ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಎನ್.ಆರ್.ಪುರ ನ್ಯಾಯಾಲಯ ಆದೇಶ ಹೊರಡಿಸಿದೆ.
ಫೆಬ್ರವರಿ 18, 2025 ರಂದು ನರಸಿಂಹರಾಜಪುರ ಪೊಲೀಸ್ ಠಾಣಾ ಮುತ್ತಿನಕೊಪ್ಪದಿಂದ ಲಕ್ಕಿನಕೊಪ್ಪಕ್ಕೆ ಹೋಗುವ ರಸ್ತೆಯಲ್ಲಿ ಆರೋಪಿಗಳು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಪೊಲೀಸ್ ತಂಡ ದಾಳಿ ನಡೆಸಿದಾಗ ಮೋಟಾರ್ ಸೈಕಲ್ ನಲ್ಲಿ ಬಂದ ಇಬ್ಬರನ್ನು ತಪಾಸಣೆ ಮಾಡಲಾಗಿ, ಅವರ ಬಳಿ ಸುಮಾರು 104 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಆರೋಪಿಗಳ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣಾ ಮೊ. ನಂ. 14/2025 ಕಲಂ 20(b) (ii) (A) ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳಾದ 1) ಮಹಮ್ಮದ್ ಫತಾವುಲ್ಲ ಬಿನ್ ಮಹಮ್ಮದ್ ಸುಭಾನ್, 38 ವರ್ಷ, ವಾಸ ಸೂಳೇಬೈಲ್, ಶಿವಮೊಗ್ಗ ಮತ್ತು 2) ಪ್ರವೀಣ್ ಬಿನ್ ಪ್ರೀತಮ್, 25 ವರ್ಷ, ವಾಸ ಪೇಪರ್ ಟೌನ್, ಭದ್ರಾವತಿ ತಾಲ್ಲೂಕ್, ಶಿವಮೊಗ್ಗ ರವರು ವಿರುದ್ಧ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ನರಸಿಂಹರಾಜಪುರದ ಘನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ದಿನಾಂಕ 06.01.2026 ರಂದು ಇಬ್ಬರಿಗೂ 6 ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ರೂ. 5,000 ಗಳ ದಂಡ ವಿಧಿಸಿ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ವಶಪಡಿಸಿಕೊಂಡ ಗಾಂಜಾವನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡಲು ಆದೇಶಿಸಿರುತ್ತದೆ.
PSI ನಿರಂಜನ್ ಗೌಡ ಬಿ ಎಸ್ ರವರು ದಾಳಿಯನ್ನು ನಡೆಸಿದ್ದು, ಪ್ರಕರಣದ ತನಿಖೆಯನ್ನು PSI ಶ್ರೀಮತಿ. ಜ್ಯೋತಿ ಎನ್ ಎ ರವರು ನಡೆಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಗದಿಗೆಪ್ಪ ಜಿ ನೇಕರ್ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಪೊಲೀಸ್ ಸಿಬ್ಬಂದಿಗಳಾದ CPC ಆಸೀಫ್ ಎನ್ ಯು ರವರು ನ್ಯಾಯಾಲಯದ ಕರ್ತವ್ಯ, CHC ಪರಮೇಶ ಮತ್ತು CPC ನವೀನ್ ರವರು ತನಿಖಾ ಸಹಾಯಕರಾಗಿ ಮತ್ತು CHC ಸೋಮೇಶ ರವರು ಪ್ರೋಸೆಸ್ ಕರ್ತವ್ಯ ನಿರ್ವಹಿಸಿರುತ್ತಾರೆ.



