ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಚಿಕ್ಕ ವಿಮಾನವೊಂದು ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿದ್ದು, ಕಣ್ಣಳತೆಯ ದೂರದಲ್ಲಿ ವಿಮಾನ ಹಾರಾಟ ನಡೆಸುವ ಅಪರೂಪದ ದೃಶ್ಯವನ್ನು ಕಂಡು ಜನರು ಅತ್ಯಂತ ಕುತೂಹಲ ಮತ್ತು ಆತಂಕಗೊಂಡಿದ್ದಾರೆ.
ವಾರದ ಹಿಂದೆ ಕಳಸ, ಕುದುರೆಮುಖ, ಬಾಳೆಹೊನ್ನೂರು ಭಾಗದಲ್ಲಿ ಹಾರಾಟ ನಡೆಸಿದ್ದ ವಿಮಾನ ಕಳೆದ ಮೂರ್ನಾಲ್ಕು ದಿನಗಳಿಂದ ಮೂಡಿಗೆರೆ, ಗೋಣಿಬೀಡು ಸುತ್ತಮುತ್ತಲ ಪ್ರದೇಶಗಳಲ್ಲಿ ಹಾರಾಟ ನಡೆಸುತ್ತಿದೆ.
ಸಾರ್ವಜನಿಕರಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದ್ದ ಈ ವಿಮಾನವು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ವತಿಯಿಂದ ನಡೆಯುತ್ತಿರುವ ವೈಜ್ಞಾನಿಕ ಸಮೀಕ್ಷೆಯ ಭಾಗವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಈ ವಿಶೇಷ ಕಾರ್ಯಾಚರಣೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಗತವಾಗಿರುವ ಖನಿಜ ನಿಕ್ಷೇಪಗಳು, ಭೂಗರ್ಭದ ರಚನೆ ಹಾಗೂ ಜಲ ಸಂಪನ್ಮೂಲಗಳನ್ನು ಪತ್ತೆಹಚ್ಚುವ ಉದ್ದೇಶವನ್ನು ಹೊಂದಿದೆ. ಇದನ್ನು ‘ವಾಯುಗಾಮಿ ಭೂಭೌತಿಕ ಸಮೀಕ್ಷೆ’ ಎಂದು ಕರೆಯಲಾಗುತ್ತಿದ್ದು, ಇದರ ಜವಾಬ್ದಾರಿಯನ್ನು ಮೆಸರ್ಸ್ ಎಕ್ಸ್ಕ್ಯಾಲಿಬರ್ ಮೆಕ್ಫಾರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನೀಡಲಾಗಿದೆ. ಸಮೀಕ್ಷೆಗಾಗಿ ‘ಸೆಸ್ನಾ ಕಾರವಾನ್ 208 ಬಿ’ ಮಾದರಿಯ ವಿಮಾನಗಳನ್ನು ಬಳಸಲಾಗುತ್ತಿದ್ದು, ವಿಮಾನದ ಹಿಂಭಾಗದಲ್ಲಿರುವ ಸೂಜಿಯಂತಹ ಉದ್ದನೆಯ ಸಾಧನವು ಭೂಮಿಯ ಚುಂಬಕ ವ್ಯತ್ಯಾಸಗಳನ್ನು ಅಳೆಯುವ ‘ಮ್ಯಾಗ್ನೆಟೋಮೀಟರ್ ಸ್ಟಿಂಗರ್’ ಆಗಿದೆ.
ಈ ಸಮೀಕ್ಷಾ ಹಾರಾಟವು ಡಿಜಿಸಿಎ ನಿಯಮಾವಳಿಗಳ ಅಡಿಯಲ್ಲಿ ಸಂಪೂರ್ಣವಾಗಿ ಕಾನೂನುಬದ್ಧವಾಗಿ ನಡೆಯುತ್ತಿದೆ. ಆಸ್ಟ್ರೇಲಿಯಾ ಮೂಲದ ಎಕ್ಸ್ ಕ್ಯಾಲಿಬರ್ ಏವಿಯೇಷನ್ ಸಂಸ್ಥೆಯು ವಿದೇಶಿ ಪೈಲಟ್‌ಗಳು ಹಾಗೂ ವಿಮಾನದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.
ಮೆಸರ್ಸ್ ಹಿಮಾಲಯನ್ ಹೆಲಿ ಸರ್ವೀಸಸ್ ಲಿಮಿಟೆಡ್ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದೆ. ಇನ್ನೂ ಅನೇಕ ದಿನಗಳ ಕಾಲ ಈ ವೈಜ್ಞಾನಿಕ ಸಮೀಕ್ಷೆ ಮುಂದುವರಿಯಲಿದ್ದು, ಸಾರ್ವಜನಿಕರು ಯಾವುದೇ ರೀತಿಯ ಭಯಪಡುವ ಅವಶ್ಯಕತೆಯಿಲ್ಲ ಎಂದು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮಾಹಿತಿ ನೀಡಿದೆ.



