Oplus_16908288
ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ ಮರಗಸಿ ಮಾಡಲು ಬಂದಿದ್ದ ಕಾರ್ಮಿಕರೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕು ಗೋಣಿಬೀಡು ಸಮೀಪದ ಜಿ.ಅಗ್ರಹಾರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ.
ಜಿ.ಅಗ್ರಹಾರ ಮಹೇಶ್ ಎಂಬುವವರ ತೋಟದಲ್ಲಿ ಮರಗಸಿ ಮಾಡಲು ಬಂದಿದ್ದ ಕಾರ್ಮಿಕ ವಿದ್ಯುತ್ ತಾಗಿ ಸಾವನ್ನಪ್ಪಿದ್ದಾರೆ.
ಮೃತ ಕಾರ್ಮಿಕ ಬೇಲೂರು ತಾಲ್ಲೂಕು ಅರೇಹಳ್ಳಿ ಸಮೀಪದ ಮಲಸಾವರ ಗ್ರಾಮದವರೆಂದು ತಿಳಿದುಬಂದಿದೆ. ಮಲಸಾವರ ಗ್ರಾಮದ ಶಿವರಾಜ್ ಗೌಡ (50 ವರ್ಷ) ವಿದ್ಯುತ್ ತಂತಿ ಸಾವನ್ನಪ್ಪಿರುವ ದುರ್ದೈವಿ.
ಜಿ.ಅಗ್ರಹಾರ ತೋಟದಲ್ಲಿ ಮರಗಸಿ ಮಾಡಲು ತಮ್ಮ ತಂಡದೊಂದಿಗೆ ಬಂದಿದ್ದ ಶಿವರಾಜ್ ತೋಟದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಏಣಿಯನ್ನು ಕೊಂಡೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಹೊತ್ತಿಗಾಗಲೇ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಮೃತ ಶಿವರಾಜ್ ಅವರ ತಾಯಿ ಗೋಣಿಬೀಡು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ.



