ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗೆ ರಾಜ್ಯ ಹೆದ್ದಾರಿ ಕಾಮಗಾರಿ ಕಳೆದ ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿದೆ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ರಮೇಶ್ ಗೌಡ ದೂರಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ಕಾಮಗಾರಿಗೆ 430 ಕೋಟಿ ರೂ ಮಂಜೂರು ಮಾಡಿದ್ದರೂ, ಕೇವಲ ಸರ್ವೇ ಕಾರ್ಯ ನಡೆಸಿದ್ದು ಬಿಟ್ಟರೆ ರಸ್ತೆ ಅಗಲೀಕರಣಕ್ಕೆ ಮುಂದಾಗಿಲ್ಲ. ಮಾರ್ಚ್ ನಂತರ ಮಳೆ ಪ್ರಾರಂಭಗೊಂಡರೆ ಮತ್ತೆ ನಾಲ್ಕೈದು ತಿಂಗಳು ಕಾಯಬೇಕಾಗುತ್ತದೆ. ಹಾಗಾಗಿ 15 ದಿನದೊಳಗೆ ಹೆದ್ದಾರಿ ಪ್ರಾಧಿಕಾರ ಮತ್ತು ಜನಪ್ರತಿನಿಧಿಗಳು ರಸ್ತೆ ಅಗಲೀಕರಣಕ್ಕೆ ಮುಂದಾಗದಿದ್ದರೆ ರಸ್ತೆ ತಡೆಯೊಂದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆಂಪೇಗೌಡ ಒಕ್ಕಲಿಗರ ವೇದಿಕೆ ಕಾರ್ಯದರ್ಶಿ ಪ್ರಸಾದ್ ಬಕ್ಕಿ ಮಾತನಾಡಿ, ಹ್ಯಾಂಡ್ ಪೋಸ್ಟ್ ಮೂಡಿಗೆರೆ ಪಟ್ಟಣಕ್ಕೆ ಕೇವಲ 3 ಕಿ.ಮೀ ದೂರವಿದ್ದು, ವಾಹನ ದಟ್ಟಣೆಯಿಂದ ಗಂಟೆಗಟ್ಟಲು ಪ್ರಯಾಣ ಸಾಗಬೇಕಾಗಿದೆ. ರಾಜ್ಯದಲ್ಲಿ ಮೂಡಿಗೆರೆ ಪಟ್ಟಣವೊಂದೆ ರಸ್ತೆ ಅಗಲೀಕರಣಕ್ಕೆ ಬಾಕಿ ಉಳಿಸಿಕೊಂಡಿರುವುದು. ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು ಎಂದ ಅವರು, ಈ ಭಾಗದಲ್ಲಿ ಕಾಡುಪ್ರಾಣಿಗಳ ಅಟ್ಟಹಾಸದಿಂದ ರೈತರು ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಕಡುಬಗೆರೆಯಲ್ಲಿ ಆನೆ ದಾಳಿಗೆ ಬಲಿಯಾದ ಕಾರ್ಮಿಕ ಮಹಿಳೆಯ ಕುಟುಂಬಕ್ಕೆ ಹೆಚ್ಚಿನ ಮೊತ್ತ ನೀಡಬೇಕು ರೈತರು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಲಾಠಿ ಬೀಸುವ ಮೂಲಕ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹೇಳಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿ ಗೌಡ ಉಪಸ್ಥಿತರಿದ್ದರು.



