ಟೆಂಪೋ ಟ್ರಾವೆಲರ್ ವಾಹನ ಸ್ಕೂಟಿಗೆ ಡಿಕ್ಕಿಯಾದ ಪರಿಣಾಮ ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ಶ್ರೀಮತಿ ನವಮಿ (25 ವರ್ಷ) ಎಂಬುವವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದು ಸೋಮವಾರ ಮುಂಜಾನೆ ನವಮಿಯವರು ಆಲ್ದೂರು ಸಹಕಾರ ಸಂಘದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಂದು ಸ್ಕೂಟಿಯಲ್ಲಿ ಆಗಮಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಆಲ್ದೂರು ಸಮೀಪದ ಹುಣಸೆಮಕ್ಕಿ ಗ್ರಾಮದ ವಿಕಾಸ್ ಎಂಬುವವರ ಪತ್ನಿ ನವಮಿ ಅವರು ಆಲ್ದೂರು ಸಹಕಾರ ಸಂಘದಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು
ಇಂದು ಮುಂಜಾನೆ ಹುಣಸೆಮಕ್ಕಿ ಗ್ರಾಮದಿಂದ ಸ್ಕೂಟಿಯಲ್ಲಿ ಸಹಕಾರ ಸಂಘದ ಗಣರಾಜ್ಯೋತ್ಸವಕ್ಕೆ ಆಗಮಿಸುತ್ತಿದ್ದರು.
ಆ ಸಂದರ್ಭದಲ್ಲಿ ಆಲ್ದೂರು ಬಿರಿಂಜೆ ಹಳ್ಳದ ಸಮೀಪ ಟಿಟಿ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಹೆಲ್ಮೆಟ್ ಧರಿಸಿದ್ದರು ಸಹ ತಲೆಗೆ ತೀವ್ರ ಬಿಟ್ಟು ಬಿದ್ದಿದೆ. ಚಿಕ್ಕಮಗಳೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ನವಮಿ ಕೊನೆಯುಸಿರೆಳೆದಿದ್ದಾರೆ
ಅಪಘಾತ ನಡೆಸಿದ ಟಿಟಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದು ವಾಹನ ಸಂಖ್ಯೆಯ ಆಧಾರದಲ್ಲಿ ವಾಹನವನ್ನು ವಶಕ್ಕೆ ಪಡೆಯಲಾಗುವುದು ಎಂದು ಆಲ್ದೂರು ಠಾಣಾಧಿಕಾರಿ ರವಿಯವರು ತಿಳಿಸಿದ್ದಾರೆ.
ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ಆಲ್ದೂರು ಸಹಕಾರ ಸಂಘದಲ್ಲಿ ಪಾರ್ಥಿವ ಶರೀರವನ್ನು ಒಂದು ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ತಿಳಿದುಬಂದಿದೆ.
ಇಂದು ಸೋಮವಾರ ರಾತ್ರಿ 8 ಗಂಟೆಗೆ ಸ್ವಗ್ರಾಮ ಹುಣಸೆಮಕ್ಕಿಯಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ.

ನವಮಿಯವರು ಆಲ್ದೂರು ಸಮೀಪದ ಮಾಗರಹಳ್ಳಿ ಗ್ರಾಮದ ವೆಂಕಟೇಶ್ ಗೌಡ ಶ್ರೀಮತಿ ಪೂರ್ಣಿಮಾ ಅವರ ಏಕೈಕ ಪುತ್ರಿ, ಹುಣಸೇಮಕ್ಕಿ ಗ್ರಾಮದ ವಿಕಾಸ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ನವಮಿ ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದರು, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ನವಮಿಯವರ ಸಾವಿನಿಂದ ಅವರ ಕುಟುಂಬ ಕಂಗಾಲಾಗಿದ್ದು, ಬಂಧುಗಳು ಮತ್ತು ಸಾರ್ವಜನಿಕರು ತೀವ್ರ ಕಂಬನಿ ಮಿಡಿದಿದ್ದಾರೆ.



