ರೈತ ಸಂಘಟನೆ ಹೆಸರಿನಲ್ಲಿ ರೈತ ಮುಖಂಡನೋರ್ವ ಜಮೀನು ವಿಚಾರದಲ್ಲಿ ಅಧಿಕಾರಿಗಳ ದಿಕ್ಕು ತಪ್ಪಿಸಿ ನಿಯಮ ಬಾಹೀರವಾಗಿ ಪಕ್ಕಾಪೂಡು ಮಾಡಿಸಿ, ನಮಗೆ ತೊಂದರೆ ನೀಡಿದ್ದಾರೆಂದು ಬಿಳ್ಳೂರು ಗ್ರಾಮದ ಪಿ.ಎ.ಪುಟ್ಟಸ್ವಾಮಿಗೌಡ ದೂರಿದರು.
ಈ ಬಗ್ಗೆ ಮಂಗಳವಾರ ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿ, ನಂತರ ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಡಿದಾಳು ಗ್ರಾಮದ ಸರ್ವೆ ನಂ. 76/1ರಲ್ಲಿ ತನಗೆ 10 ಎಕರೆ, ಪಿ.ಕೆ.ಕುಲ್‌ದೀಪ್ ಅವರಿಗೆ 10 ಎಕರೆ, ಬಿ.ಕೆ.ಸರೋಜಮ್ಮ ಅವರಿಗೆ 10 ಎಕರೆ, ಎಂ.ಎಂ. ಶ್ಯಾಮಲ ಅವರಿಗೆ 9.20 ಎಕರೆ ಜಮೀನು ಹೊಂದಿದ್ದು, ಸ್ವಂತ ಖಾತೆ ಹಾಗೂ ಸ್ವಾಧೀನ ಅನುಭವದಲ್ಲಿರುತ್ತದೆ. ಈ ಜಮೀನುಗಳ ಪಕ್ಕದಲ್ಲಿ ಸರ್ವೆ ನಂ 76/2ಎ ರಲ್ಲಿ ರೈತ ಮುಖಂಡನೋರ್ವರ ಜಮೀನಿದ್ದು, ಅವರಿಗೆ ಅನುಕೂಲವಾಗುವಂತೆ ನಿಯಮ ಬಾಹೀರವಾಗಿ ಕಳೆದ 2 ತಿಂಗಳ ಹಿಂದೆ ನಮ್ಮ ಗಮನಕ್ಕೆ ಬಾರದೇ, ಯಾವುದೇ ನೋಟಿಸ್ ನೀಡದೇ ಪಕ್ಕಾಪೋಡು ಮಾಡಿಸಿದ್ದಾರೆಂದು ದೂರಿದರು.

ಈ ಜಮೀನುಗಳಿಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಕೇಸು ನಡೆಯುತ್ತಿದೆ. ತೀರ್ಪು ಬರದೇ ಪಕ್ಕಾಪೋಡು ಮಾಡುವಂತಿಲ್ಲ. ಎಡಿಎಲ್‌ಆರ್ ಅಧಿಕಾರಿಗಳು ಕೋರ್ಟ್ ಅದೇಶ ಪಾಲಿಸದೇ ಪಕ್ಕಾಪೋಡು ಮಾಡಿದ್ದಾರೆ. ಇದರಿಂದ ಎಂ.ಎಂ.ಶ್ಯಾಮಲ ಅವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ ರೈತ ಮುಖಂಡ ಕಾಫಿ ಕೊಯ್ದು, ಕಾಫಿ ಗಿಡಗಳನ್ನು ಹಾಳು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ದಾಖಲೆಗಳನ್ನು ಪರಿಶೀಲಿಸಿ ಯಾವ ರೀತಿ ಪೋಡು ಮಾಡಿದ್ದಾರೆಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಈಗ ಹೊಸದಾಗಿ ಆಗಿರುವ ಪೋಡನ್ನು ರದ್ದುಪಡಿಸಿ, ಮತ್ತೊಮ್ಮೆ ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪಿ.ಕೆ.ಕುಲ್‌ದೀಪ್, ಬಿ.ಕೆ.ಸರೋಜಮ್ಮ, ಎಂ.ಎಂ.ಶ್ಯಾಮಲ, ರೈತ ಮುಖಂಡ ವಾಸುದೇವ ಮತ್ತಿತರರಿದ್ದರು.



