ದಕ್ಷಿಣ ಕಾಶಿಯೆಂದು ಖ್ಯಾತಿ ಪಡೆದ ಇಲ್ಲಿನ ಪವಿತ್ರ ಕಲಶೇಶ್ವರ ದೇವಾಲಯದಲ್ಲಿ ಶುಕ್ರವಾರ ಶ್ರೀ ಕಲಶೇಶ್ವರನ ಜಾತ್ರಾ ಮಹೋತ್ಸವ ಭಕ್ತಿಭಾವದ ಮಹಾಪೂರವಾಗಿ ಪರಿವರ್ತಿತವಾಯಿತು. ಓಂ ನಮಃ ಶಿವಾಯ ಎಂಬ ನಾಮಘೋಷಗಳ ಮಧ್ಯೆ ದೇವಾಲಯ, ಬೀದಿಗಳು ಹಾಗೂ ಸುತ್ತಮುತ್ತಲ ಪ್ರದೇಶಗಳು ಭಕ್ತಿ ಮತ್ತು ಭಾವೋದ್ರೇಕದಿಂದ ಕಂಪಿಸಿದವು.
ತಾಲ್ಲೂಕಿನ ಕಳಸ, ಹೊರನಾಡು, ಬಾಳೆಹೊಳೆ, ಕುದುರೆಮುಖ, ಸಂಸೆ, ಜಾಂಬ್ಲೆ, ನೆಲ್ಲಿಬೀಡು, ಮರಸಣಿಗೆ, ಹಿರೇಬೈಲು, ಜಾವಳಿ, ಬಸರಿಕಟ್ಟೆ ಸೇರಿದಂತೆ ನೂರಾರು ಗ್ರಾಮಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲೇ ಆಗಮಿಸಿ ತಮ್ಮ ಆರಾಧ್ಯ ದೈವ ಕಲಶೇಶ್ವರನ ದರ್ಶನ ಪಡೆದು ಪುನೀತರಾದರು. ದೀರ್ಘ ದಾರಿಯ ಕಷ್ಟವನ್ನೂ ಲೆಕ್ಕಿಸದೆ, ಶಿವನೇ ಶರಣು ಎಂಬ ನಂಬಿಕೆಯಿಂದ ಬಂದ ಭಕ್ತರ ಮುಖಗಳಲ್ಲಿ ಅಪಾರ ಶ್ರದ್ಧೆ ಮತ್ತು ಸಮಾಧಾನ ಸ್ಪಷ್ಟವಾಗಿ ಕಾಣುತ್ತಿತ್ತು. ಪ್ರವಾಸಿಗರೂ ಜಾತ್ರೆಯಲ್ಲಿ ಭಾಗವಹಿಸಿ, ಈ ಕ್ಷೇತ್ರದ ಪವಿತ್ರತೆಯನ್ನು ಮನಸಾರೆ ಅನುಭವಿಸಿದರು.
ಜಾತ್ರೆಯ ನಿಮಿತ್ತ ಊರ ತುಂಬೆಲ್ಲ ತಳಿರು–ತೋರಣಗಳಿಂದ ಅಲಂಕರಿಸಲ್ಪಟ್ಟಿದ್ದು, ಇಡೀ ಕಲಶೇಶ್ವರ ದೇವಾಲಯ ವಿದ್ಯುದೀಪಗಳ ಹೊಳಪಿನಲ್ಲಿ ರಾರಾಜಿಸಿತು. ರಾತ್ರಿ ವೇಳೆ ದೀಪಾಲಂಕಾರದಲ್ಲಿ ಮಿನುಗಿದ ದೇವಾಲಯ ಭಕ್ತರ ಮನಸ್ಸಿಗೆ ಆನಂದದ ಬೆಳಕನ್ನು ತುಂಬಿತು.
ನಾಲ್ಕು ಕೂಡಿಗೆಗಳ ಮೂಲ ನಿವಾಸಿಗಳಾದ ಗೌಡಲು ಜನಾಂಗ ಶ್ರದ್ಧೆಯಿಂದ ಸಿದ್ಧಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶ್ರೀ ಕಲಶೇಶ್ವರ ವಿರಾಜಮಾನವಾಗುವ ಕ್ಷಣಕ್ಕಾಗಿ ಭಕ್ತರು ಕಾಯುತ್ತಿದ್ದರು. ಮಧ್ಯಾಹ್ನ ಸ್ತುತಿ ಪಾಠಕರ ವೇದಘೋಷ, ಛತ್ರಿ–ಚಾಮರಗಳ ನೃತ್ಯ, ಮಂಗಳವಾದ್ಯಗಳ ನಾದದೊಂದಿಗೆ ಹೂವಿನ ಅಲಂಕಾರದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ತರಲಾಯಿತು.
ಶ್ರೀ ಕಲಶೇಶ್ವರನ ಉತ್ಸವ ಮೂರ್ತಿಯನ್ನು ಭವ್ಯ ಬ್ರಹ್ಮರಥದಲ್ಲಿ ಕುಳ್ಳಿರಿಸಿ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದಾಗ, ಭಕ್ತಾದಿಗಳು ಫಲ–ಪುಷ್ಪಗಳಿಂದ ಅರ್ಚನೆ ಮಾಡಿ, ತಾವು ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ವಿವಿಧ ಧಾನ್ಯಗಳನ್ನು ಸಮರ್ಪಿಸಿದರು. ತೆಂಗಿನಕಾಯಿ ಒಡೆಯುವ ಶಬ್ದದ ಮಧ್ಯೆ ಹರ ಹರ ಮಹಾದೇವ ಎಂಬ ಘೋಷಗಳು ಆಕಾಶ ಮುಟ್ಟಿದವು.
ಶ್ವೇತವಸ್ತ್ರ ಧರಿಸಿದ ಭಕ್ತರು ಭವ್ಯ ಬ್ರಹ್ಮರಥವನ್ನು ಎಳೆಯುತ್ತಿದ್ದ ಕ್ಷಣ ಎಲ್ಲರೂ ಕಣ್ತುಂಬಿಸಿಕೊಂಡು, ಒಂದು ಕಡೆ ಜನರು ಭಕ್ತಿ ಸಾಗರದಲ್ಲಿ ಮುಳುಗಿದರೆ, ಇನ್ನೊಂದು ಕಡೆ ಜಾತ್ರೆಯ ಸಂತೆ, ವ್ಯಾಪಾರ–ವಹಿವಾಟುಗಳು ಜೀವಂತ ಸಂಸ್ಕøತಿಯ ಪ್ರತಿರೂಪವಾಗಿ ಮೆರೆದವು.
ರಾತ್ರಿ ಶ್ರೀ ಕಲಶೇಶ್ವರನ ಶ್ರೀಮನ್ ಮಹಾ ರಥೋತ್ಸವ ಮತ್ತಷ್ಟು ಭಾವನಾತ್ಮಕವಾಗಿ ನಡೆಯಿತು. ದೇವಾಲಯದ ಬಳಿಯಿಂದ ಮಂಜಿನಕಟ್ಟೆಯವರೆಗೆ ರಥಬೀದಿಯಲ್ಲಿ ಸಾಗಿದ ರಥೋತ್ಸವದ ವೇಳೆ ದಾರಿಯುದ್ದಕ್ಕೂ ಭಕ್ತರು ಹಣ್ಣು–ಕಾಯಿ ಸಮರ್ಪಿಸಿ, ತಮ್ಮ ಜೀವನದ ಸಂಕಟ–ಸಂಕಲ್ಪಗಳನ್ನು ದೇವರ ಪಾದಗಳಲ್ಲಿ ಅರ್ಪಿಸಿದರು.
ಒಟ್ಟಾರೆ, ಶ್ರೀ ಕಲಶೇಶ್ವರನ ಜಾತ್ರಾ ಮಹೋತ್ಸವವು ಕೇವಲ ಒಂದು ಧಾರ್ಮಿಕ ಆಚರಣೆಯಾಗದೆ, ಭಕ್ತಿ, ಪರಂಪರೆ, ಸಂಸ್ಕೃತಿ ಮತ್ತು ಜನಮನಗಳ ಸಂಬಂಧವನ್ನು ಮತ್ತೊಮ್ಮೆ ಸಾರಿದ ಮಹೋತ್ಸವವಾಗಿತ್ತು.



