ನಾಡಗೀತೆ ರಚಿಸಿರುವ ರಾಷ್ಟ್ರಕವಿ ಕುವೆಂಪು ರಾಷ್ಟ್ರೀಯ ಮತ್ತು ಪ್ರಾದೇಶಿಕ ವೈವಿಧ್ಯತೆಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆಂದು ಜಿಲ್ಲಾ ಕ.ಸಾಪ. ಮಾಜಿಅಧ್ಯಕ್ಷರಾದ ಸಾಹಿತಿ ಕುಂದೂರುಅಶೋಕ ನುಡಿದರು.
ಲೇಡಿಸ್ ಕ್ಲಬ್ ಚಿಕ್ಕಮಗಳೂರು ನಗರದ ಎಂಎಲ್‍ಆರ್ ಸೇವಾಭವನದಲ್ಲಿ ನಿನ್ನೆ ಆಯೋಜಿಸಿದ್ದ ‘ಕುವೆಂಪು ಸ್ಮರಣೆ’ ಸಮಾರಂಭವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ಮಲೆನಾಡಿನ ಚಿತ್ರಣವನ್ನು ಸಮರ್ಥವಾಗಿ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆಂದರು.
‘ಭಾರತ ಜನನಿಯ ತನುಜಾತೆ’ ಎಂದಿರುವ ಕುವೆಂಪು ಕರ್ನಾಟಕ ಮಾತೆಯನ್ನು ಭಾರತಮಾತೆಯ ಮಗಳೆಂದು ಸುಂದರವಾಗಿ ಚಿತ್ರಿಸಿರುವ ಗೀತೆರಚಿಸಿ 100ವರ್ಷಗಳು ಸಂದಾಯವಾಗುತ್ತಿದೆ. ನಾಡಿನ ಸಾಂಸ್ಕøತಿಕ-ಐತಿಹಾಸಿಕ-ಭೌಗೋಳಿಕ ಚಿತ್ರಣವನ್ನು ಇಲ್ಲಿ ಕಾಣಬಹುದು. 44ಸಾಲುಗಳ ನಾಡಗೀತೆಗೆ ಮಧ್ಯಮ ಗತಿಯ ರಾಗಸಂಯೋಜನೆ ನಿಗದಿಸಿರುವುದು ಸೊಬಗು ಹೆಚ್ಚಿಸಿದೆ ಎಂದರು.
ಮಹಾಕಾವ್ಯಗಳೇ ಮುಗಿದುಹೋದವು ಎನ್ನುವ ಸಂದರ್ಭದಲ್ಲಿ ‘ರಾಮಾಯಣ ದರ್ಶನಂ’ ರಚಿಸಲ್ಪಟ್ಟಿತ್ತು. ನಾಲ್ಕೈದು ದಶಕಗಳ ಮಾನಸಿಕ ಸಿದ್ಧತೆ, ಒಂದುದಶಕದ ಪ್ರಯತ್ನದಿಂದ ಮಹತ್ವದ ಕೃತಿಗೆ ಜ್ಞಾನಪೀಠದ ಪುರಸ್ಕಾರವೂ ಲಭ್ಯವಾಯಿತು. ಮೂಲರಾಮಾಯಣದ ಅನೇಕ ಸಂಗತಿಗಳನ್ನು ಮುರಿದುಕಟ್ಟಿರುವ ಕುವೆಂಪು ಪ್ರತಿಸÀಂಸ್ಕøತಿಯನ್ನು ಭಾರತೀಯ ಸಮಾಜಕ್ಕೆ ಕೊಟ್ಟಿದ್ದಾರೆಂದು ವಿಶ್ಲೇಷಿಸಿದ ಅಶೋಕ್, ಮೂಲದಲ್ಲಿ ಬರುವ ಸೀತೆ, ಲಕ್ಷ್ಮಣ, ಮಂಥರೆ ಜೊತೆಗೆ ಸಣ್ಣಪುಟ್ಟ ಪಾತ್ರಗಳಿಗೂ ನ್ಯಾಯ ಒದಗಿಸಿದ್ದಾರೆಂದರು.
ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು… ಕೃತಿಗಳಲ್ಲಿ ಮಲೆನಾಡಿನ ನಿಸರ್ಗ ಚಲುವನ್ನು ಬಣ್ಣಿಸಿರುವಂತೆ ರಾಮಾಯಣ ದರ್ಶನಂನಲ್ಲೂ ಸುಂದರ ಮಲೆನಾಡಿನ ಚಿತ್ರಣ ಕಾಣುತ್ತೇವೆ. ಸೀತೆಯ ಮೂಲಕ ರಾಮನನ್ನು ಪ್ರಶ್ನಿಸಿರುವ ಕುವೆಂಪು ಅನೇಕ ಜಿಜ್ಞಾಸೆಗಳಿಗೆ ಸಮರ್ಥ ಉತ್ತರ ನೀಡುವ ಪ್ರಯತ್ನ ಮಹಾಕಾವ್ಯದಲ್ಲಿ ಮಾಡಿದ್ದಾರೆ. ಜಟಾಯುನಂತಹ ಸಣ್ಣಪುಟ್ಟ ಪಾತ್ರ ಸೇರಿದಂತೆ ಪಕ್ಷಿ-ಪ್ರಾಣಿ, ಚರಾಚರ ವಸ್ತುಗಳಿಗೂ ನ್ಯಾಯ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಕುವೆಂಪು ಅವರ ಹೆಗ್ಗಳಿಕೆ.
ಶೂದ್ರ-ಶ್ರಮಿಕ ವರ್ಗ ಜಪ-ತಪ, ಅಕ್ಷರಜ್ಞಾನದಿಂದ ವಂಚಿತವಾದ ಕಾಲಘಟ್ಟದಲ್ಲಿ ಕುವೆಂಪು ರಚಿಸಿದ ‘ಶೂದ್ರತಪಸ್ವಿ’ ನಾಟಕ ಸಾಂಸ್ಕøತಿಕ ವಲಯವನ್ನು ಆವರಿಸುತ್ತದೆ. ಸ್ತ್ರೀ ಸಂವೇದನೆ-ಸಮಾನತೆ, ಲಿಂಗತಾರತಮ್ಯ, ಜಾತಿ-ಬೇಧದ ವಿರುದ್ಧ ಅಂದೇ ಧ್ವನಿಯೆತ್ತಿದ ಮಹಾನ್‍ಕವಿ. ಮಂತ್ರಮಾಂಗಲ್ಯದ ಮೂಲಕ ಸರಳಜೀವನವನ್ನು ಬೋಧಿಸಿದವರು. ಮದುವೆಗೆ ವೈಭವೀಕರಣ ಸಲ್ಲದು. ಗಂಡುಹೆಣ್ಣುಗಳ ಒಲುಮೆಗೆ ಹಿರಿಯರ-ಆಪ್ತ ಬಳಗ ಸಾಕು ಎಂದವರು. ಕೇವಲ 40ಜನರ ಸಮ್ಮುಖದಲ್ಲಿ ಮಕ್ಕಳ ಮದುವೆ ಮಾಡಿ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿದ ಕುವೆಂಪು ‘ವಿಶ್ವ ಮಾನವ ಸಂದೇಶ’ ನೀಡಿದ ದಿವ್ಯಚೇತನ. ಅವರ ಆದರ್ಶಗಳು ಸುಂದರ, ಸಾಮರಸ್ಯದ ಸಮಸಮಾಜ ನಿರ್ಮಾಣಕ್ಕೆ ಭದ್ರಅಡಿಪಾಯ ಎಂದು ಕುಂದೂರುಅಶೋಕ ಅಭಿಪ್ರಾಯಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಲೇಡಿಸ್ ಕ್ಲಬ್ ಅಧ್ಯಕ್ಷೆ ಯಶೋಧಶಿವಪ್ಪ ಮಾತನಾಡಿ 2022ರಿಂದ ನಗರದಲ್ಲಿ ಸೇವೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅಂತರರಾಷ್ಟ್ರೀಯ ಲಯನ್ಸ ಕ್ಲಬ್ ಅಂಗಸಂಸ್ಥೆಯಾಗಿದ್ದ ಮಹಿಳೆಯರನ್ನೆ ಒಳಗೊಂಡ ಲಯನೆಸ್ ಸಂಸ್ಥೆ 2019ರಲ್ಲಿ ವಿಲೀನಗೊಳಿಸಿದ ನಂತರ ಅಲ್ಲಿಯ ಸದಸ್ಯರನ್ನೊಳಗೊಂಡಂತೆ ಲೇಡಿಸ್‍ಕ್ಲಬ್ ಆರಂಭಿಸಲಾಯಿತು. ಕೋರೋನಾ ವ್ಯಾಪಕವಾಗಿದ್ದ ಹಿನ್ನಲೆಯಲ್ಲಿ 2-3ವರ್ಷ ಹೆಚ್ಚು ಚಟುವಟಕೆ ನಡೆಸಲಾಗಲಿಲ್ಲ ಎಂದರು.
ಗಾಯನಸ್ಪರ್ಧೆ, ರಾಷ್ಟ್ರಕವಿ ಸ್ಮರಣೆ, ಸಾಧಕ ಮಹಿಳೆಯರಿಗೆ ಸನ್ಮಾನ ಮಹಿಳಾ ದಿನಾಚರಣೆ, ಮಹಿಳೆಯರಿಗೆ ಹೊಲಿಗೆಯಂತ್ರಗಳ ವಿತರಣೆ, ಬಡವಿದ್ಯಾರ್ಥಿನಿಯರಿಗೆ ಪುಸ್ತಕ-ಧನಸಹಾಯ, ಮಾಗಡಿಶಾಲೆಗೆ ಕ್ರೀಡಾ ಸಮವಸ್ತ್ರ ವಿತರಣೆ, ಶಿಕ್ಷಕರನ್ನು ಗೌರವಿಸುವ ಶಿಕ್ಷಕರ ದಿನಾಚರಣೆ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹತ್ತುಹಲವು ಕಾರ್ಯಕ್ರಮಗಳನ್ನು ಲೇಡಿಸ್ ಕ್ಲಬ್ ನಡೆಸಿದೆ. ಸುಮಾರು 30ಸದಸ್ಯರಿದ್ದು, ಪ್ರತಿ ತಿಂಗಳ 2ನೆಯ ಶನಿವಾರ ಸೇರಿ ಸಣ್ಣಪುಟ್ಟ ಸೇವಾಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದ ಯಶೋಧಶಿವಪ್ಪ, ಸದಸ್ಯರ ಸಹಕಾರದೊಂದಿಗೆ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದೆಂದರು.
ಗೀತಾಸುಂದ್ರೇಶ್ ಕುವೆಂಪು ರಚನೆಯಗೀತೆ ಪ್ರಸ್ತುತಪಡಿದರು. ವಿಶ್ರಾಂತ ಪ್ರಾಂಶುಪಾಲೆ ಭಾರತಿಈಶ್ವರ್ ನಿರೂಪಿಸಿ, ಯಶೋಧ ಸ್ವಾಗತಿಸಿ, ಕಾರ್ಯದರ್ಶಿ ರುಕ್ಮಿಣಿರವೀಂದ್ರನಾಥ ವಂದಿಸಿದರು. ಶಾಲಿನಿ, ಸ್ಮಿತಾ ತಂಡ ಪ್ರಾರ್ಥಿಸಿ, ನಿ.ಪೂ.ಅಧ್ಯಕ್ಷೆ ಸರಳಾಶ್ರೀಧರ್, ಲಕ್ಷ್ಮಿ, ಸುಮಿತ್ರಾ, ಸ್ಮಿತಾ ಮತ್ತಿತರರು ಪಾಲ್ಗೊಂಡಿದ್ದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು-ಬೆಲ್ಲದಿಂದ ರಂಗವಲ್ಲಿ ಹಾಕುವ ಸ್ಪರ್ಧೆಯನ್ನು ಆಯೋಜಿಸಿದ್ದು ದಾಕ್ಷಾಯಣಿ ಶ್ರೀನಿವಾಸ್ ಪ್ರಥಮ, ರಾಧಿಕಾ ದ್ವಿತೀಯ ಬಹುಮಾನ ಪಡೆದರು. ಆಟೋಟಸ್ಪರ್ಧಾ ವಿಜೇತರಿಗೆ ಶಾಲಿನಿ ಮತ್ತು ಜಮುನಾ ಬಹುಮಾನ ವಿತರಿಸಿದರು.



