ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸುವವರು, ಹೋರಾಟ ಮಾಡುವವರಿಗೆ ಸಮಾಜದ ಪ್ರೋತ್ಸಾಹ ಅತ್ಯಗತ್ಯ ಎಂದು ಕರ್ನಾಟಕ ವಿಕಾಸ ರಂಗ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದರು
ಅವರು ಗುರುವಾರ ಸಂಜೆ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಕರ್ನಾಟಕ ವಿಕಾಸ ರಂಗ, ಕುಂಭಕ ಸಾಹಿತ್ಯ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡಪರ ಹೋರಾಟಗಾರ ಹೆಚ್.ಬಿ. ರಘು ಹೊರಟ್ಟಿ ಅವರ ಆರೋಗ್ಯ ವಿಚಾರಿಸಿ, ನಂತರ ಅವರಿಗೆ ಗೌರವ ಸಮರ್ಪಿಸಿ ಮಾತನಾಡಿದರು.
ಹೊರಟ್ಟಿ ರಘು ಅವರು ನಿತ್ಯ ಕನ್ನಡ ಸೇವಕರಾಗಿದ್ದಾರೆ. ಕನ್ನಡಕ್ಕಾಗಿ ಬಹಳಷ್ಟು ಹೋರಾಟ ಮಾಡಿರುತ್ತಾರೆ, ತಮ್ಮ ವಾಹನಗಳಲ್ಲಿ ನಿತ್ಯ ಕನ್ನಡ ಬಾವುಟಗಳನ್ನು ಹಾಕಿಕೊಂಡು ಕನ್ನಡ ಪ್ರೇಮವನ್ನು ಮೆರೆಯುತ್ತಿದ್ದಾರೆ, ಅಂಗಡಿ ಮುಗ್ಗಟ್ಟುಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಕನ್ನಡದ ನಾಮಫಲಕಗಳನ್ನು ಹಾಕಿಸಲು ಹೋರಾಟ ಮಾಡುತ್ತಿದ್ದಾರೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ತಮ್ಮ ಬದುಕಿನ ಉದ್ದಕ್ಕೂ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಕನ್ನಡಪರ ಹೋರಾಟಗಾರರಿಗೆ ಸಮಾಜ ತಮ್ಮ ಬೆಂಬಲ ಸೂಚಿಸಬೇಕು ಎಂದರು.
ಕನ್ನಡ ಭಾಷೆ ಇಂದು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ, ನಮ್ಮ ಮಕ್ಕಳು ಕನ್ನಡ ಭಾಷೆಯಿಂದ ದೂರವಾಗುತ್ತಿದ್ದಾರೆ. ಕನ್ನಡ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ನಾವು ಕನ್ನಡದ ಶಾಲೆಗಳನ್ನು ಉಳಿಸಲು, ಕನ್ನಡ ಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ಕಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಹೇಳಿದರು
ಮೂಡಿಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಕೆ ಲಕ್ಷ್ಮಣಗೌಡ ಮಾತನಾಡಿ ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದ ಮತ್ತು ಸುಮಧುರವಾದ ಭಾಷೆಯಾಗಿದ್ದು ಇಂತಹ ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡ ಸಾಹಿತ್ಯ ಪರಿಷತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಈ ನಿಟ್ಟಿನಲ್ಲಿ ಕನ್ನಡ ಪರ ಹೋರಾಟಗಾರರ ಪಾತ್ರವು ಪ್ರಮುಖವಾಗಿದೆ. ಸಾರ್ವಜನಿಕರು ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಪರ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕರಾದ ಹೆಚ್ ಎಂ ಶಾಂತಕುಮಾರ್ ಗಣೇಶ್ ಮಗ್ಗಲಮಕ್ಕಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಸಂಚಾಲಕಿ ಅನಿತಾ ಜಗದೀಪ್, ಪತ್ರಕರ್ತ ಪ್ರಸನ್ನ ಗೌಡಹಳ್ಳಿ, ಆರ್ ಪ್ರಕಾಶ್, ಹಾ ಭಾ ನಾಗೇಶ್, ಜಗದೀಪ್ ಹಂಡುಗುಳಿ, ಬಿ ಆರ್ ರಮೇಶ್, ಪುಟ್ಟರಾಜು, ನವೀನ್, ಎಂ ಎಸ್ ನಾಗರಾಜು, ವಸಂತ ಹಾರಗೋಡು, ಹಸೇನಾರ್ ಮತ್ತು ಹೊರಟ್ಟಿ ರಘು ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.



