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಪಿ.ಕೆ. ನಾಗೇಶ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ, ತೋಟಗಾರಿಕಾ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಎಂ.ಶಿವಪ್ರಸಾದ್, ಮೂಡಿಗೆರೆ ಕೃಷಿಕ ಸಮಾಜದ ಖಜಾಂಚಿ ಹೆಚ್.ಬಿ. ಜಗನ್ನಾಥ್ ಗೌಡ, ರೈತ ಸಂಘದ ಮುಖಂಡ ಬಿ.ಸಿ.ದಯಾಕರ್ ಮಾತನಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿಕ ಸಮಾಜದ ಸದಸ್ಯ ಸತೀಶ್ ಕೆ. ಕಡುವಳ್ಳಿ ವಂದಿಸಿದರು.


ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ನಿವೃತ್ತ ನೌಕರ ಪುಟ್ಟಸ್ವಾಮಿ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಗೌರವಿಸಲಾಯಿತು.



