ಸರ್ಕಾರವು ಸದುದ್ದೇಶದಿಂದ ಆಚರಣೆಗೆ ತಂದಿರುವ ಶ್ರೀ ಸವಿತಾ ಮಹರ್ಷಿ ಜಯಂತಿ ಸವಿತಾ ಸಮಾಜ ಬಂಧುಗಳ ಸಮಸ್ಯೆಗಳ ಕುರಿತು ಚಿಂತನ ಮಂಥನ ಮಾಡಿ, ಅದರ ನಿವಾರಣೆಗೆ ಸರ್ಕಾರದ ಮುಂದೆ ಬೇಡಿಕೆಗಳನ್ನು ಸಲ್ಲಿಸುವ ವೇದಿಕೆಯಾಗಬೇಕು. ಕ್ಷೌರಿಕ ವೃತ್ತಿಯನ್ನೆ ಕುಲಕಸುಬಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸವಿತಾ ಸಮಾಜದ ಬಂಧುಗಳು ಇತ್ತಿಚೆಗೆ ತನ್ನದೆ ಆದ ಸಮಸ್ಯೆಗಳಿಂದ ಬಳಲುತ್ತಿದ್ದು, ಇದನ್ನು ನಿವಾರಿಸಲು ಸಂಘಟಿತರಾಗಬೇಕೆಂದು ಕಾಂಗ್ರೆಸ್ ರಾಜ್ಯ ಮಹಿಳಾ ಉಪಾಧ್ಯಕ್ಷರಾದ ರೇಖಾ ಹುಲಿಯಪ್ಪ ಗೌಡ ಕರೆ ನೀಡಿದರು.
ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರು ಹಾಗೂ ತಾಲೂಕು ಸವಿತಾ ಸಮಾಜ ಚಿಕ್ಕಮಗಳೂರು ಹಾಗೂ ಎಲ್ಲಾ ತಾಲೂಕು, ಹೋಬಳಿ, ನಗರ ಸವಿತಾ ಸಮಾಜ, ಜಿಲ್ಲಾ ಸವಿತಾ ಯುವ ಸೇನೆ ಸಂಯುಕ್ತಾಶ್ರಯದಲ್ಲಿ ಬಿ.ಎಂ.ಶ್ರೀ ರಸ್ತೆಯಲ್ಲಿರುವ ಟೈಟಾನಿಕ್ ಜೆಂಟ್ಸ್ ಬ್ಯೂಟಿ ಪಾರ್ಲರ್ ಕೇಂದ್ರ ಕಛೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಜಿಲ್ಲಾ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಸವಿತಾ ಮಹರ್ಷಿಯವರಿಗೆ ಪುಷ್ಟ ನಮನ ಸಲ್ಲಿಸಿ ಮಾತನಾಡಿದ ಅವರು ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ವಿಶ್ವನಾಥ ಸಂಕಲ್ಪ ಹಾಗೂ ತಾಲೂಕು ಸವಿತಾ ಸಮಾಜ ಚಿಕ್ಕಮಗಳೂರು ಘಟಕದ ತಾಲೂಕು ಅಧ್ಯಕ್ಷರಾದ ಜೆ. ಸತ್ಯನಾರಾಯಣ, ಸಮಾಜದ ಬಗ್ಗೆ ಹಾಗೂ ಸಮಾಜ ಸೇವೆಯ ಬಗ್ಗೆ 2011 ರಿಂದಲೂ ಕಡಿಮೆ ಸಂಖ್ಯೆ ಇದ್ದರು ಅರ್ಥಪೂರ್ಣವಾದ ಕಾರ್ಯಕ್ರಮ ಮಾಡಿಕೊಂಡು ಬರುತ್ತ ಸಮಾಜ ಭಾಂದವರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಸಮಾಜ ಬಗ್ಗೆ ನಿಸ್ವಾರ್ಥವಾಗಿ ಅಪಾರ ಕಾಳಜಿ ಇರುವ ಇಂತಹ ಯುವ ನಾಯಕತ್ವದಲ್ಲಿ ಸಮಾಜ ಮುನ್ನಡೆಯಬೇಕು. ಉತ್ತರ ಭಾರತ ಹಾಗೂ ಬಾಂಗ್ಲಾದೇಶದಿಂದ ಬಂದ ಕುಲವೃತ್ತಿ ಅಲ್ಲದವರ ಅಂಗಡಿಗಳು ಹೆಚ್ಚಾಗುತ್ತಿದ್ದು, ಇದು ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದರ ವಿರುದ್ದ ಹೋರಾಡಲು ಹಾಗೂ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಕಾರ್ಯಪ್ರವೃತ್ತರಾದರೆ ಅವರೊಂದಿಗೆ ನಾವು ಕೈ ಜೋಡಿಸುತ್ತೇವೆ. ಸಮಾಜದ ಮಹನೀಯರಾದ ಶ್ರೀ ಸವಿತಾ ಮಹರ್ಷಿ ಜಯಂತಿ ಮೂಲಕ ಸಮಾಜದ ಬಂಧುಗಳು ಒಂದಾಗಬೇಕು ಎಂದು ಹೇಳಿದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಕುರುವಂಗಿ ವೆಂಕಟೇಶ್ ಮಾತನಾಡಿ ಸವಿತಾ ಸಮಾಜ ನಮ್ಮನ್ನು ಸುಂದರ ಮಾನವರನ್ನಾಗಿ ಮಾಡುವಲ್ಲಿ ಅನಾದಿ ಕಾಲದಿಂದಲೂ ತಮ್ಮ ಸೇವೆ ಮಾಡುತ್ತಿದ್ದಾರೆ. ಇಂತಹ ಸಮಾಜದ ಸಮಸ್ಯೆಗಳ ನಿವಾರಣೆಯ ಬಗ್ಗೆ ನಾವೇಲ್ಲರೂ ಅವರ ಜೊತೆ ನಿಲ್ಲಬೇಕೆಂದು ಹೇಳಿದರು.
ದಲಿತ್ ಜನ ಸೇನೆಯ ಜಿಲ್ಲಾಧ್ಯಕ್ಷರಾದ ಅನಿಲ್ ಆನಂದ್ ಮಾತನಾಡಿ ಸಮಾಜದ ಬಂಧುಗಳಲ್ಲಿ ಒಗ್ಗಟ್ಟು ಇಲ್ಲದೆ ಇರುವುದರಿಂದ ಹಾಗೂ ತಮ್ಮ ವೃತ್ತಿಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳದೆ ಇರುವುದರಿಂದ ಅನ್ಯರು ಇಲ್ಲಿಗೆ ಬರುತ್ತಿದ್ದಾರೆ. ತಮ್ಮ ಕುಲ ವೃತ್ತಿಯ ಜೊತೆಗೆ ಉತ್ತಮ ವಿದ್ಯಾಭ್ಯಾಸ ಪಡೆದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಬಲರಾಗಬೇಕೆಂದು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಕಬ್ಬಿಗೆರೆ ಮೋಹನ್ ಮಾತನಾಡಿ ಇಂತಹ ಮಹನೀಯರ ಜಯಂತಿಗಳು ಒಂದು ಸಮಾಜಕ್ಕೆ ಸೀಮಿತವಲ್ಲ. ಪೂರ್ವಬಾವಿ ಸಭೆಯಿಂದ ಆರಂಭವಾಗಿ ಜಯಂತಿಯಲ್ಲೂ ಎಲ್ಲಾ ಸಮಾಜದ ಮುಖಂಡರನ್ನು ಸೇರಿಸಿಕೊಂಡು ಅರ್ಥಪೂರ್ಣವಾದ ಜಯಂತಿ ಆಚರಣೆಗೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಮುಂದಾಗಬೇಕೆಂದು ಹೇಳಿದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ನಾಡ್ ನ್ಯೂಸ್ 18 ಸಹ ಸಂಪಾದಕ ಕುಮಾರ್ ಮಾತನಾಡಿ ಚಿಕ್ಕದಾದರು, ಸುಂದರವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಲಗುರುಗಳನ್ನು ನೆನಪಿಸಿಕೊಳ್ಳಲು, ಸಣ್ಣ ಸಮುದಾಯಗಳು ಸಂಘಟಿತವಾಗಲು ಇಂತಹ ಕಾರ್ಯಕ್ರಮ ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ವಿಶ್ವನಾಥ ಸಂಕಲ್ಪ ಮಾತನಾಡಿ 2018 ರಲ್ಲಿ ಆಜಾದ್ ಪಾರ್ಕ್ ವೃತ್ತದಲ್ಲಿ ಎಲ್ಲಾ ಸಂಘಟನೆಗಳ ಸಹಕಾರ ಪಡೆದು ಶ್ರೀ ಸವಿತಾ ಮಹರ್ಷಿ ಜಯಂತಿ ಹಾಗೂ ಅಭಿವೃದ್ಧಿ ನಿಗಮಕ್ಕೆ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ನಡೆಸಿದ ಪರಿಣಾಮ ಇಂದು ಜಯಂತಿ ಆಚರಣೆ ಮಾಡುತ್ತಿದ್ದೇವೆ. ಸಮಾಜದ ಸಂಘಟನೆ ಮಾಡದ, ಸಮಾಜದ ಬಂಧುಗಳ ಸಮಸ್ಯೆಗಳಿಗೆ ಸ್ಪಂಧಿಸದ ವ್ಯಕ್ತಿಗಳು ಕೇವಲ ವೇದಿಕೆ ಪ್ರಿಯರಾಗಿ ಕೆಲಸ ಮಾಡುತ್ತಿದ್ದು, ಎಲ್ಲ ಸಂಘಟನೆಗಳ ಸಹಕಾರ ಪಡೆದು ಕುಲವೃತ್ತಿ ಅಲ್ಲದ ಅಂಗಡಿಗಳ ವಿರುದ್ದ ಹೋರಾಟ ಹಮ್ಮಿಕೊಳ್ಳುತ್ತೇವೆ. ಇದಕ್ಕೆ ಸಮಾಜದ ಬುದ್ದಿವಂತ ಭಾಂದವರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಕೋಟೆ ಮಲ್ಲೇಶ್, ಕನ್ನಡಾಂಬೆ ಬಳಗದ ಕಾರ್ಯಕರ್ತರು, ತಾಲೂಕು ಸವಿತಾ ಸಮಾಜ ಚಿಕ್ಕಮಗಳೂರು ಅಧ್ಯಕ್ಷ ಜೆ.ಸತ್ಯನಾರಾಯಣ, ಸವಿತಾ ಯುವ ಸೇನೆ ಅಧ್ಯಕ್ಷ ಟೈಟಾನಿಕ್ ಮಂಜುನಾಥ್, ಕುಮಾರ್, ಸಂದೇಶ್, ಚಂದ್ರಶೇಖರ್, ಸದಾಶಿವ, ಶಬರೀಶ್, ಸಂಪತ್, ಟಿ.ಪಿ. ವಿಜಯ್ ಕುಮಾರ್, ತಾಲೂಕು ಮಹಿಳಾ ಅಧ್ಯಕ್ಷ ಅಶ್ವಿನಿ ಮುಂತಾದವರು ಪಾಲ್ಗೊಂಡಿದ್ದರು.



