ಸಹಕಾರಿ ರಂಗದಲ್ಲಿ ಜಾತಿ, ಧರ್ಮ ಹಾಗೂ ರಾಜಕಾರಣಕ್ಕೆ ಅವಕಾಶ ನೀಡಬಾರದು. ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಸೇವೆಯೇ ಮೂಲಮಂತ್ರವಾಗಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಯೂನಿಯನ್‍ನ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಚಿಕ್ಕಮಗಳೂರು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಚಿಕ್ಕಮಗಳೂರು ನಗರದಲ್ಲಿ ಗುರುವಾರ ನಡೆದ ಒಂದು ದಿನದ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಸಹಕಾರಿ ರಂಗವು ಬಹಳಷ್ಟು ಬದಲಾವಣೆ ಕಂಡಿದೆ. ಸಹಕಾರಿ ಕ್ಷೇತ್ರವು ಪಕ್ಷ, ಧರ್ಮಕ್ಕೆ ಸೀಮಿತಗೊಳ್ಳುವುದು ಸರಿಯಲ್ಲ. ಸಹಕಾರಿ ಕ್ಷೇತ್ರ ಪ್ರಾರಂಭದ ಕಾಲದಲ್ಲಿ ಗುಂಪುಗಾರಿಕೆ, ಜಾತಿ, ಪಕ್ಷಬೇಧದಿಂದ ಕಾರ್ಯನಿರ್ವಹಿಸುತ್ತಿದ್ದು ಇಂದಿನ ದಿನಮಾನದಲ್ಲಿ ಸೊಸೈಟಿಗಳು ರಾಜಕೀಯವಾಗಿ ಮಾರ್ಪಾಡುತ್ತಿದೆ ಎಂದರು.
ಇಂದಿನ ದಿನಗಳಲ್ಲಿ ಸಹಕಾರಿ ರಂಗದಲ್ಲಿ ಸಾಕಷ್ಟು ಸವಲತ್ತಿನ ಅನುಕೂಲವಿದ್ದರೂ ಬೆಳವಣಿಗೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಕಾರಣ ಪಕ್ಷರಾಜಕೀಯ, ಗುಂಪುಗಾರಿಕೆ ಹೆಚ್ಚಾಗುತ್ತಿದ್ದು ಇದರಿಂದ ಜನರಿಗೆ ಸಮರ್ಪಕ ಸೌಲಭ್ಯ ಒದಗಿಸಲು ವಿಫಲವಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಮೈಸೂರು ವಿಭಾಗದಿಂದ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಒಟ್ಟು ಎಂಟು ಜಿಲ್ಲೆಗಳಿಂದ ಸಹಕಾರಿ ಪ್ರತಿನಿಧಿಗಳು ಭಾಗವಹಿಸಿ ತರಬೇತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದು, ಕೃಷಿ ಮತ್ತು ಕೃಷಿಯೇತರ ಸಹಕಾರಿ ಕ್ಷೇತ್ರ ಹೊರತುಪಡಿಸಿ, ಉಳಿದ ಎಲ್ಲಾ ಸಹಕಾರಿ ರಂಗಕ್ಕೂ ಶಿಕ್ಷಣ, ತರಬೇತಿ, ಪ್ರಚಾರ ಮೂಲಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಸಹಕಾರಿ ಪ್ರತಿನಿಧಿಗಳು ಅನುಮಾನ, ಮಾಹಿತಿ ಕೊರತೆ ಅಥವಾ ತಿದ್ದುಪಡಿಗಳಂತಹ ಸಂದೇಹಗಳಿದ್ದರೆ ಪರಿಣಿತ ಉಪನ್ಯಾಸಕರಿಂದ ಮಾಹಿತಿ ಪಡೆದುಕೊಳ್ಳಬೇಕು. ಜನರಿಗೆ ಅನುಕೂಲವಾಗುವ ಮಹತ್ತರ ಜವಾಬ್ದಾರಿ ಸಹಕಾರಿ ಸಿಬ್ಬಂದಿಗಳ ಮೇಲಿದ್ದು, ಮನಸ್ಸಿನಲ್ಲಿ ಉದ್ಬವಿಸುವ ಪ್ರಶ್ನೆಗಳಿಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್ ಮಾತನಾಡಿ ಸಮಾಜದ ಆರ್ಥಿಕ ವ್ಯವಸ್ಥೆ ನಿರ್ವಹಿಸುತ್ತಿರುವ ಸಹಕಾರಿ ಕ್ಷೇತ್ರದ ಜವಾಬ್ದಾರಿ ಬಹಳಷ್ಟಿದೆ. ಈ ಕ್ಷೇತ್ರದಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಕಲಿತು ಮುನ್ನೆಡೆದರೆ ವಾಸ್ತವದಲ್ಲಿ ಬದುಕುತ್ತಾರೆ. ಕಲಿಯದಿದ್ದರೆ ಭ್ರಮಾಲೋಕದಲ್ಲಿ ಮುಳುಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಆರ್.ಗುರುಸ್ವಾಮಿ ಸಹಕಾರ ಕಾಯ್ದೆಯ ಪ್ರಮುಖ ಅಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳು ಮತ್ತು ಸಹಕಾರ ಸಂಘಗಳಿಗೆ ಅನ್ವಯಿಸುವ ತೆರಿಗೆ ಅಂಶಗಳ ಸಮಗ್ರವಾಗಿ ವಿವರಣೆ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಕ್ಷೇತ್ರ ಒಂದು ಪವಿತ್ರವಾದ ಕ್ಷೇತ್ರವಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವವರು ಯಾವುದೇ ರಾಜಕೀಯ ಹಾಗೂ ವೈಯುಕ್ತಿಕ ಆಮೀಷಗಳಿಗೆ ಒಳಗಾಗದೇ ಸಂಸ್ಥೆಯ ಬೆಳೆವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿರಬೇಕು, ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಜನಸಾಮಾನ್ಯರಿಗೆ ಆರ್ಥಿಕ ಅಭಿವೃದ್ಧಿ ಹೊಂದಲು ಅನೇಕ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಖಾರ ಯೂನಿಯನ್ ಉಪಾಧ್ಯಕ್ಷ ಸೀಗೇಹಡ್ಲು ಹರೀಶ್, ನಿರ್ದೇಶಕ ಪಿ.ಶಶಿಕುಮಾರ್, ಸಮನ್ವಯಾಧಿಕಾರಿ ಎಂ.ಮಲ್ಲರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶಸ್, ವ್ಯವಸ್ಥಾಪಕ ಇಂದ್ರೇಶ್ ಹಾಗೂ ವಿವಿಧ ಸಹಕಾರಿ ರಂಗದ ಪ್ರತಿನಿಧಿಗಳು ಉಪಸ್ಥಿತರಿದ್ದರು.



