February 17, 2026

 

 

ಚಿಕ್ಕಮಗಳೂರಿಗೆ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕೆಂದು ಬಂದಿದ್ದ ಕುಣಿಗಲ್ ಮೂಲದ ವಿವಾಹಿತ ಮಹಿಳೆ ಪ್ರಿಯಾಂಕಾ ನಾಪತ್ತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದೆ. ರಾಜ್ಯದಾದ್ಯಂತ ಸದ್ದು ಮಾಡಿದ್ದ ಪ್ರಕರಣದಲ್ಲಿ ಮಹಿಳೆಯೇ ನಾಪತ್ತೆ ನಾಟಕ ಸೃಷ್ಟಿಸಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿ ಕೊನೆಗೆ ಆತನ ಮನೆಯಲ್ಲಿಯೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

ಚಿಕ್ಕಮಗಳೂರಿಗೆ ಮದುವೆಗೆ ಬಂದಿದ್ದ ಮಹಿಳೆ  ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಫೆಬ್ರವರಿ 12 ರಂದು  ಕುಣಿಗಲ್‌ನಿಂದ ಚಿಕ್ಕಮಗಳೂರಿಗೆ  ಬಂದಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಪತ್ತೆಯಾಗಿದ್ದ ಪ್ರಿಯಾಂಕ ಎಂಬ ವಿವಾಹಿತ ಮಹಿಳೆಯ ಪೋಟೋ ಹಾಕಿ ಆಕೆಯ ಪತ್ತೆಗೆ ಸಹಕರಿಸುವಂತೆ ಕೋರಲಾಗಿತ್ತು.

ಚಿಕ್ಕಮಗಳೂರಿನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ, ಬೇಲೂರಿನಲ್ಲಿ ತನ್ನ ತವರುಮನೆಗೆ ತೆರಳಿದ್ದ ಪ್ರಿಯಾಂಕ ನಂತರ ರಾತ್ರಿ ತನ್ನೂರು ಕುಣಿಗಲ್ ಗೆ ತೆರಳುತ್ತೇನೆ ಎಂದು ಬೇಲೂರು ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಿಯಾಂಕ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಳು. ಬೇಲೂರಿನ ಕಲ್ಕೆರೆ ಗ್ರಾಮದ ಬಳಿ ಆಕೆಯ ಬಟ್ಟೆ, ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದವು. ಇದನ್ನು ಕಂಡ ಆಕೆಯ ಕುಟುಂಬಸ್ಥರು ಅತ್ಯಾಚಾರ ಮಾಡಿ‌ ಕೊಲೆ ಮಾಡಲಾಗಿದೆ, ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ. ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ಆರೋಪಗಳ ಸುರಿಮಳೆಗೈದಿದ್ದರು. ಪ್ರಕರಣವನ್ನು ಸವಲಾಗಿ ಸ್ವೀಕರಿಸಿದ ಹಾಸನ ಎಸ್ಪಿ ಶುಭನ್ವಿತಾ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಿದ್ದರು.

ತನಿಖೆಗಿಳಿದ ಪೊಲೀಸರು ಪ್ರಿಯಾಂಕ ಕಾಲ್ ಡಿಟೇಲ್ಸ್ ಹಾಗೂ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದ ವೇಳೆ ಹಲವು ಮಾಹಿತಿಗಳು ಸಿಕ್ಕಿದ್ದವು. ಇದನ್ನೇ ಆಧರಿಸಿ ಕುಣಿಗಲ್‌ಗೆ ತೆರಳಿದ ಕೆ.ಆರ್.ಪುರಂ ಪೊಲೀಸ್ ಠಾಣೆ ಪಿಎಸ್‌ಐ ವಿನಯ್‌ಕುಮಾರ್ ನೇತೃತ್ವದ ತಂಡ ಫೆಬ್ರವರಿ 14ರ ರಾತ್ರಿ ರಾತ್ರಿ ಪ್ರಿಯಾಂಕ ಆಕೆಯ ಪ್ರಿಯಕರ ಪಶ್ಚಿಮಬಂಗಾಳ ಮೂಲದ ಡೇವಿಡ್ ಮನೆಯಲ್ಲಿ ಆತನೊಂದಿಗೆ ಸಿಕ್ಕಿಬಿದ್ದಿದ್ದಳು. ಇಂದು ಹಾಸನದ ಡಿವೈಎಸ್‌ಪಿ ಗಂಗಾಧರಪ್ಪ ಅವರು ಇಬ್ಬರನ್ನು ಕಚೇರಿಗೆ ಕರೆ ತಂದು ವಿಚಾರಣೆ ನಡೆಸಿದ ವೇಳೆ ಸಿನಿಮಾ ಕಥೆಗೂ ಮೀರಿಸುವ ರೀತಿ ಪ್ರಿಯಾಂಕ ಹೆಣೆದಿದ್ದ ಕಥೆ ಹೊರಬಿದ್ದಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಕುಣಿಗಲ್ ಬಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಪ್ರಿಯಾಂಕ ಕೆಲಸ ಮಾಡುತ್ತಿದ್ದಳು ಹಾಗೂ ಅದೇ ಪ್ಯಾಕ್ಟರಿಯಲ್ಲಿ  ಡೇವಿಡ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ತನಗೆ ಮದುವೆಯಾಗಿ ಗಂಡು ಮಗುವಿದ್ದರು ಪ್ರಿಯಾಂಕ ಡೇವಿಡ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆನಂತರದಲ್ಲಿ ಇಬ್ಬರ ಸಂಬಂಧ ಹೊಂದಿದ್ದರು. ಈ ಬಗ್ಗೆ ಪತಿ ಹಾಗೂ ತನ್ನ ಕುಟುಂಬದವರಿಗೆ ಯಾವುದೇ ಅನುಮಾನ ಬಾರದ ರೀತಿ ನಡೆದುಕೊಂಡಿದ್ದಳು.

ಫೆ.12 ರಂದು ಸಂಜೆ 6.45 ರ ಸಮಯದಲ್ಲಿ ತಾಯಿ ಜೊತೆ ಬೇಲೂರು  ಕೈಮರದ ಬಳಿ ಬಂದಿದ್ದ ಪ್ರಿಯಾಂಕ ಸಾರಿಗೆ ಬಸ್ ಹತ್ತಿದ್ದಳು.‌ ನಂತರ ಬೇಲೂರು ಬಸ್ ನಿಲ್ದಾಣಕ್ಕೆ ಬಂದ ಪ್ರಿಯಾಂಕ 7:59 ರಲ್ಲಿ ತಾಯಿಗೆ ಕರೆ ಮಾಡಿ ತಾನು ಒಬ್ಬರ ಬಳಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಹೇಳಿದ್ದಳು ರಾತ್ರಿ‌ 8:12 ಕ್ಕೆ ಪ್ರಿಯಾಂಕ ಫೋನ್ ಸ್ವಿಚ್ ಆಫ್ ಆಗಿತ್ತು.

ಪ್ರಿಯಾಂಕ ಗಂಡನನ್ನು ಬಿಟ್ಟು ಪ್ರಿಯಕರ‌ನ ಜೊತೆ ವಾಸ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಮೊದಲೇ ಪ್ಲ್ಯಾನ್ ಮಾಡಿ ಫೆ.12 ರಂದು ಬೇಲೂರಿಗೆ ಬರುತ್ತಿದ್ದಂತೆ ಡೇವಿಡ್ ಬೈಕ್ ಹತ್ತಿ ಕಲ್ಕೆರೆ ಬಳಿ ಬಂದು ಕೆರೆಯ ಸಮೀಪ ಬಟ್ಟೆಗಳನ್ನು ಬಿಸಾಡಿ ಚಿನ್ನಾಭರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂದು ಬಿಂಬಿಸಿದ್ದಳು. ಪ್ರಿಯಾಂಕ ಮತ್ತೊಂದು ಫೋನ್‌ನನ್ನು ಬಳಸುತ್ತಿದ್ದು ಈ ಯಾವುದೇ ವಿಚಾರ ಗಂಡನಿಗೆ, ಆಕೆಯ ಕುಟುಂಬಸ್ಥರರಿಗೆ ತಿಳಿದಿರಲಿಲ್ಲ‌. ಡೇವಿಡ್ ಪಶ್ಚಿಮಬಂಗಾಳ ಮೂಲದವನಾಗಿದ್ದು,  ಇಬ್ಬರು ಪಶ್ಚಿಮ ಬಂಗಾಳಕ್ಕೆ ಹೋಗಿ ಸೆಟಲ್ ಆಗಲು ನಿರ್ಧರಿಸಿದ್ದರು. ಅದಕ್ಕಾಗಿ ಈ ರೀತಿಯ ನಾಟಕವಾಡಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ. ಇಬ್ಬರನ್ನು ಪೊಲೀಸರು ರಕ್ಷಣೆ ಮಾಡಲಾಗಿದ್ದು, ಚಿನ್ನಾಭರಣಗಳು ಅವರ ಬಳಿಯೇ ಇದೆ ಎಂದು ಎಸ್ಪಿ ಶುಭನ್ವಿತಾ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಡಿವೈಎಸ್‌ಪಿ ಕಚೇರಿಗೆ ಬಂದ ಪ್ರಿಯಾಂಕ ಸಹೋದರ ವಿಷಯ ಕೇಳಿ ಆಘಾತಗೊಂಡಿದ್ದಾರೆ. ನಮ್ಮ ಅಕ್ಕ ನಾಲ್ಕೈದು ವರ್ಷಗಳಿಂದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಅವಳಿಗೆ ಆತನ ಪರಿಚಯವಾಗಿದೆ. ಇದೆಲ್ಲಾ ವಿಚಾರ ಅವರಿಬ್ಬರು ಪೊಲೀಸರಿಗೆ ಸಿಕ್ಕ ನಂತರ ನಮಗೂ ಗೊತ್ತಾಗಿದೆ. ನಾನು ಅವಳ ಜೊತೆ ಮಾತನಾಡುತ್ತೇನೆ. ಅವಳು ಇನ್ನೊಂದು ಫೋನ್ ಬಳಸುತ್ತಿರುವ ಬಗ್ಗೆ ನಮಗೆ ಯಾರಿಗೂ ಗೊತ್ತಿಲ್ಲ. ಆತನನ್ನು ಇಷ್ಟ ಪಡುತ್ತಿರುವುದು ಗೊತ್ತಿಲ್ಲ. ನಮ್ಮ ಬಾವ ನಮಗೆ ಮನೆ ಮಗನಿದ್ದಂತೆ. ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು. ಆದರೆ ಈ ರೀತಿ ಏಕೆ ಆಯ್ತು ಎನ್ನುವುದು ತಿಳಿಯುತ್ತಿಲ್ಲ. ನಮ್ಮ ಅಕ್ಕನ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಲ್ಲ, ಅಷ್ಟು ಒಳ್ಳೆಯವಳಾಗಿದ್ದಳು. ಇದು ನಮ್ಮ ಕುಟುಂಬದ ವೈಯುಕ್ತಿಕ ಸಮಸ್ಯೆ, ನಾವೇ ಬಗೆಹರಿಸಿಕೊಳ್ತೇವೆ. ನಮ್ಮ ಅಕ್ಕನ ಬಗ್ಗೆ ಯಾರು ಕೆಟ್ಟದಾಗಿ ಕಮೆಂಟ್ ಮಾಡಬೇಡಿ. ಎಲ್ಲಾ ಕುಟುಂಬದಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಇರುತ್ತವೆ. ಕೈಮುಗಿದು ಕೇಳಿಕೊಳ್ಳುತ್ತೇನೆ ಯಾರು ಕೆಟ್ಟದಾಗಿ ಕಮೆಂಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇಡೀ ರಾಜ್ಯಾದ್ಯಂತ ಸದ್ದು ಮಾಡಿದ್ದ ಪ್ರಿಯಾಂಕ ನಾಪತ್ತೆ ಪ್ರಕರಣದ ಅಸಲಿಯತ್ತು ಅವರಿಬ್ಬರ ಬಂಧನದ ಬಳಿಕ ಹೊರಬಿದ್ದಿದೆ. ಇಡೀ ಪ್ರಕರಣ ಭೇದಿಸಿದ ಹಾಸನ ಪೊಲೀಸರ ತಂಡಕ್ಕೆ ಎಸ್ಪಿ ಶುಭನ್ವಿತಾ ಅಭಿನಂದನೆ ಸಲ್ಲಿಸ ಬಹುಮಾನ ಘೋಷಣೆ ಮಾಡಿದ್ದಾರೆ.

ಒಟ್ಟಾರೆಯಾಗಿ ಪ್ರಿಯಕರನೊಂದಿಗೆ ಎಸ್ಕೇಪ್ ಆಗಲು ನಾಟಕ ಸೃಷ್ಟಿಸಿದ್ದ ಪ್ರಿಯಾಂಕ ಕುಟುಂಬ ಮತ್ತು ಪೊಲೀಸ್ ಇಲಾಖೆಗೆ ತಲೆನೋವು ತಂದಿಟ್ಟು, ರಾಜ್ಯದಾದ್ಯಂತ ಸುದ್ದಿಯಾಗಿ ಇದೀಗ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾಳೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ