kalasa 1

 

 

ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದಲ್ಲಿ ಸೋಮವಾರ ಕಳಸ ರೈತ ಕಾರ್ಮಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಜನವಿರೋಧಿ ಅರಣ್ಯ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಜನರಲ್ಲಿರುವ ಆತಂಕವನ್ನು ದೂರಮಾಡುವ ಪ್ರಯತ್ನ ಮಾಡಿದರು.

ಸೆಕ್ಷನ್ 4 ಅನ್ವಯ ಗುರುತಿಸಿದ ಭೂಮಿಯಲ್ಲಿ ಕೃಷಿಕರು ಇದ್ದಲ್ಲಿ ಅವರ ಹಕ್ಕು ಮಾನ್ಯತೆ ಮಾಡಲು ದಾಖಲೆಗಳನ್ನು ಕೇಳಿದ್ದೆವು. ಸೂಕ್ತ ದಾಖಲೆ ಇಲ್ಲದೆ ವಾಸ ಮಾಡುತ್ತಿದ್ದವರನ್ನೂ ಕೂಡ ಪರಿಗಣಿಸಿ ಉಳಿದ ಭೂಮಿಯನ್ನು ಮಾತ್ರ ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದರು.

ಜಿಲ್ಲಾಧಿಕಾರಿಗಳ ಮೀಸಲು ಅರಣ್ಯದ ವ್ಯಾಪ್ತಿಯ ಗಡಿ ಬಗ್ಗೆ ಟಾಸ್ಕ್ ಫೋರ್ಸ್ ಸಮೀಕ್ಷೆ ನಡೆಸುತ್ತಿದೆ. ಜೂನ್ ಅಂತ್ಯದ ಒಳಗೆ 185 ಗ್ರಾಮಗಳ ಎಲ್ಲ ಭೂಮಿ ಸಮೀಕ್ಷೆ ಮುಗಿಸಲಿದೆ.ಪರಿಭಾವಿತ ಅರಣ್ಯದಲ್ಲಿ ಕೂಡ ಕೃಷಿಕರು ಇದ್ದರೆ ಮತ್ತೊಮ್ಮೆ ಪರಿಶೀಲಸಿ ಪಟ್ಟಿ ತಯಾರಿಸಲು ಸರ್ಕಾರದಿಂದ ಸೂಚನೆ ಬಂದಿದೆ. ಆದ್ದರಿಂದ 3 ಎಕರೆವರೆಗೆ ಕೃಷಿ ಮಾಡಿರುವ ಜನರು ಯಾವುದೇ ದಾಖಲೆ ಇಲ್ಲದಿದರೂ ಒತ್ತುವರಿ ಖುಲ್ಲಾ ಬಗ್ಗೆ ಆತಂಕಪಡುವುದು ಬೇಡ.ಸದ್ಯಕ್ಕೆ ದೊಡ್ಡ ಒತ್ತುವರಿದಾರರ ಬಗ್ಗೆ ಮಾತ್ರ ಗಮನ ಹರಿಸಲಾಗುತ್ತಿದೆ ಎಂದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘದ ಸಂಚಾಲಕ ಕೆ.ಎಲ್.ಅಶೋಕ್, ಅರಣ್ಯ ಇಲಾಖೆಗೆ ಪರಿಸರ ಕಾಳಜಿ ಇದ್ದರೆ ಒಂದೆರಡು ಎಕರೆ ಕೃಷಿ ಮಾಡಿರುವ ಬಡವರ ಭೂಮಿ ಬಿಟ್ಟು ನೂರಾರು ಎಕರೆ ಒತ್ತುವರಿ ಮಾಡಿರುವವರ ಭೂಮಿ ಖುಲ್ಲಾ ಮಾಡಲಿ ಎಂದು ಸವಾಲು ಹಾಕಿದರು. ಮಲೆನಾಡಿನಲ್ಲಿ ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆ, ಮೀಸಲು ಅರಣ್ಯ, ಆನೆ ಬಿಡಾರ ಮುಂತಾದ ಯೋಜನೆಗಳ ಭಾರ ಹೆಚ್ಚಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಂವಹನ ಕೊರತೆಯಿಂದ ಇಲ್ಲಿನ ಜನರು ಅನಿಶ್ಚಿತತೆ ಮತ್ತು ಆತಂಕದಲ್ಲಿ ಬದುಕುವಂತಾಗಿದೆ.ಸರ್ಕಾರೇತರ ಸಂಸ್ಥೆಗಳ ಹುನ್ನಾರದಿಂದ ಮಲೆನಾಡನ್ನು ಖಾಲಿ ಮಾಡುವ ಯತ್ನಕ್ಕೆ ಅರಣ್ಯ ಇಲಾಖೆ ಕೈ ಜೋಡಿಸುತ್ತಿದೆ ಎಂದು ಅಶೋಕ್ ಆರೋಪಿಸಿದರು. ಕರ್ನಾಟಕದಲ್ಲಿ ಫಾಂ 50,53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ 50 ಲಕ್ಷ ಕುಟುಂಬಗಳು ಇವೆ.ಅರಣ್ಯ ಉಳಿಸಿ ಬೆಳೆಸಿದ 2 ಕೋಟಿ ಜನರ ಬದುಕು ಅತಂತ್ರವಾಗಿರುವ ಬಗ್ಗೆ ಕಂದಾಯ ಸಚಿವರ ಗಮನ ಸೆಳೆದಿದ್ದೇವೆ ಎಂದರು.

ಕೆ.ಎಲ್.ವಾಸು ಮಾತನಾಡಿ, ಜನರಿಗೆ ಅನುಕೂಲ ತರಬೇಕಿದ್ದ ಈ ನೆಲದ ಕಾನೂನುಗಳು ಜನವಿರೋಧಿ ಆಗುತ್ತಿರುವುದು ದುರದೃಷ್ಟಕರ. ತಾಲ್ಲೂಕಿನ ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ಸಣ್ಣ ಪುಟ್ಟ ಜಮೀನು ಮಾಡಿಕೊಂಡಿರುವ ಕೃಷಿಕರು ಕೂಡ 94 ಸಿ ಅರ್ಜಿ ಸಲ್ಲಿಸಿ ಮನೆ ನಿವೇಶನಕ್ಕಾಗಿ ಕಾದಿದ್ದಾರೆ. ಆದರೆ ಅರಣ್ಯ ಕಾಯ್ದೆಗಳ ಕಾರಣಕ್ಕೆ ಜನರಿಗೆ ಮನೆ ನಿವೇಶನ ಕೂಡ ಮಂಜೂರಾಗಿಲ್ಲ. ಇದರೊಂದಿಗೆ ಫಾರಂ ನಂಬರ್ 53, 57ರಲ್ಲಿ ಕೂಡ ನೂರಾರು ಕೃಷಿಕರು ಭೂಮಿಯ ಹಕ್ಕುಪತ್ರಕ್ಕಾಗಿ ಕಾದಿದ್ದಾರೆ. ಆದರೆ ಇವರಿಗೆ ಅರಣ್ಯ ಇಲಾಖೆ ಅನುಮತಿ ಇಲ್ಲದೆ ದಶಕಗಳಿಂದ ಹಕ್ಕುಪತ್ರ ಸಿಕ್ಕಿಲ್ಲ. ಕಳಸ ತಾಲ್ಲೂಕಿನಲ್ಲಿ ಕೂಡ 400 ಫಲಾನುಭವಿಗಳ ಭೂ ಮಂಜೂರಾತಿ ಕ್ರಮ ಎಂದು ಕಂದಾಯ ಇಲಾಖೆ ಹೇಳಿದೆ. ಆದರೆ ಇದರಲ್ಲಿ ಕೂಡ ದೊಡ್ಡ ಸಂಖ್ಯೆಯ ಬಡವರು ಇದ್ದು ಅವರಿಗೆ ನ್ಯಾಯ ಒದಗಿಸಲೇಬೇಕು ಎಂದು ಒತ್ತಾಯಿಸಿದರು.

ಶ್ರೀಕಾಂತ್ , ಜ್ವಾನಲಯ್ಯ ,ವಕೀಲ ಅನಂತೇಶ್,  ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಭಟ್, ಶ್ರೇಣಿಕ್ ಸೇರಿದಂತೆ ಹಲವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಇದಕ್ಕೂ ಮುನ್ನ ಕೃಷಿಕರು ಪಟ್ಟಣದ ಕಳಸೇಶ್ವರ ದೇವಸ್ಥಾನದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ