ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಯಲ್ಲಿ 13 ನಿರ್ದೇಶಕ ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 5 ಸ್ಥಾನಗಳಿಗೆ ಅಂತಿಮ ಕಣದಲ್ಲಿ 10 ಸ್ಪರ್ಧಿಗಳು ಅಖಾಡದಲ್ಲಿ ಉಳಿದಿದ್ದಾರೆ.
ಅವಿರೋಧ ಆಯ್ಕೆ ಬಯಸಿದ್ದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮತ್ತು ಎಸ್. ಎಲ್ ಭೋಜೇಗೌಡ, ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಚುನಾವಣೆ ಎದುರಿಸಬೇಕಾಗಿದೆ.
ಎಂಟು ಅಭ್ಯರ್ಥಿಗಳು ಈಗಾಗಲೇ ಅವಿರೋಧ ಆಯ್ಕೆ ಆಗಿದ್ದು ಅದರಲ್ಲಿ ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಮತ್ತು ತರೀಕೆರೆ ಮಾಜಿ ಡಿ.ಎಸ್. ಸುರೇಶ್ , ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಪ್ರಮುಖರು.
ಕಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಬೆಳ್ಳಿಪ್ರಕಾಶ್ ಮತ್ತು ಎಸ್.ವಿ. ಬಸವರಾಜಪ್ಪ, ತರೀಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಡಿ.ಎಸ್. ಸುರೇಶ್ ಮತ್ತು ಕೆ.ಆರ್.ಆನಂದಪ್ಪ ಮೂಡಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹೆಚ್.ಬಿ. ಶಿವಣ್ಣ ಹಳಸೆ, ಶೃಂಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹೆಚ್.ಕೆ. ದಿನೇಶ್ ಹೆಗ್ಡೆ, ಎನ್.ಆರ್.ಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಜಯಪಾಲ್ ಕೆ.ಸಿ., ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘ ಕ್ಷೇತ್ರದಿಂದ ಸೋನಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಚಿಕ್ಕಮಗಳೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ 2 ಸ್ಥಾನಗಳಿಗೆ ಸಿ.ಟಿ.ರವಿ, ಎಸ್.ಎಲ್. ಬೋಜೇಗೌಡ ಮತ್ತು ಎಂ.ಎಸ್. ನಿರಂಜನ್ ಕಣದಲ್ಲಿದ್ದಾರೆ. ಕೊಪ್ಪ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ 1 ಸ್ಥಾನಕ್ಕೆ ಕೆ.ಎಸ್.ರವೀಂದ್ರ, ಪ್ರಜ್ವಲ್, ಬಿಎಸ್ ಸತೀಶ್ ಕಣದಲ್ಲಿದ್ದಾರೆ. ಜಿಲ್ಲೆಯ ಎಲ್ಲಾ ಟಿಎಪಿಸಿಎಂಎಸ್ ಕ್ಷೇತ್ರಗಳಿಂದ 1 ಸ್ಥಾನಕ್ಕೆ ಆನಂದ್ ಕೆ.ಎಸ್. ಮತ್ತು ದಿನೇಶ್ ಹೊಸೂರು ಕಣದಲ್ಲಿದ್ದಾರೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮತ್ತು ಪಟ್ಟಣ ಸಹಕಾರ ಹಾಗೂ ಇನ್ನಿತರೆ ಎಲ್ಲಾ ಸಹಕಾರ ಕ್ಷೇತ್ರದ 1 ಸ್ಥಾನಕ್ಕೆ ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ತರೀಕೆರೆ ಟಿ.ಎಲ್. ರಮೇಶ್ ಕಣದಲ್ಲಿದ್ದಾರೆ.
ಚುನಾವಣೆ ಜನವರಿ 17 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.







