ಸಾಂದರ್ಭಿಕ ಚಿತ್ರ
ಕಾಫಿ ಪಲ್ಪರ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಪಲ್ಪರ್ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಕೈಮರ ಸಮೀಪದ ತೋಟದಹಳ್ಳಿ ಗ್ರಾಮದಲ್ಲಿ ಇತ್ತಿಚೆಗೆ ನಡೆದಿದೆ.
ತೋಟದಹಳ್ಳಿ ಗ್ರಾಮದ ಕೃಷಿಕ ಐ ಆರ್ ಪ್ರಕಾಶ್ ಕುಮಾರ್ ರವರ ತೋಟದಲ್ಲಿ ಕಾಫಿ ಪಲ್ಪರ್ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅಸ್ಸಾಂ ಮೂಲದ ನಜರ್ ಆಲಿ ಮೃತಪಟ್ಟಿರುವ ಕಾರ್ಮಿಕ.
ಈ ಬಗ್ಗೆ ನಜರ್ ಆಲಿಯವರ ಪುತ್ರ ಅಕ್ತರ್ ಹುಸೇನ್ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ದೂರು ನೀಡಿದ್ದು; ನಾವು ಅಸ್ಸಾಂ ರಾಜ್ಯವಾಗಿದ್ದು ಕೂಲಿ ಕೆಲಸಕ್ಕೆಂದು ಅಸ್ಸಾಂ ರಾಜ್ಯದಿಂದ ಚಿಕ್ಕಮಗಳೂರು ಜಿಲ್ಲೆ, ಕಸಬಾ ಹೋಬಳಿ, ತೋಟದಹಳ್ಳಿ ಗ್ರಾಮದ ವಾಸಿ ಐ ಆರ್ ಪ್ರಕಾಶ್ ಕುಮಾರ್ ರವರ ತೋಟದಲ್ಲಿ ನನ್ನ ತಂದೆ ನಜೀರ್ ಅಲಿ ಹಾಗೂ ನನ್ನ ತಾಯಿ ಮೆಹರ್ಬಾನ್ ವಾಸವಿದ್ದು ಕೂಲಿ ಕೆಲಸ ಮಾಡಿಕೊಂಡು ಇದ್ದರು, ದಿನಾಂಕ 08-01-2026 ರಂದು ರಾತ್ರಿ ಸುಮಾರು 10-00 ಗಂಟೆಯ ಸಮಯದಲ್ಲಿ ಕಾಫಿ ಪಲ್ಪರ್ ಮಾಡುವ ಸಂದರ್ಭದಲ್ಲಿ ನನ್ನ ತಂದೆಯು ತೊಟ್ಟಿದ್ದ ಬಟ್ಟೆಯು ಪಲ್ಪರ್ ಮಿಷಿನ್ ಗೆ ತಾಗಿ ಎಳೆದುಕೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು, ನಂತರ ಚಿಕಿತ್ಸೆಗಾಗಿ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ನನ್ನ ತಂದೆಯವರು ಕಾಫಿ ಪಲ್ಪರ್ ಮಿಷನ್ ಗೆ ಆಕಸ್ಮಿಕವಾಗಿ ಬಟ್ಟೆತಾಗಿ ಎದೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿ ಮೃತಪಟ್ಟಿರುತ್ತಾರೆ. ಆದುದರಿಂದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ದೂರು ನೀಡಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



