ಆಲ್ದೂರು ಪಟ್ಟಣದ ಅಂಬೇಡ್ಕರ್ ಹೋರಾಟ ವೇದಿಕೆ ಮತ್ತು ಪುತ್ಥಳಿ ನಿರ್ಮಾಣ ಸಮಿತಿ ಕಚೇರಿ ಕಾರ್ಯಾಲಯದಲ್ಲಿ ದಲಿತ ಸಂಘಟನೆಗಳ ಮುಖಂಡರುಗಳು ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲು ಮುಂದೆ ಬಂದಿರುವ ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆಯ ಪರವಾಗಿ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಮುಖಂಡರಾದ ಉಮೇಶ್ ದೇವರಹಳ್ಳಿ, ಮಾತನಾಡಿ ಮಲೆನಾಡಿನ ಆವತಿ ಆಲ್ದೂರು ವಸ್ತಾರೆ ಅಂಬಳೆ ಹೋಬಳಿಗಳಲ್ಲಿ ಕಾಫಿ ಎಸ್ಟೇಟ್ ಗಳು ಅತಿ ಹೆಚ್ಚು ಇರುವುದರಿಂದ ಕಾರ್ಮಿಕ ವರ್ಗವೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸುತ್ತಮುತ್ತಲಿನ ಹೋಬಳಿಗಳ ಗಡಿ ಭಾಗದ ಹಳ್ಳಿಗಳ ಜನರು ಮತ್ತು ಹೋಬಳಿಯ ಜನರು ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆಗಾಗಿ ನಿರಂತರವಾಗಿ ಆಗಮಿಸುತ್ತಿರುತ್ತಾರೆ.
ಖಾಸಗಿ ಆಸ್ಪತ್ರೆಗಳು ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಇದ್ದು ಅಲ್ಲಿರುವ ಶುಲ್ಕವನ್ನು ಭರಿಸಲು ಜನಸಾಮಾನ್ಯರು ಬಡವರು ಮತ್ತು ಕೂಲಿ ಕಾರ್ಮಿಕರಿಂದ ಸಾಧ್ಯವಿಲ್ಲ ಮತ್ತು ಸುತ್ತಮುತ್ತಲಿನ ಹೋಬಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರು ಆಲ್ದೂರು ಆರೋಗ್ಯ ಕೇಂದ್ರವು 24×7 ಕಾರ್ಯನಿರ್ವಹಿಸುವ ಆರೋಗ್ಯ ಕೇಂದ್ರವಾಗಿದೆ. ಆದ್ದರಿಂದ ಸಾಕಷ್ಟು ಮಂದಿ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ, ಹೆರಿಗೆ, ಅಪಘಾತ ಮುಂತಾದ ಸಂಧಿಗ್ಧ ಪರಿಸ್ಥಿತಿಗಳಲ್ಲೂ ಇಲ್ಲಿಗೆ ಆಗಮಿಸುತ್ತಾರೆ.
ಇಲ್ಲಿರುವಂತಹ ಕಾರ್ಮಿಕರಿಗಿಂತ ಇತ್ತೀಚಿನ ದಿನಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಅತಿ ಹೆಚ್ಚು ಚಿಕಿತ್ಸೆಗಾಗಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ ಆಲ್ದೂರು ಮೂಲಕವೇ ಶೃಂಗೇರಿ ಹೊರನಾಡು ಸಾಕಷ್ಟು ಪ್ರವಾಸಿ ಕೇಂದ್ರಗಳಿಗೆ ಹೊರ ಜಿಲ್ಲೆಗಳಿಂದ ವಿದೇಶಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಪಘಾತವಾದಾಗ ಆಲ್ದೂರು ವ್ಯಾಪ್ತಿಯಲ್ಲಿ ಇರುವಂತಹ ಇದೇ ಆರೋಗ್ಯ ಕೇಂದ್ರಕ್ಕೆ ಪ್ರಾಥಮಿಕ ಹಂತದ ಚಿಕಿತ್ಸೆಗಾದರೂ ಬರಲೇಬೇಕು.
ಬಂಡವಾಳವನ್ನು ಹಾಕಿ ಬಂಡವಾಳವನ್ನು ನಿರೀಕ್ಷಿಸುವ ಇಂತಹ ಪ್ರಸ್ತುತ ಸಮಾಜದಲ್ಲಿ ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆಯ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಭಟ್ ಇಲ್ಲಿನ ಸಾರ್ವಜನಿಕರ ಮನವಿಗೆ ಓಗೊಟ್ಟು ನೂತನ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಿಕೊಡಲು ಮುಂದೆ ಬಂದಿರುವುದು ಅತ್ಯಂತ ಶ್ಲಾಘನೀಯ ವಿಚಾರ, ಸಮಾಜದ ಅಭಿವೃದ್ಧಿಗೆ ಶಿಕ್ಷಣ ಆರೋಗ್ಯ ಕ್ಷೇತ್ರಗಳು ಅತಿ ಮುಖ್ಯವಾಗಿದ್ದು , ಸರ್ಕಾರ ಮತ್ತು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ವಿದ್ಯಾ ಕಾಫಿ ಸಂಸ್ಥೆಯು ಸುಸಜ್ಜಿತ ಆರೋಗ್ಯ ಕಟ್ಟಡವನ್ನು ನಿರ್ಮಿಸಿ ಕೊಡುತ್ತಿರುವುದು ಎಲ್ಲ ನಾಗರಿಕರಿಗೂ ಸಂತಸವನ್ನು ತಂದಿದ್ದು ಇಂತಹ ಉತ್ತಮ ಸಮಾಜಮುಖಿ ಯೋಜನೆಗೆ ಮುಂದಾಗಿರುವ ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆಗೆ ಅಭಿನಂದನೆಗಳನ್ನು ತಿಳಿಸುತ್ತಾ ದಲಿತ ಸಂಘಟನೆಗಳೆಲ್ಲವೂ ಕೂಡ ಬೆಂಬಲವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.
ದಿನದಲ್ಲಿ ಒಂದು ಗಂಟೆಯಾದರೂ ಆಸ್ಪತ್ರೆ ಕಾಮಗಾರಿ ಬಳಿ ಸಮಯವನ್ನು ವ್ಯಯ ಮಾಡಲು ಕೂಡ ಸಿದ್ಧವಾಗಿದ್ದೇವೆ ಎಂದು ಅವರು ಹೇಳಿದರು.
ದಲಿತ ಸಂಘಟನೆಗಳ ಮುಖಂಡರುಗಳಾದ ತುಡುಕೂರು ಯೋಗೇಶ್, ದೋಣಗುಡಿಗೆ ನಾಗೇಶ್, ವಸಂತ್ ರೈಸ್ ಮಿಲ್ ರೋಡ್, ಮಹೇಶ್ ಕಾರೆಹಟ್ಟಿ,ಸುರೇಶ್ ಭಾಗವಹಿಸಿದ್ದರು.



