ಸಂಕ್ರಾಂತಿ ಆಚರಣೆಯು ನಮ್ಮ ದೇಶದ ಗ್ರಾಮೀಣ ಮತ್ತು ಜನಪದ ಕೃಷಿ ಸಂಸ್ಕೃತಿಯ ಉನ್ನತ ಪ್ರತೀಕವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಮಂಚೇಗೌಡ ಹೇಳಿದರು.
ಅವರು ಮಂಗಳವಾರ ಮೂಡಿಗೆರೆ ವಿದ್ಯಾನಗರದ ವಿ ವಿಸ್ಡಮ್ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಮಹಿಳಾ ಘಟಕ ಮತ್ತು ಲೇಖಕಿಯರ ಬಳಗ ಒಡಗೂಡಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತ ವರ್ಷವಿಡೀ ದುಡಿದು ಫಸಲನ್ನು ಪಡೆಯುವ ಸಂದರ್ಭ ಸುಗ್ಗಿ ಕಾಲವಾಗಿದೆ. ಸುಗ್ಗಿ ಕಾಲವು ಪ್ರಕೃತಿಯಲ್ಲಿಯೂ ಹಲವು ಬದಲಾವಣೆಗೆ ಮುನ್ನುಡಿಯಾಗಿದೆ. ಜನರು ತಮ್ಮೆಲ್ಲಾ ಕಷ್ಟಗಳನ್ನು ಮರೆತು ಸಂಭ್ರಮಿಸುವ ಮೂಲಕ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಎಳ್ಳುಬೆಲ್ಲ ಹಂಚುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಸಮುದಾಯಗಳ ನಡುವೆ ಸಾಮರಸ್ಯಕ್ಕೆ ಸಂಕ್ರಾಂತಿ ಹಬ್ಬವು ಒಂದು ಉತ್ತಮ ಆಚರಣೆಯಾಗಿದೆ. ನಮ್ಮ ಹಿರಿಯರು ಬಳುವಳಿಯಾಗಿ ನೀಡಿರುವ ಕಲೆ ಸಂಸ್ಕೃತಿ, ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಮೂಡಿಗೆರೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಖಾ ರವಿರಾಜ್ ಮತ್ತು ಲೇಖಕಿಯರ ಬಳಗದ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಪುಣ್ಯಮೂರ್ತಿ, ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀಮತಿ ಕಲಾವತಿ ರಾಜಣ್ಣ, ಕಾರ್ಯದರ್ಶಿ ಶ್ರೀಮತಿ ಜ್ಯೋತಿ ವೆಂಕಟೇಶ್, ಸಂಚಾಲಕರಾದ ಶ್ರೀಮತಿ ಮಾಲಾ ದಶರತ್, ಸಹಚಾಲಕರು ಆಶಾ ನಯಿಮ್, ವಿಸ್ಡಮ್ ಶಾಲೆಯ ಶಿಕ್ಷಕರ ಹಾಗೂ ಎಲ್ಲಾ ಪದಾಧಿಕಾರಿಗಳು ಸದಸ್ಯರು ಇದ್ದರು
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ ಹಾಗೂ ಜಾನಪದ ಹಾಡು ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.




